Advertisement

ಹಳೇ ಮೊಬೈಲನ್ನು  ಕರಗಿಸಿ ಒಲಿಂಪಿಕ್‌ ಪದಕ!

03:45 AM Feb 03, 2017 | Team Udayavani |

ಟೋಕಿಯೊ: ಜಗತ್ತಿಗೆ ತಂತ್ರಜ್ಞಾನದ ಪಾಠ ಹೇಳಿದ ಜಪಾನ್‌ನ ಯಾವುದೇ ಮನೆಗಳಲ್ಲಿಯೂ ಹಳೇ ಮೊಬೈಲ್‌ಗ‌ಳ ಸದ್ದಿರುವುದಿಲ್ಲ. ಹತ್ತಾರು ವರ್ಷಗಳ ಹಿಂದಿನ ಲ್ಯಾಪ್‌ಟಾಪ್‌ಗಳೂ ಕಾಣಿಸುವುದಿಲ್ಲ.  ಟಿವಿ, ರೆಫ್ರೀಜರೇಟರುಗಳೂ ಜಾಗ ಖಾಲಿ ಮಾಡಲಿವೆ!  ಅವುಗಳೆಲ್ಲವನ್ನೂ ಕರಗಿಸಿ, 2020ರ ಒಲಿಂಪಿಕ್‌ನ ವಿಜೇತರ ಕೊರಳಿಗೆ ಪದಕ ಹಾಕಲು ನಿರ್ಧರಿಸಿದೆ!

Advertisement

ಹೌದು, 2020ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್‌ ನಡೆಯಲಿದ್ದು, ವಿಶ್ವವೇ ಪಾಲ್ಗೊಳ್ಳುವ ಈ ಬೃಹತ್‌ ಕ್ರೀಡಾಕೂಟಕ್ಕೆ ಏನಿಲ್ಲವೆಂದರೂ 5000 ಪದಕಗಳು ಬೇಕಾಗುತ್ತವೆ. ಈಗಾಗಲೇ ಇದಕ್ಕೆ 40 ಕೆಜಿ ಚಿನ್ನ, 4920 ಕೆಜಿ ಬೆಳ್ಳಿ ಮತ್ತು 2944 ಕೆಜಿ ಕಂಚನ್ನು ಹೊಂದಿಸಲಾಗಿದೆ. ಆದರೆ, ಆ ಪ್ರಮಾಣದ ಪದಕಗಳ ತಯಾರಿಕೆಗೆ ಇನ್ನಷ್ಟು ಚಿನ್ನ, ಬೆಳ್ಳಿ, ಕಂಚನ್ನು ಹೊಂದಿಸಲು ಈ ಪುಟ್ಟ ದೇಶದಲ್ಲಿ ಸಾಕಷ್ಟು ಸಂಪತ್ತಿನ ಕೊರತೆಯಿದೆ. ಹೊರದೇಶಗಳಿಂದ ತರಿಸಿಕೊಂಡು, ಅದೇ ಲೋಹವನ್ನು ಆ ದೇಶಗಳ ಕ್ರೀಡಾಪಟುಗಳಿಗೆ ನೀಡಿ ಗೌರವಿಸುವ ಬದಲು, ಇಲ್ಲೂ “ಮೇಡ್‌ ಇನ್‌ ಜಪಾನ್‌’ ನೀತಿ ಅನುಸರಿಸಲು ಅಲ್ಲಿನ ಒಲಿಂಪಿಕ್‌ ಆಯೋಜನಾ ಸಮಿತಿ ನಿರ್ಧರಿಸಿದೆ. ಪರಿಸರಸ್ನೇಹಿ ಒಲಿಂಪಿಕ್‌ ಆಯೋಜಿಸುವ ಉದ್ದೇಶ ಸಂಘಟಕರದ್ದು.  

