Advertisement
ಮಾರಾಟ ಅಥವಾ ಇತರ ವ್ಯವಹಾರ ಸಂಬಂಧಿ ಜಾಹೀರಾತು ಹಾಕಿದ ಅನಂತರ ಅದಕ್ಕೆ ಪ್ರತಿಕ್ರಿಯಿಸುವ ಕೆಲವು ಗ್ರಾಹಕ ಸೋಗಿನ ವಂಚಕರು ಜಾಹೀರಾತು ಹಾಕಿದವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದಾರೆ.ಮಹಿಳೆಯೋರ್ವರು ಗ್ರೈಂಡರ್ ಮಾರಲಿಚ್ಛಿಸಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿದ್ದರು. ವ್ಯಕ್ತಿಯೋರ್ವ ಈ ಬಗ್ಗೆ ಒಎಲ್‌ಎಕ್ಸ್‌ನಲ್ಲಿಯೇ ಚಾಟ್ ಮಾಡಿ ವಾಟ್ಸ್‌ಆ್ಯಪ್ ನಂಬರ್ ಪಡೆದುಕೊಂಡ. ಹಣ ಪಾವತಿಗಾಗಿ ವಾಟ್ಸ್‌ಆ್ಯಪ್‌ಗೆ ಕ್ಯುಆರ್‌ಕೋಡ್ ಕಳುಹಿಸುವುದಾಗಿ ತಿಳಿಸಿ ಕ್ಯುಆರ್‌ಕೋಡ್ ಕಳುಹಿಸಿದ. ಅದನ್ನು ನಂಬಿದ ಮಹಿಳೆ ಕ್ಯುಆರ್‌ಕೋಡ್ ಸ್ಕ್ಯಾನ್ ಮಾಡಲು ಪ್ರಯತ್ನಿಸಿದರು. ಸ್ಕ್ಯಾನ್ ಆಗದಿದ್ದಾಗ ಪುತ್ರನ ಮೊಬೈಲ್‌ನಲ್ಲಿ ಮಾಡಿದರು. ಕೆಲವು ದಿನಗಳ ಅನಂತರ ಮಹಿಳೆಯ ಕೆನರಾ ಬ್ಯಾಂಕ್ ಖಾತೆಯಿಂದ 3,800 ರೂ., ಪುತ್ರನ ಐಸಿಐಸಿಐ ಬ್ಯಾಂಕ್ ಖಾತೆಯಿಂದ 60,850 ರೂ. ಸೇರಿದಂತೆ ಒಟ್ಟು 64,650 ರೂ. ವಂಚಕರ ಖಾತೆಗೆ ವರ್ಗಾವಣೆಯಾಗಿತ್ತು!
25,000 ರೂ. ಕಳೆದುಕೊಂಡರು
ವ್ಯಕ್ತಿಯೋರ್ವರು ಮಂಗಳೂರಿನ ತನ್ನ ಫ್ಲ್ಯಾಟನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ಒಎಲ್ ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದರು. ವ್ಯಕ್ತಿಯೋರ್ವ ಆತನನ್ನು ಅಮಿತ್ ಕುಮಾರ್ (7576090504), ಸಿಐಎಸ್‌ಎಫ್ ಎಎಸ್‌ಐ ಎಂದು ಪರಿಚಯಿಸಿಕೊಂಡು ತನಗೆ ಶೀಘ್ರದಲ್ಲಿ ಮಂಗಳೂರಿಗೆ ವರ್ಗಾವಣೆಯಾಗಲಿದ್ದು ಬಾಡಿಗೆಗೆ ಫ್ಲ್ಯಾಟ್ ಬೇಕು ಎಂದ. ಮಾಲಕರು ನಿಗದಿ ಪಡಿ ಸಿದ 1 ಲ.ರೂ. ಡಿಪಾಸಿಟ್‌ನಲ್ಲಿ 50,000 ರೂ.ಗಳನ್ನು ಮುಂಗಡ ನೀಡುವುದಾಗಿ ಹೇಳಿದ. ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿಗಳನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ. ಅನಂತರ ಹರ್ಪಾಲ್ ಸಿಂಗ್ (9337163312) ಎಂಬಾತ ಫ್ಲ್ಯಾಟ್ ಮಾಲಕರಿಗೆ ಕರೆ ಮಾಡಿ ಹಣ ಪಾವತಿಯ ಕುರಿತು ಮಾತನಾಡಿದ. ಫೋನ್ ಪೇ ಮೂಲಕ ಪಾವತಿಸಲು ಸೂಚಿಸಿದ. ಮಾಲಕರೊಂದಿಗೆ ಮಾತನಾಡುತ್ತ ಅವರ ಫೋನ್ ಪೇಯನ್ನು ತೆರೆಯಲು ಹೇಳಿ ಬಳಿಕ ಹಲವು ಸೂಚನೆಗಳನ್ನು ನೀಡುತ್ತ ಹೋದ. ಮಾಲಕರು ಆತ ಹೇಳಿದಂತೆ ನಮೂದಿಸುತ್ತ ಹೋದರು. ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯಿಂದ 25,000 ರೂ. ಬೇರೆ ಯಾವುದೋ ಖಾತೆಗೆ ವರ್ಗಾವಣೆಯಾದ ಸಂದೇಶ ಬಂತು. ಸ್ಕ್ರೀನ್ ಶಾಟ್ ಕಳುಹಿಸಿಲು ಹೇಳಿದ !
