Advertisement

ಓಲೀ ಪೋಪ್‌ ಸೆಂಚುರಿ ಪವರ್‌: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ಹೋರಾಟ

11:23 PM Jan 27, 2024 | Team Udayavani |

ಹೈದರಾಬಾದ್‌: ವನ್‌ಡೌನ್‌ ಬ್ಯಾಟರ್‌ ಓಲೀ ಪೋಪ್‌ ಬಾರಿಸಿದ ಅಜೇಯ 148 ರನ್‌ ಸಾಹಸದಿಂದ ಹೈದರಾಬಾದ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ದಿಟ್ಟ ಹೋರಾಟವೊಂದನ್ನು ಸಂಘಟಿಸಿದೆ. 190 ರನ್‌ ಹಿನ್ನಡೆ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಆಂಗ್ಲರ ಪಡೆ 3ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 316 ರನ್‌ ಗಳಿಸಿದೆ. ಸದ್ಯದ ಮುನ್ನಡೆ 126 ರನ್‌.

Advertisement

ಮಿಡ್ಲ್ಸೆಕ್ಸ್‌ನ ಬಲಗೈ ಬ್ಯಾಟರ್‌ ಒಲಿವರ್‌ ಜಾನಿ ಡಗ್ಲಾಸ್‌ ಪೋಪ್‌ 148 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 10ನೇ ಓವರ್‌ನಲ್ಲಿ ಕ್ರೀಸ್‌ ಇಳಿದ ಪೋಪ್‌ ಭಾರತದ 67 ಓವರ್‌ಗಳ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿ ನಿಂತಿದ್ದಾರೆ. ತ್ರಿವಳಿ ಸ್ಪಿನ್‌ ದಾಳಿಗೆ ಯಾವುದೇ ರೀತಿಯಲ್ಲಿ ಅಳುಕದೆ, ಬಗ್ಗದೆ ಕ್ರೀಸ್‌ ಆಕ್ರಮಿಸಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದ್ದಾರೆ. ರವಿವಾರದ ಆಟದಲ್ಲಿ ಇವರು ಮುನ್ನಡೆಯನ್ನು ಎಲ್ಲಿಯ ತನಕ ವಿಸ್ತರಿಸಬಹುದು ಎಂಬುದರ ಮೇಲೆ ಇಂಗ್ಲೆಂಡ್‌ ಭವಿಷ್ಯ ಅಡಗಿದೆ.

ಎಚ್ಚರಿಕೆಯ ಆರಂಭ
ಬೆನ್‌ ಡಕೆಟ್‌ (47) ಮತ್ತು ಜಾಕ್‌ ಕ್ರಾಲಿ (31) ದ್ವಿತೀಯ ಸರದಿಯನ್ನು ಬಹಳ ಎಚ್ಚರಿಕೆಯಿಂದ ಆರಂಭಿಸಿ ದರು. 9.2 ಓವರ್‌ಗಳಲ್ಲಿ 45 ರನ್‌ ಒಟ್ಟುಗೂಡಿಸಿದರು. ಅಶ್ವಿ‌ನ್‌ ಈ ಜೋಡಿ ಯನ್ನು ಮುರಿದರು. ಡಕೆಟ್‌-ಪೋಪ್‌ ಜತೆಯಾಟ 113ರ ತನಕ ಸಾಗಿತು. ಡಕೆಟ್‌ ಅವರನ್ನು ಬೌಲ್ಡ್‌ ಮಾಡಿದ ಬುಮ್ರಾ ದೊಡ್ಡ ಯಶಸ್ಸು ತಂದಿತ್ತರು.

