Advertisement

ಮಗಳಿಗಾಗಿ ಆ್ಯತ್ಲೆಟಿಕ್ಸ್‌  ತೊರೆದ ಒಲಿಂಪಿಯನ್‌ ಸಹನಾ ಕುಮಾರಿ

06:35 AM Nov 01, 2017 | Team Udayavani |

ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿದ್ದ ರಾಜ್ಯದ ಹೈಜಂಪ್‌ ತಾರೆ ಸಹನಾ ಕುಮಾರಿ ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ. ಈ ವಿಷಯವನ್ನು “ಉದಯವಾಣಿಗೆ’ ನೀಡಿದ ವಿಶೇಷ ಸಂದರ್ಶನದಲ್ಲಿ ಸಹನಾ ಕುಮಾರಿ ತಿಳಿಸಿದ್ದಾರೆ. ಮುಂದೆ ಕಾಮನ್ವೆಲ್ತ್‌, ಏಶ್ಯಾಡ್‌ ಗೇಮ್ಸ್‌ ಕೂಟಗಳಿವೆ. ಆದರೆ ಸಹನಾ ಅದೆಲ್ಲವನ್ನೂ ಬಿಟ್ಟು ಮಗಳ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ. 

Advertisement

ಇದಕ್ಕೆ ಕಾರಣ, ಇತ್ತೀಚೆಗೆ ಅವರ ಮಗಳು ಪಾವನಾ ನಾಗರಾಜ್‌ ರಾಜ್ಯ ಮಟ್ಟದ ಕಿರಿಯರ ಕೂಟದ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು. ಇದನ್ನು ನೋಡಿದ ಸಹನಾ ಮುಂದೆ ತಾನು ಮುಂದುವರಿಯುವುದಕ್ಕಿಂತ ಮಗಳನ್ನು ಬೆಳೆಸುವುದರಲ್ಲಿ ಹೆಚ್ಚು ಅರ್ಥವಿದೆ ಅಂದುಕೊಂಡಿದ್ದಾರೆ. ಹೀಗಾಗಿ ಅವರು ಟ್ರ್ಯಾಕ್‌ ಸ್ಪರ್ಧೆಗಳಿಗೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ್ದಾರೆ.

ಅಮ್ಮನ ದಾರಿ ಹಿಡಿದ ಪಾವನಾ
ಸಹನಾ ಕುಮಾರಿಗೆ ಸದ್ಯ 35 ವರ್ಷ. ಅವರು ಕಾಮನ್ವೆಲ್ತ್‌, ಏಶ್ಯಾಡ್‌ ಕ್ರೀಡಾಕೂಟದ ಬಳಿಕ ವಿದಾಯ ಹೇಳುವ ಅವಕಾಶವಿತ್ತು. ಆದರೆ ಸಹನಾ ಹಾಗೆ ಮಾಡಲಿಲ್ಲ. ಅವರು ಹೇಳುವುದೇ ಬೇರೆ… “ನನಗೆ ಮುಂದಿನ ಕಾಮನ್ವೆಲ್ತ್‌, ಏಶ್ಯಾಡ್‌ ಕೂಟಗಳಲ್ಲಿ ಪದಕ ಗೆಲ್ಲುವ ಅವಕಾಶ ಇತ್ತು. ಆದರೆ ನನಗಿಂತ ನನ್ನ ಮಗಳ ಭವಿಷ್ಯದ ಬಗ್ಗೆಯೇ ಹೆಚ್ಚು ಚಿಂತೆ ಮಾಡಿದ್ದೇನೆ. ಅವಳ ಭವಿಷ್ಯ ನನಗೆ ಮುಖ್ಯ. ಹಾಗಾಗಿ ಕೂಟ ತ್ಯಜಿಸಿ ಮುಂದೆ ಮಗಳಿಗೆ ಅವಳ ಸಾಧನೆಗಾಗಿ ಕೋಚಿಂಗ್‌ಗೆ ಮೀಸಲಿರಿಸಲು ನಿರ್ಧರಿಸಿದ್ದೇನೆ. ಮಗಳು ಪಾವನಾ ವಿಜಯನಗರದ ಆರ್‌ಎನ್‌ಎಸ್‌ ವಿದ್ಯಾನಿಕೇತನ್‌ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಶಾಲೆಯಿಂದ ಅವಳಿಗೆ ಎಲ್ಲ ನೆರವೂ ಸಿಕ್ಕಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಕ್ರೀಡಾಂಗಣದಲ್ಲಿ ಮಗಳಿಗೆ ದಿನನಿತ್ಯ ತರಬೇತಿ ನೀಡುತ್ತಿದ್ದೇನೆ. ಮಗಳು ಅಂದುಕೊಂಡಂತೆ ಸಾಧನೆ ಮಾಡುತ್ತಿದ್ದಾಳೆ. ಮೊದಲ ಪ್ರಯತ್ನದಲ್ಲಿ ಅವಳು ರಾಜ್ಯ ಮಟ್ಟದ ಕೂಟದಲ್ಲಿ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ. ಇದೆಲ್ಲದರ ಬಳಿಕ ಕ್ರೀಡೆಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ…’ ಎಂದರು.

ಸಹನಾ ಕುಮಾರಿ ಪತಿ ನಾಗರಾಜ್‌ ಕೂಡ ರಾಷ್ಟ್ರೀಯ ಆ್ಯತ್ಲೀಟ್‌ ಆಗಿದ್ದಾರೆ. ಹೀಗಾಗಿ ಅವರೂ ಮಗಳಿಗೆ ತರಬೇತಿ ನೀಡಲು ಸಹಕಾರ ನೀಡುತ್ತಿದ್ದಾರೆ. ಪತಿ ಪತ್ನಿಯರಿಬ್ಬರಿಗೂ ರೈಲ್ವೇಸ್‌ ಉದ್ಯೋ ಗಿಗಳಾಗಿದ್ದು ಮಗಳ ಭವ್ಯ ಭವಿಷ್ಯದ ಬಗ್ಗೆ ನೂರಾರು ಕನಸು ಹೊತ್ತಿದ್ದಾರೆ.

ರಾಷ್ಟ್ರೀಯ ದಾಖಲೆ 
ಸಹನಾ ಮೂಲತಃ ಮಂಗಳೂರಿನವರು. ಅವರಿಗೆ 35 ವರ್ಷ. 2012ರಲ್ಲಿ ಸಹನಾ ಕುಮಾರಿ ಹೈದರಾಬಾದ್‌ನಲ್ಲಿ ನಡೆದ ಅಂತಾರಾಜ್ಯ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಕೂಟದಲ್ಲಿ 1.92 ಮೀ. ಎತ್ತರಕ್ಕೆ ಜಿಗಿದು ರಾಷ್ಟ್ರೀಯ ಕೂಟ ದಾಖಲೆ ಬರೆದಿದ್ದರು. ಇದುವರೆಗೆ ಅವರ ದಾಖಲೆ ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸಹನಾ ಭಾಗವಹಿಸಿದ್ದು ರಾಜ್ಯದ ಹೆಮ್ಮೆ.

Advertisement

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next