ಮ್ಯಾಡ್ರಿಡ್ : ಸ್ಪೈನ್‌ನ ಅತಿ ಹಿರಿಯ ವ್ಯಕ್ತಿ ಎಂದು ಪರಿಗಣಿತರಾಗಿರುವ 113 ವರ್ಷ ಪ್ರಾಯದ ಅಜ್ಜಿಯೊಬ್ಬರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಬದುಕುಳಿದು ಎಲ್ಲರನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ.
ವೃದ್ಧಾಶ್ರಮವೊಂದರಲ್ಲಿ ವಾಸವಾಗಿರುವ ಅಜ್ಜಿ ಈಗ ಸರ್ವತ್ರ ಅಭಿನಂದನೆಗೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ಇದೇ ವೃದ್ಧಾಶ್ರಮದಲ್ಲಿ ಹಲವು ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಎಲ್ಲರಿಗಿಂತ ಹಿರಿಯ ಮಹಿಳೆ ಮಾತ್ರ ಪವಾಡವೆಂಬಂತೆ ಬದುಕುಳಿದಿದ್ದಾರೆ.
20 ವರ್ಷಗಳಿಂದ ಸಂತ ಮರಿಯ ಡೆಟ್ ಟುರಾ ವೃದ್ಧಾಶ್ರಮದಲ್ಲಿರುವ ಅಮೆರಿಕ ಸಂಜಾತೆಯಾಗಿರುವ ಮರಿಯಾ ಬ್ರನ್ಯಾಸ್‌ಗೆ ಎಪ್ರಿಲ್‌ನಲ್ಲಿ ಕೋವಿಡ್ ಸೋಂಕು ತಗಲಿತ್ತು. ಅನಂತರ ಎಲ್ಲರಿಗೆ ನೀಡಿದ ಚಿಕಿತ್ಸೆಯನ್ನೇ ಅವರಿಗೆ ನೀಡಲಾಗಿದೆ.
ಮರಿಯಾ ಬ್ರನ್ಯಾಸ್ ಅವರಲ್ಲಿ ಕೋವಿಡ್ ಲಘು ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಲಾಯಿತು. 25ದಿನಗಳ ಕ್ವಾರಂಟೈನ್ ಬಳಿಕ ಅವರ ವರದಿ ನೆಗೆಟಿವ್ ಬಂದಿರುವುದು ನಮಗೆಲ್ಲ ನೆಮ್ಮದಿ ನೀಡಿದೆ ಎಂದಿದ್ದಾರೆ ವೃದ್ಧಾಶ್ರಮದ ವಕ್ತಾರೆ. ಕೋವಿಡ್ ಮರಣ ಕುಣಿಕೆಯಿಂದ ಪಾರಾಗಿರುವ ಮರಿಯಾ ಬ್ರನ್ಯಾಸ್ ಈಗ ಸ್ಪೈನ್‌ನಲ್ಲಿ ಸೆಲೆಬ್ರಿಟಿಯಾಗಿ ಬದಲಾಗಿದ್ದಾರೆ. ಹಲವು ಟಿವಿ ವಾಹಿನಿಗಳು ಅವರನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಆತ್ಮವಿಶ್ವಾಸ ತುಂಬಲು ಮೋಡೆಲ್ ರೀತಿ ಬಳಸಿಕೊಂಡಿವೆ. ಇಳಿ ಹರೆಯವಾಗಿದ್ದರೂ ಮರಿಯಾ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಸುರಕ್ಷಾ ಉಡುಗೆಯನ್ನು ಧರಿಸಿರುವ ಓರ್ವ ಸಿಬಂದಿಯನ್ನು ಮಾತ್ರ ಅವರ ಪಾಲನೆಗಾಗಿ ನಿಯೋಜಿಸಲಾಗಿತ್ತು. ಆದರೂ ಅಜ್ಜಿ ಯಾವುದೇ ತಕಾರರು ಮಾಡದೆ ಪರಿಸ್ಥಿತಿಗೆ ಹೊಂದಿಕೊಂಡಿದ್ದರು. ಎರಡನೇ ವಿಶ್ವಯುದ್ಧ ಸಂದರ್ಭದಲ್ಲಿ ದೋಣಿಯಲ್ಲಿ ಸ್ಪೈನ್‌ಗೆ ವಲಸೆ ಬಂದಿರುವ ಮರಿಯಾ 1919ರಲ್ಲಿ ಸ್ಪೈನ್‌ನಲ್ಲಿ ತಾಂಡವವಾಡಿದ್ದ ಫ್ಲೂ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಬದುಕುಳಿದಿದ್ದರು. 1936ರಿಂದ 39ರ ತನಕ ನಡೆದ ದಂಗೆಯನ್ನೂ ಅವರು ನೋಡಿದ್ದಾರೆ.