Advertisement

ಪ್ರತಿಬಾರಿಯೂ ಹಳಬರು ಕಾಣೆ; ಹೊಸಬರಿಗೇ ಮಣೆ

11:55 AM Apr 06, 2018 | |

ಹೂವಿನಹಡಗಲಿ: ರಾಜ್ಯಕ್ಕೆ ಉಪಮುಖ್ಯಮಂತ್ರಿ (ದಿ| ಎಂ.ಪಿ. ಪ್ರಕಾಶ್‌)ಯನ್ನು ನೀಡಿದ ಕ್ಷೇತ್ರ ಹೂವಿನಹಡಗಲಿ. ಜಿಲ್ಲೆಯಲ್ಲೇ
ವಿಶಿಷ್ಟತೆ ಹೊಂದಿರುವ ಹಡಗಲಿ ಕ್ಷೇತ್ರ ಯಾರೊಬ್ಬರನ್ನು ಸತತ ಎರಡು ಬಾರಿ ಗೆಲ್ಲಿಸದ ಬುದ್ಧಿವಂತರ ಕ್ಷೇತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Advertisement

ಹಾಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ರಸ್ತೆ ಸೇರಿ ಅಲ್ಪಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದ್ದರೂ, ಎಂ.ಪಿ. ಪ್ರಕಾಶ್‌ ರ ಆಶಯಗಳನ್ನು ಈಡೇರಿಸಿಲ್ಲ ಎಂಬ ಬೇಸರ ಮತದಾರರನ್ನು ಕಾಡುತ್ತಿದೆ. ಎರಡನೇ ಬಾರಿಗೆ ಸ್ಪರ್ಧಿಸಲು ಸಜ್ಜಾಗಿರುವ ಪರಮೇಶ್ವರ ನಾಯ್ಕ ಗೆದ್ದು ದಾಖಲೆ ನಿರ್ಮಿಸುವರೋ ಅಥವಾ ಮತದಾರರು ಮತ್ತೆ ಹೊಸಬರಿಗೆ ಮಣೆ ಹಾಕುವರೋ ಕಾದು ನೋಡಬೇಕಾಗಿದೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಹಡಗಲಿ ಕ್ಷೇತ್ರದಲ್ಲಿ 2013ರಲ್ಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಜಯಗಳಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ, ಸಚಿವರಾಗುತ್ತಿದ್ದಂತೆ
ಒಂದಿಲ್ಲೊಂದು ವಿವಾದಗಳು ಎದುರಾದವು. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಯಿತು. ಜತೆಗೆ ಸಚಿವ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಆಗಿನಿಂದ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಿದ ಪರಮೇಶ್ವರ ನಾಯ್ಕ, ಹಲವು ಕಾರ್ಯ ಕೈಗೊಂಡರು. ಕ್ಷೇತ್ರದ ಮೈಲಾರ-ತೋರಣಗಲ್ಲು, ಹೂವಿನಹಡಗಲಿ-ಮಂಡ್ಯ, ಮೊಳಕಾಲ್ಮೂರು-ಯಕ್ಕುಂಬಿ, ಅರೆಭಾವಿ-ಚಳ್ಳಕೆರೆ, ಹೊಸಪೇಟೆ-ಮಂಗಳೂರು ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿ ಹಲವು ಕೆಲಸಗಳು ಪೂರ್ಣಗೊಂಡಿವೆ.

