ಕುದೂರು: ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಹೇಗೆ ಬಡ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಈ ಕುಟುಂಬವನ್ನು ಪುಸಲಾಯಿಸಿ ಹಂಚಿಕೆ ಮಾಡಿದ್ದ ನಿವೇಶನದ ಜಾಗದಲ್ಲಿ ಅಂದು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲು ಶ್ರಮಿಸಿದ್ದ ಗ್ರಾಪಂ ಅಧ್ಯಕ್ಷರು ಅವಧಿ ಮುಗಿದ ನಂತರ ತಲೆ ಕೆಡಿಸಿಕೊಂಡಿಲ್ಲ. ಇತ್ತ ಅಧಿಕಾರಿಗಳೂ ಕ್ರಮ ಕೈಗೊಂಡಿಲ್ಲ. ನಿವೇಶನಕ್ಕಾಗಿ ಪರದಾಡುತ್ತಿರುವ ವೃದ್ಧೆಯ ಪರದಾಟ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವಾ?
ಪಂಚಾಯ್ತಿಗೆ ಅಲೆದಾಡಿದರು: ಹೌದು, ಕುದೂರು ಗ್ರಾಮದ ಎಚ್.ಎಂ.ರೇವಣ್ಣ ಬಡಾವಣೆ (ನವಗ್ರಾಮ)ಯಲ್ಲಿ 2004ರಲ್ಲಿ ಸರ್ಕಾರ ಬಡವರಿಗೆ ನಿವೇಶನ ನಿರ್ಮಿಸಿ ಬಡವರಿಗೆ 25*20 ಅಳತೆಯ ನಿವೇಶನವನ್ನು ಹಂಚಿಕೆ ಮಾಡಿತ್ತು. ಅದರಂತೆ 2004ರಲ್ಲಿ ರುದ್ರಪ್ಪ ಎಂಬವರ ಪತ್ನಿ ನೀಲಮ್ಮಗೆ ನಿವೇಶನದ ಹಕ್ಕುಪತ್ರವನ್ನೂ ವಿತರಿಸಿತ್ತು. 4-5 ವರ್ಷಗಳ ನಂತರ ಕುದೂರು ಗ್ರಾಪಂ ನೀಲಮ್ಮನ ನಿವೇಶನದ ಜಾಗದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಮುಂದಾಗಿತ್ತು. ಈ ವೇಳೆ, ನೀಲಮ್ಮ ಪ್ರಶ್ನಿಸಿದಾಗ, ಆಗಿನ ಗ್ರಾಪಂ ಅಧ್ಯಕ್ಷ ಕೆ.ಬಿ.ಬಾಲರಾಜು “ನಿಮಗೆ ಬೇರೆ ಕಡೆ ನಿವೇಶನ ಕೊಡಿಸುತ್ತೇನೆ’ ಎಂದು ಸಮಾಧಾನಪಡಿಸಿದ್ದರು ಎನ್ನಲಾಗಿದೆ.
ಬಳಿಕ, ಸುಮಾರು 15 ವರ್ಷ ಕಳೆದರೂ ಗ್ರಾಪಂ ನೀಲಮ್ಮಗೆ ನಿವೇಶನ ಕೊಡಲಿಲ್ಲ. ಅರ್ಜಿ ಬರೆದುಕೊಡಿ ಎನ್ನುವ ಅಧಿಕಾರಿಗಳು, ಜನಪ್ರತಿನಿಧಿಗಳ ಧಾವಂತ, ನಿವೇಶನ ನೀಡುವಲ್ಲಿ ವಿಫಲರಾಗಿದ್ದಾರೆ. ನಿವೇಶನ ನೀಡುತ್ತೇವೆ ಎಂದು ಯಾರೂ ಹೇಳಲಿಲ್ಲ. ಪಂಚಾಯ್ತಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ ಎಂದು ಸಂತ್ರಸ್ಥೆ ನೀಲಮ್ಮ ಆರೋಪಿಸಿದ್ದಾರೆ. ನೀಲಮ್ಮ ಅವರ ಪುತ್ರ ಶಿವಕುಮಾರ್ ಅವರೂ ಮಾಗಡಿ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನ್ಯಾಯ ದೊರೆಯಲಿಲ್ಲ ಎಂದು “ಉದಯವಾಣಿ’ಗೆ ತಿಳಿಸಿದರು.