ಈ ಹಂತದಲ್ಲಿ ಇಂಗ್ಲೆಂಡ್‌ ಕುಸಿತ ಕ್ಕೊಳಗಾಯಿತು. ಜೋ ರೂಟ್‌ (2), ಜಾನಿ ಬೇರ್‌ಸ್ಟೊ (10), ನಾಯಕ ಬೆನ್‌ ಸ್ಟೋಕ್ಸ್‌ (6) ಅವರನ್ನು ಬೇಗನೇ ಪೆವಿಲಿಯನ್‌ಗೆ ರವಾನಿಸುವಲ್ಲಿ ನಮ್ಮ ವರು ಯಶಸ್ವಿಯಾದರು. ಭಾರತ ಆಗ ನಿಚ್ಚಳ ಮೇಲುಗೈ ಹೊಂದಿತ್ತು. ಆದರೆ ಓಲೀ ಪೋಪ್‌ ಕ್ರೀಸಿಗೆ ಅಂಟಿಕೊಂಡು ಪಂದ್ಯದ ಗತಿಯನ್ನೇ ಬದಲಿಸಿದರು. 163ಕ್ಕೆ 5 ವಿಕೆಟ್‌ ಉರುಳಿದರೆ, ಬಳಿಕ ಒಂದೇ ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ 153 ರನ್‌ ಪೇರಿಸಿ ಪಂದ್ಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. 39ನೇ ಟೆಸ್ಟ್‌ ಆಡುತ್ತಿರುವ ಪೋಪ್‌ ಹೊಡೆದ 5ನೇ ಶತಕ ಇದಾಗಿದೆ. 208 ಎಸೆತ ಎದು ರಿಸಿದ್ದು, 17 ಬೌಂಡರಿ ಬಾರಿಸಿದ್ದಾರೆ.

ಪೋಪ್‌ಗೆ ಕೀಪರ್‌ ಬೆನ್‌ ಫೋಕ್ಸ್‌ (34) ಉತ್ತಮ ಬೆಂಬಲ ನೀಡಿದರು. 6ನೇ ವಿಕೆಟಿಗೆ 112 ರನ್‌ ಹರಿದು ಬಂತು. ಫೋಕ್ಸ್‌ 6ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡ ಬಳಿಕ ಪೋಪ್‌-ರೇಹಾನ್‌ ಅಹ್ಮದ್‌ 16 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಶ್ವಿ‌ನ್‌, ಬುಮ್ರಾ ತಲಾ 2, ಪಟೇಲ್‌, ಜಡೇಜ ಒಂದೊಂದು ವಿಕೆಟ್‌ ಉರುಳಿಸಿದ್ದಾರೆ.

Advertisement

ಜಡೇಜಾಗೂ ಸೆಂಚುರಿ ಮಿಸ್‌
ಇಂಗ್ಲೆಂಡ್‌ನ‌ 246 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡುತ್ತಿದ್ದ ಭಾರತ 7 ವಿಕೆಟಿಗೆ 421 ರನ್‌ ಗಳಿಸಿ ದ್ವಿತೀಯ ದಿನದಾಟ ಮುಗಿಸಿತ್ತು. ಆಗ ರವೀಂದ್ರ ಜಡೇಜ 81 ರನ್‌ ಮಾಡಿ ಆಡುತ್ತಿದ್ದರು. ಆದರೆ ಶನಿವಾರ 15 ರನ್‌ ಮಾಡುವಷ್ಟರಲ್ಲಿ ಉಳಿದ ಮೂರೂ ವಿಕೆಟ್‌ ಉರುಳಿದವು. ಭಾರತ 436ಕ್ಕೆ ಆಲೌಟ್‌ ಆಯಿತು. ಮುನ್ನಡೆ 190 ರನ್‌ಗೆ ಸೀಮಿತಗೊಂಡಿತು. ಜೈಸ್ವಾಲ್‌, ರಾಹುಲ್‌ ಅವರಂತೆ ಜಡೇಜಾಗೂ ಸೆಂಚುರಿ ಒಲಿಯಲಿಲ್ಲ. ಅವರು 87 ರನ್‌ ಮಾಡಿ ರೂಟ್‌ ಎಸೆತದಲ್ಲಿ ಲೆಗ್‌ ಬಿಫೋರ್‌ ಆದರು. 180 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. 35ರಲ್ಲಿದ್ದ ಅಕ್ಷರ್‌ ಪಟೇಲ್‌ 44ರ ತನಕ ಸಾಗಿದರು.

Advertisement

Udayavani is now on Telegram. Click here to join our channel and stay updated with the latest news.

Next