ಕ್ಷೇತ್ರದಲ್ಲಿ ಮೂಲಸೌಲಭ್ಯ ಕಲ್ಪಿಸುವುದರ ಜತೆಗೆ ಕಳೆದ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ.ಪ್ರಕಾಶರ ಆಶಯಗಳನ್ನು ಈಡೇರಿಸುವುದಾಗಿ ಕೊಟ್ಟ ಮಾತಿಗೆ ತಪ್ಪಿದ ಶಾಸಕ ಎಂಬ ಆರೋಪವೂ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕರ ವಿರುದ್ಧ ಕೇಳಿಬರುತ್ತಿದೆ. ಪ್ರಕಾಶರ ಕನಸಿನ ಕೂಸಾಗಿದ್ದ ಹಡಗಲಿ ಶೈಕ್ಷಣಿಕ ಜಿಲ್ಲೆ ಘೋಷಣೆ, ಜೆಸ್ಕಾಂ ವಿಭಾಗೀಯ ಕಚೇರಿ, ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪನೆ, ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಇಂಜಿನಿಯರಿಂಗ್‌ ಕಾಲೇಜು ಕಾಮಗಾರಿ ಪೂರ್ಣಗೊಳಿಸದಿರುವುದು ಸೇರಿ ಹಲವು ಅಭಿವೃದ್ಧಿ ಕೆಲಸಗಳನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಕ್ಷೇತ್ರದ ಬೆಸ್ಟ್‌ ಏನು?
ಬಹುತೇಕ ಫ್ಲೋರೈಡ್‌ಯುಕ್ತ ನೀರು ಪೂರೈಕೆಯಾಗುತ್ತಿದ್ದ ಕ್ಷೇತ್ರದಲ್ಲಿ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸಂಯುಕ್ತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಅಂಕ್ಲಿ, ಬೂದನೂರು, ಉಪನಾಯ್ಕನಹಳ್ಳಿ, ಸೇರಿದಂತೆ ಅಂದಾಜು 8ಕ್ಕೂ ಹೆಚ್ಚು ಯೋಜನೆಗಳಿಗೆ ಮಂಜೂರಾತಿ ಪಡೆದು ಕಾಮಗಾರಿ ಆರಂಭಿಸಲಾಗಿದೆ. ಸರ್ಕಾರದಿಂದ ಮಂಜೂರಾಗಿದ್ದ 100 ಶುದ್ಧ ಕುಡಿವ ನೀರಿನ ಘಟಕಗಳಲ್ಲಿ 76 ಘಟಕಗಳು ಕಾರ್ಯಾರಂಭ ಮಾಡುತ್ತಿವೆ. ಇನ್ನುಳಿದಂತೆ ಕ್ಷೇತ್ರದ ಬಹುತೇಕ ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿವೆ.

Advertisement

ಕ್ಷೇತ್ರದ ದೊಡ್ಡ  ಸಮಸ್ಯೆ?
ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಗುಳೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ತಾಲೂಕಿನ ಬಹುತೇಕ ತಾಂಡಾಗಳಲ್ಲಿ ಗುಳೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಗುಳೆ ನಿಯಂತ್ರಿಸುವ ನಿಟ್ಟಿನಲ್ಲಿ ಪರ್ಯಾಯ ಉದ್ಯೋಗ ಕಲ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇನ್ನು ಕ್ಷೇತ್ರದ ಸಿಂಗಟಾಲೂರು ಏತ ನೀರಾವರಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಜಮೀನಿಗೆ ನೀರುಣಿಸುತ್ತಿಲ್ಲ. 2 ಟಿಎಂಸಿ ಸಾಮರ್ಥ್ಯದ ಜಲಾಶಯ 35,791 ಎಕರೆ ಜಮೀನಿಗೆ ನೀರುಣಿಸಬೇಕು. ಆದರೆ, ಶೇ.70 ರಷ್ಟು ಜಮೀನಿಗೆ ನೀರುಣಿಸಲಿದ್ದು, ಇನ್ನು ಶೇ.30 ರಷ್ಟು ಜಮೀನು ಮಳೆಯನ್ನೇ ಆಶ್ರಯಿಸಬೇಕಾಗಿದೆ. ಅಲ್ಲದೇ, ಕ್ಷೇತ್ರದ ಆರಾಧ್ಯ ದೈವ ಮೈಲಾರ ಲಿಂಗೇಶ್ವರ ದೇವಸ್ಥಾನವನ್ನು ಪ್ರತ್ಯೇಕ ಪ್ರಾಧಿಕಾರವನ್ನಾಗಿ ಮಾಡಲಾಗಿದ್ದರೂ, ಈ ವರೆಗೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆದಿಲ್ಲ