ಖಾತೆಯಿಂದ 25,000 ರೂ. ಕಡಿತವಾದ ಕೂಡಲೇ ಫ್ಲ್ಯಾಟ್ ಮಾಲಕರು ಹರ್ಪಾಲ್ ಸಿಂಗ್‌ಗೆ ವಿಷಯ ತಿಳಿಸಿದರು. ಆತ “ಹಣ ಕಡಿತದ ಬಗ್ಗೆ ಬಂದ ಮೆಸೇಜ್‌ನ ಸ್ಕ್ರೀನ್ ಶಾಟ್ ಕಳುಹಿಸಿ. ಮತ್ತೆ 25,000 ರೂ. ಕಳುಹಿಸಿ. ಎಲ್ಲವನ್ನೂ ವಾಪಸ್ ಮಾಡಿ ಅನಂತರ ಹೆಚ್ಚುವರಿ ಹಣ ಪಾವತಿ ಮಾಡುತ್ತೇವೆ’ ಎಂದು ಉತ್ತರಿಸಿದ.
Related Articles
Advertisement
ಸಂಜೆ ವೇಳೆ ಕರೆಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಂಚಕರು ಸಂಜೆ ಬ್ಯಾಂಕ್ ಕಚೇರಿಗಳು ಮುಚ್ಚಿದ ಅನಂತರವೇ ಕಾರ್ಯಾಚರಿಸುತ್ತಾರೆ. ವಂಚನೆಗೆ ಒಳಗಾದವರು ಕೂಡಲೇ ಬ್ಯಾಂಕನ್ನು ಸಂಪರ್ಕಿಸ ಬಾರದು ಎಂಬುದು ಉದ್ದೇಶ. ಅಲ್ಲದೆ ಸೈನಿಕರು,ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡರೆ ಯಾರೂ ಸಂಶಯ ದಿಂದ ವ್ಯವಹರಿಸುವುದಿಲ್ಲ ಎಂಬ ಭರವಸೆ ವಂಚಕರದ್ದು. ಒಟಿಪಿ ಇಲ್ಲದೆಯೇ ಹಣ ವರ್ಗಾವಣೆ
ಫೋನ್ ಪೇ, ಗೂಗಲ್ ಪೇ ಮೊದಲಾದ ಡಿಜಿಟಲ್ ಪೇಗಳಲ್ಲಿ ಒಟಿಪಿ ಇಲ್ಲದೆ ಹಣ ವರ್ಗಾಯಿಸಿಕೊಳ್ಳಬಹುದು. ಆದರೆ ಯುಪಿಐ ಅಗತ್ಯ. ವಂಚಕರು ನಮಗೆ ಗೊತ್ತಾಗದಂತೆಯೇ ನಮ್ಮಿಂದ ಹಣ ವರ್ಗಾಯಿಸಿಕೊಳ್ಳುತ್ತಾರೆ. ವಂಚಕರು “ರಿಕ್ವೆಸ್ಟ್’ ಎಂದು ನಿರ್ದಿಷ್ಟ ಮೊತ್ತವನ್ನು ನಮೂದಿಸಿ ಕಳುಹಿಸುತ್ತಾರೆ. ಆ ಮೊತ್ತ ನಮ್ಮ ಖಾತೆಗೆ ಜಮೆಯಾಗಬೇಕಾದರೆ ಯುಪಿಐ ಹಾಕುವಂತೆ ತಿಳಿಸುತ್ತಾರೆ. ಒಂದು ವೇಳೆ ಅದನ್ನು ಪ್ರಸ್ ಮಾಡಿ ಯುಪಿಐ ಹಾಕಿದರೆ ನಮ್ಮ ಹಣವನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದಿರಬೇಕು. ಇದು ತೀರಾ ಹೊಸ ವಂಚನಾ ವಿಧಾನವಲ್ಲ. ಆದರೆ ಅನೇಕ ಮಂದಿ ಈ ರೀತಿಯ ವಂಚನೆಗೊಳಗಾಗುತ್ತಿದ್ದಾರೆ ಎಂದು ಸೈಬರ್ ಭದ್ರತಾ ತಜ್ಞರು ತಿಳಿಸಿದ್ದಾರೆ.