ಹಳೇ ಮಾಲು ಕೊಡಿ: ಉಪಯೋಗಕ್ಕೆ ಬಾರದ ಹಳೇ ಇಲೆಕ್ಟ್ರಾನಿಕ್‌ ಉಪಕರಣ (ಇ- ವೇಸ್ಟ್‌) ಪಟ್ಟಿಯಲ್ಲಿ, 2000 ನೇ ಇಸ್ವಿಯ ಹಿಂದಿನ ಡಿಜಿಟಲ್‌ ಕ್ಯಾಮೆರಾ, ಹಳೇ ಮೊಬೈಲು, ಲ್ಯಾಪ್‌ಟಾಪ್‌, ಗೇಮ್‌ ಯೂನಿಟ್‌, ಹಳೇ ಟಿವಿ- ಫ್ರಿಡುjಗಳು ಇದ್ದು ಸಾರ್ವಜನಿಕರು ಇದನ್ನು ಸರಕಾರಕ್ಕೆ ನೀಡಬಹುದು. ಅಲ್ಲದೆ, ದೇಶಾದ್ಯಂತ ಇರುವ 2,400ಕ್ಕೂ ಅಧಿಕ ಎಲೆಕ್ಟ್ರಾನಿಕ್‌ ಅಂಗಡಿಗಳಿಂದಲೂ ಹಳೇ ಉಪಕರಣಗಳನ್ನು ತರಿಸಿಕೊಳ್ಳಲು ಜಪಾನಿನ ಪರಿಸರ ನೈರ್ಮಲೀಕಣ ಕೇಂದ್ರ ಚಿಂತಿಸಿದೆ.

ಹೇಗೆ ತಯಾರಿಸ್ತಾರೆ?: ಈ ಎಲ್ಲ ಹಳೇ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಪ್ಲಾಟಿನಂ, ಪಲ್ಲಾಡಿಯಂ, ಚಿನ್ನ, ಬೆಳ್ಳಿ, ಲಿಥಿಯಂ, ಕೊಬಾಲ್ಟ್, ನಿಕ್ಕಲ್‌, ಕಬ್ಬಿಣ, ಸತು ಸೇರಿದಂತೆ ಅತ್ಯಮೂಲ್ಯ ಹಾಗೂ ಕೆಲವು ಅಪರೂಪದ ಲೋಹಗಳಿವೆ. ಇವುಗಳನ್ನೇ ಕರಗಿಸಿ, ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳ ತಯಾರಿಕೆ ವೇಳೆ ಮಿಶ್ರಣ ಮಾಡುತ್ತಾರೆ.

ಈ ಲೋಹ ನವೀಕರಣ ಮಾದರಿಯನ್ನು ಮೊದಲು ಅನುಸರಿಸಿದ್ದು ಕೇವಲ ಜಪಾನ್‌ ಅಲ್ಲ. ಈ ಹಿಂದೆ ರಿಯೋ ಒಲಿಂಪಿಕ್‌ನಲ್ಲೂ ಇದೇ ಮಾದರಿ ಅನುಸರಿಸಲಾಗಿತ್ತು. ಆದರೆ, ಅಲ್ಲಿ ಈ ಲೋಹಗಳನ್ನು ಬೆಳ್ಳಿ ಮತ್ತು ಕಂಚಿನ ಪದಕಗಳ ತಯಾರಿಕೆಯಲ್ಲಿ ಬೆರೆಸಲಾಗಿತ್ತು. ಅಲ್ಲಿ ಹೀಗೆ ನವೀಕರಿಸಿದ ಲೋಹವನ್ನು ಶೇ.30ರಷ್ಟು ಬೆರೆಸಲಾಗಿತ್ತು. ಜಪಾನ್‌ ಈಗ ಚಿನ್ನದ ಪದಕದಲ್ಲೂ ಈ ಲೋಹಗಳನ್ನು ಸೇರಿಸಲಿದ್ದು, ನವೀಕರಿಸಿದ ಲೋಹದ ಪ್ರಮಾಣವನ್ನೂ ಹೆಚ್ಚಿಸಲು ಹೊರಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next