Advertisement

Olympics: ಲಾಸ್‌ ಏಂಜಲೀಸ್‌ ಹಾಕಿಯಲ್ಲಿ ಬಂಗಾರ ಗೆಲ್ಲಲು ಪೂರ್ತಿ ನೆರವು: ಕ್ರೀಡಾ ಸಚಿವ

11:01 PM Aug 13, 2024 | Team Udayavani |

ಹೊಸದಿಲ್ಲಿ: ಭಾರತೀಯ ಹಾಕಿಯ ಭವಿಷ್ಯದ ಯೋಜನೆ ಹಾಗೂ 2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಯಾವ ರೀತಿಯ ತಯಾರಿ ಅಗತ್ಯ ಎಂಬುದರ ಕುರಿತು ಚರ್ಚಿಸಲು ತಾನು ಸೆ. 10ರ ಒಳಗೆ ಹಾಕಿ ತಂಡವನ್ನು ಭೇಟಿ ಮಾಡುವುದಾಗಿ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದಾರೆ.

Advertisement

ಪ್ಯಾರಿಸ್‌ನಲ್ಲಿ ಕಂಚು ಗೆದ್ದು ತವರಿಗೆ ಆಗಮಿಸಿದ ಹಾಕಿ ತಂಡದ ದ್ವಿತೀಯ ಬ್ಯಾಚ್‌ನ ಸದಸ್ಯರನ್ನು ಮಂಗಳವಾರ ಸಮ್ಮಾನಿಸಿದ ಸಂದರ್ಭದಲ್ಲಿ ಕ್ರೀಡಾ ಸಚಿವರು ತಮ್ಮ ಯೋಜನೆ ಕುರಿತು ಹೇಳಿದರು. ಸಮ್ಮಾನಿತರಲ್ಲಿ ಗೋಲ್‌ಕೀಪರ್‌ ಶ್ರೀಜೇಶ್‌ ಕೂಡ ಸೇರಿದ್ದರು.

“ನಿಮ್ಮ ಸಾಧನೆ ಅದ್ಭುತ. ನಾವು ಚಿನ್ನ ಗೆಲ್ಲಲಿಲ್ಲ, ಆದರೆ ಇದನ್ನು ಸಮೀಪಿಸಿದೆವು. ಸೆಮಿಫೈನಲ್‌ ಸೋಲಿನ ಬಳಿಕ ತಂಡ ಸ್ಫೂರ್ತಿದಾಯಕವಾಗಿ ಆಡಿ ಕಂಚನ್ನು ಉಳಿಸಿಕೊಂಡಿತು. ಆದರೆ ಹಾದಿ ಇಲ್ಲಿಗೇ ಮುಗಿದಿಲ್ಲ. ನಾನು ಸೆ. 10ರ ಒಳಗೆ ನಿಮ್ಮ ಜತೆ ಕುಳಿತು ಭವಿಷ್ಯದ ಯೋಜನೆ ಕುರಿತು ಚರ್ಚಿಸಲಿದ್ದೇನೆ. ಲಾಸ್‌ ಏಂಜಲೀಸ್‌ನಲ್ಲಿ ಚಿನ್ನದ ಪದಕವೇ ನಮ್ಮ ಅಂತಿಮ ಗುರಿ ಆಗಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ನೀಡಲು ಸರಕಾರ ಸಿದ್ಧವಿದೆ’ ಎಂಬುದಾಗಿ ಮಾಂಡವೀಯ ಹೇಳಿದರು.

ಪ್ಯಾರಿಸ್‌ ಸಾಧನೆ ತೃಪ್ತಿಕರ
“ಪ್ಯಾರಿಸ್‌ನಲ್ಲಿ ನಮ್ಮವರ ಸಾಧನೆ ಬಗ್ಗೆ ತೃಪ್ತಿ ಇದೆ. ಟೋಕಿಯೊದಲ್ಲಿ ನಾವು 7 ಪದಕ ಜಯಿಸಿದ್ದೆವು, ಪ್ಯಾರಿಸ್‌ನಲ್ಲಿ ಲಭಿಸಿದ್ದು ಆರೇ ಪದಕ. ಆದರೆ 4ನೇ ಸ್ಥಾನಕ್ಕೆ ಇಳಿದು 7 ಪದಕಗಳನ್ನು ಕಳೆದುಕೊಳ್ಳಬೇಕಾಯಿತು. ಒಟ್ಟಾರೆಯಾಗಿ ಇದೊಂದು ಉತ್ತಮ ಸಾಧನೆ’ ಎಂದರು.

ಹಾಕಿ ತಂಡದ ಮೊದಲ ಬ್ಯಾಚ್‌ನ ಆಟಗಾರರನ್ನು ಸಚಿವರು ಈ ಮೊದಲು ಸಮ್ಮಾನಿಸಿದ್ದರು. ಪಿ.ಆರ್‌. ಶ್ರೀಜೇಶ್‌ ಸೇರಿದಂತೆ ಬಹುತೇಕ ಆಟಗಾರರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಕಾರಣ ಮಂಗಳವಾರವಷ್ಟೇ ಭಾರತಕ್ಕೆ ಆಗಮಿಸಿದ್ದರು.

Advertisement

ಕೆಂಪುಕೋಟೆಯಲ್ಲಿ ಒಲಿಂಪಿಕ್ಸ್‌  ಕ್ರೀಡಾಳುಗಳು
ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಕ್ರೀಡಾಪಟುಗಳೆಲ್ಲ ಈಗಾಗಲೇ ತವರಿಗೆ ವಾಪಸಾಗಿದ್ದಾರೆ. ಒಟ್ಟು 117 ಕ್ರೀಡಾಳುಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಇವರೆಲ್ಲರಿಗೂ ಆ. 15ರ ಸ್ವಾತಂತ್ರ್ಯ ದಿನದಂದು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಅನಂತರ ಇವರೆಲ್ಲರನ್ನೂ ಪ್ರಧಾನಿ ನರೇಂದ್ರ ಮೋದಿಯವರು ಅಪರಾಹ್ನ ಒಂದು ಗಂಟೆಗೆ ಭೇಟಿ ಯಾಗಿ ಮಾತುಕತೆ ನಡೆಸಲಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳನ್ನು ಪ್ರಧಾನಿಯವರು ಈ ಮೊದಲೇ ಕರೆ ಮಾಡಿ ಅಭಿನಂದಿಸಿದ್ದರು.
ಭಾರತಕ್ಕೆ ಬೆಳ್ಳಿ ಪದಕ ತಂದಿತ್ತ ನೀರಜ್‌ ಚೋಪ್ರಾ ಜರ್ಮನಿಗೆ ತೆರಳಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.