ಶಾಸಕರು ಏನಂತಾರೆ?
ಕಳೆದ 5 ವರ್ಷಗಳ ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಆಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ 10ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗಿದ್ದು ಇದರಿಂದಾಗಿ ರೈತರ ಸಮಸ್ಯೆ ಬಗೆಹರಿಸಿದಂತಾಗಿದೆ. ತಾಲೂಕಿನ ಬಹುತೇಕ ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಆಭಿವೃದ್ಧಿ ಪಡಿಸಲಾಗಿದೆ. ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಪುನಃ 2018ರಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.
ಪಿ.ಟಿ. ಪರಮೇಶ್ವರ ನಾಯಕ್‌

ಕ್ಷೇತ್ರ ಮಹಿಮೆ
ಹೂವಿನಹಡಗಲಿ ಕ್ಷೇತ್ರ ದೇಶದಲ್ಲೇ ಖ್ಯಾತಿಗಳಿಸಿದ್ದ ಮೈಲಾರಲಿಂಗೇಶ್ವರ ದೇವಸ್ಥಾನ ಹೊಂದಿದೆ. ಪ್ರತಿವರ್ಷ ಮೈಲಾರ ಜಾತ್ರೆಯಲ್ಲಿ ಗೊರವಪ್ಪ ಹೇಳುವ ಕಾರ್ಣಿಕ ನುಡಿ ರಾಜ್ಯ, ದೇಶದ ಭವಿಷ್ಯವೆಂದು ಜನರು ಭಾವಿಸಿದ್ದಾರೆ. ಈ ನುಡಿಯನ್ನು ಕೇಳಲು ರಾಜಕೀಯ ನಾಯಕರು ಸಹ ಆಗಮಿಸಿ, ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ವಿಶ್ಲೇಷಣೆ ಮಾಡಿಕೊಳ್ಳುವುದು ವಿಶೇಷ. 

ಕಳೆದ ಸರ್ಕಾರದ ಅವಧಿಯಲ್ಲಿ ಬಡವರಿಗೆ, ಹಿಂದುಳಿದವರಿಗೆ. ಆಲ್ಪಸಂಖ್ಯಾತರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ಸಾಕಷ್ಟು ಯೋಜನೆಗಳನ್ನು ಕಲ್ಪಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡಲಾಗಿದೆ.  
ನಿಂಗಪ್ಪ

ಹೂವಿನ ಹಡಗಲಿ: ಇತಿಹಾಸ ಪ್ರಸಿದ್ಧ ಮೈಲಾರ ಲಿಂಗೇಶ್ವರ ದೇವಸ್ಥಾನ. ಹೂವಿನ ಹಡಗಲಿ: ನನೆಗುದಿಗೆ ಬಿದ್ದ ನೂತನ ಇಂಜಿನಿಯರಿಂಗ್‌ ಕಾಲೇಜ್‌. ಹೂವಿನಹಡಗಲಿ ಕಳೆದ 5 ವರ್ಷದಲ್ಲಿ ಹೈ- ಕ ಅನುದಾನವಷ್ಟೇ ಬಿಟ್ಟರೆ ಸಾರ್ವಜನಿಕವಾಗಿ ಹೇಳಿಕೊಳ್ಳುವಂತಹ ಯಾವೊಂದು ಶಾಶ್ವತವಾದ ಯೋಜನೆಗಳು ಕ್ಷೇತ್ರದಲ್ಲಿ ಆಗಿಲ್ಲ. ಹತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇನ್ನು ಶೈಕ್ಷಣಿಕವಾಗಿ ಆಭಿವೃದ್ಧಿ ಹೊಂದಬೇಕಾದಲ್ಲಿ ಶಾಸಕರೇ ಹೇಳಿದಂತೆ ಹಡಗಲಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕಾಗಿತ್ತು ಅದು ಆಗಿಲ್ಲ.
ಚಿದಾನಂದ್‌

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಉದ್ಯೋಗ ಸೃಷ್ಟಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಖಾತ್ರಿಕಿ ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next