Advertisement

India Open Badminton ಇಂದಿನಿಂದ:ಭಾರತದ ದೊಡ್ಡ ತಂಡದಿಂದ ದೊಡ್ಡ ನಿರೀಕ್ಷೆ

10:52 PM Jan 13, 2025 | Team Udayavani |

ಹೊಸದಿಲ್ಲಿ: “ಇಂಡಿಯಾ ಓಪನ್‌ ಸೂಪರ್‌-750′ ಬ್ಯಾಡ್ಮಿಂಟನ್‌ ಪಂದ್ಯಾವಳಿ ಮಂಗಳವಾರ ಆರಂಭ ವಾಗಲಿದೆ. 950,000 ಡಾಲರ್‌ ಬಹುಮಾನದ ಈ ಕೂಟದ ತಾಣ ಹೊಸದಿಲ್ಲಿಯ “ಕೆ.ಡಿ. ಸಾಧವ್‌ ಇಂಡೋರ್‌ ಸ್ಟೇಡಿಯಂ’.
ಪ್ರಶಸ್ತಿಯ ಬರಗಾಲದಲ್ಲಿರುವ ಭಾರತದ ಪಾಲಿಗೆ ತವರಿನ ಈ ಪಂದ್ಯಾ ವಳಿ ಅತ್ಯಂತ ಮಹತ್ವದ್ದಾಗಿದೆ. ಎಲ್ಲರ ಮೇಲೂ ಭಾರೀ ನಿರೀಕ್ಷೆ ಇರಿಸಲಾಗಿದೆ.

Advertisement

ಈ ಕೂಟದಲ್ಲಿ ವಿಶ್ವದ ಟಾಪ್‌-20 ಆಟಗಾರರಲ್ಲಿ 18 ಮಂದಿ ಪುರುಷರು ಹಾಗೂ 14 ವನಿತೆಯರು ಆಡುತ್ತಿರುವುದೊಂದು ವಿಶೇಷ. ಭಾರತದ ದೊಡ್ಡ ತಂಡ ಪಾಲ್ಗೊಳ್ಳಲಿದ್ದು, 21 ಶಟ್ಲರ್‌ಗಳು ಕಣಕ್ಕೆ ಇಳಿಯುವರು.

ಒಲಿಂಪಿಕ್‌ ಚಾಂಪಿಯನ್‌ಗಳಾದ ವಿಕ್ಟರ್‌ ಅಕ್ಸೆಲ್ಸೆನ್‌, ಅನ್‌ ಸೆ ಯಂಗ್‌, ವಿಶ್ವದ ನಂ.1 ಆಟಗಾರ್ತಿ ಶಿ ಯುಕಿ ಅವರೆಲ್ಲ ಈ ಕೂಟದ ನೆಚ್ಚಿನ ಆಟಗಾರರಾಗಿದ್ದಾರೆ.

ಚಿರಾಗ್‌-ಸಾತ್ವಿಕ್‌ ಭರವಸೆ
ಡಬಲ್ಸ್‌ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮೇಲೆ ಮತ್ತೂಮ್ಮೆ ನಿರೀಕ್ಷೆಯ ಭಾರ ಬಿದ್ದಿದೆ. ಇವರು 2022ರ ಚಾಂಪಿಯನ್‌ ಆಗಿದ್ದರು. ಅಂದು ಲಕ್ಷ್ಯ ಸೇನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದು ಸುದ್ದಿಯಾಗಿದ್ದರು.

ಸಾತ್ವಿಕ್‌-ಚಿರಾಗ್‌ 2024ರ ಸೀಸನ್‌ನಲ್ಲಿ ಚೀನ ಮಾಸ್ಟರ್, ಮಲೇಷ್ಯಾ ಓಪನ್‌ ಪಂದ್ಯಾವಳಿಯ ಸೆಮಿಫೈನಲ್‌ ತನಕ ಸಾಗಿದ್ದರು. ಮೊದಲ ಸುತ್ತಿನಲ್ಲಿ ಮಲೇಷ್ಯಾದ ವೀ ಚೋಂಗ್‌ ಮಾನ್‌-ಕೈ ವುನ್‌ ಟೀ ಅವರನ್ನು ಎದುರಿಸುವರು. ಮುಂದುವರಿದರೆ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಚೀನದ ಲಿಯಾಂಗ್‌ ವೀಕೆಂಗ್‌-ವಾಂಗ್‌ ಚಾಂಗ್‌ ಸವಾಲು ಎದುರಾಗಬಹುದು.

Advertisement

ಒಲಿಂಪಿಕ್‌ ಕಂಚಿನ ಪದಕ ಗೆದ್ದ ಮಲೇಷ್ಯಾದ ಆರನ್‌ ಚಿಯ-ಸೋಹ್‌ ವೂಯಿ ಯಿಕ್‌ ಕೂಡ ಸ್ಪರ್ಧೆಯಲ್ಲಿದ್ದಾರೆ. ಮತ್ತೂಂದು ನೆಚ್ಚಿನ ಜೋಡಿಯೆಂದರೆ ಇಂಡೋನೇಷ್ಯಾದ ಫ‌ಜರ್‌ ಅಲ್‌ಫಿಯಾನ್‌-ಮುಹಮ್ಮದ್‌ ರಿಯಾನ್‌ ಅರ್ದಿಯಾಂತೊ.

ಅಷ್ಟೇನೂ ಫಾರ್ಮ್ನಲ್ಲಿಲ್ಲದ ಎಚ್‌.ಎಸ್‌. ಪ್ರಣಯ್‌ಗೆ ಲಯ ಕಂಡುಕೊಳ್ಳಲು ಇದೊಂದು ಉತ್ತಮ ಅವಕಾಶ. ಚೈನೀಸ್‌ ತೈಪೆಯ ಲೀ ಯಾಂಗ್‌ ಸು ಇವರ ಮೊದಲ ಸುತ್ತಿನ ಎದುರಾಳಿ. ದ್ವಿತೀಯ ಸುತ್ತಿನಲ್ಲಿ ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿ ಎದುರಾಗುವ ಸಾಧ್ಯತೆ ಇದೆ.

ಪಿ.ವಿ. ಸಿಂಧು ಕಣಕ್ಕೆ
ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನೆತ್ತಿ ಲಯಕ್ಕೆ ಮರಳಿರುವ ಪಿ.ವಿ. ಸಿಂಧು ಮೇಲೂ ದೊಡ್ಡ ನಿರೀಕ್ಷೆ ಇದೆ. ದಾಂಪತ್ಯ ಜೀವನಕ್ಕೆ ಅಡಿಯಿರಿಸಿದ ಕಾರಣ ವರ್ಷಾರಂಭದ “ಮಲೇಷ್ಯಾ ಓಪನ್‌’ ಕೂಟದಿಂದ ಹೊರಗುಳಿದಿದ್ದರು. ಮೊದಲ ಸುತ್ತಿನಲ್ಲಿ ಭಾರತದವರೇ ಆದ ಅನುಪಮಾ ಉಪಾಧ್ಯಾಯ ಅವರನ್ನು ಎದುರಿಸಲಿದ್ದಾರೆ. ಗೆದ್ದರೆ ಜಪಾನಿನ ಉದಯೋನ್ಮುಖ ಆಟಗಾರ್ತಿ ಟೊಮೊಕಾ ಮಿಯಾಝಾಕಿ ವಿರುದ್ಧ ಸೆಣಸಲಿದ್ದಾರೆ. ಸಿಂಧು 2017ರಲ್ಲಿ ಕೊನೆಯ ಸಲ ಇಲ್ಲಿ ಚಾಂಪಿಯನ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.