ಹೀಗಾಗಿ ರಾಮನಗರ ಜಿಲ್ಲಾಧಿಕಾರಿಗಳು ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಓವರ್ ಹೆಡ್ ಟ್ಯಾಂಕ್‌ಗೂ ಕಂದಾಯ: ನೀಲಮ್ಮ ಅವರ ನಿವೇಶನದ ಜಾಗದಲ್ಲಿ ಗ್ರಾಪಂ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದೆ. ಆ ಜಾಗಕ್ಕೆ ಪಂಚಾಯ್ತಿ ಪ್ರತಿ ತಿಂಗಳು ಕಂದಾಯ ಕಟ್ಟಿಸಿಕೊಂಡಿದೆ. ಶಿವಕುಮಾರ್ ವಯಸ್ಸಾದ ತಾಯಿ ನೀಲಮ್ಮ, ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಕಳೆದ ವರ್ಷ ಬಿದ್ದ ಮಳೆಗೆ ಮನೆ ಕುಸಿಯಿತು. ಮತ್ತೂಂದು ಪುಟ್ಟ ಮನೆಗೆ ಬಾಡಿಗೆಗೆ ಹೋದ ಕುಟುಂಬ, ಬಾಡಿಗೆ ಕಟ್ಟಲಾಗದೆ, ಮಕ್ಕಳನ್ನು ಓದಿಸಲಾಗದೆ ಒದ್ದಾಡುತ್ತಿದೆ. ಅದಕ್ಕಾಗಿ ಓವರ್ ಹೆಡ್ ಟ್ಯಾಂಕ್‌ನ ಕಂಬಗಳಿಗೆ ಪ್ಲಾಸ್ಟಿಕ್ ಕವರ್ ಕಟ್ಟಿಕೊಂಡು ಚಳಿ, ಮಳೆಯಲ್ಲಿ ಜೀವನ ನಡೆಸುತ್ತಿದೆ.
ಕಳೆದ 2 ತಿಂಗಳ ಹಿಂದೆ ಈ ಸಮಸ್ಯೆ ನನ್ನ ಗಮನಕ್ಕೆ ಬಂತು. ನವಗ್ರಾಮ ದಲ್ಲಿ ಖಾಲಿ ನಿವೇಶನವಿಲ್ಲದ್ದರಿಂದ ಶಿವಗಂಗೆ ರಸ್ತೆ ಬಡಾವಣೆಯಲ್ಲಿ ಕೊಡಲು ತೀರ್ಮಾನಿಸಿದ್ದೇವೆ. ಕಣ್ತಪ್ಪಿನಿಂದ ಕಂದಾಯ ವಸೂಲಿ ಮಾಡಲಾಗಿದ್ದು ಅವರ ಹಣವನ್ನು ವಾಪಸ್ ಮಾಡುವ ವ್ಯವಸ್ಥೆ ಮಾಡುತ್ತೇವೆ.
-ಲೋಕೇಶ್, ಪಿಡಿಒ ಕುದೂರು ಗ್ರಾಪಂ
ನಮ್ಮ ಜಾಗದಲ್ಲಿ ಓವರ್ ಟ್ಯಾಂಕ್ ನಿರ್ಮಾಣ ಮಾಡದಿದ್ದರೆ ಒಂದು ಪುಟ್ಟ ಮನೆಯನ್ನು ಕಟ್ಟಿಕೊಳ್ಳುತ್ತಿದ್ದೆವು. ಆದರೆ, ಈಗ ಬೀದಿಗೆ ಬರುವ ಹಾಗಾಯಿತು. ವಿಧಿ ಇಲ್ಲದೆ ಟ್ಯಾಂಕಿನ ಕೆಳಗೆ ಟಾರ್ಪಲ್ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ.
– ಶಿವಕುಮಾರ್, ನಿವೇಶನ ವಂಚಿತರ ಪುತ್ರ ಗ್ರಾಪಂ
ಸುಮಾರು 15 ವರ್ಷದಿಂದ ಕೇವಲ ನಾಟಕವಾಡಿ ಕಣ್ಣೊರೆ ಸುವ ಕೆಲಸ ಮಾಡಿದೆ. ನಿಮಗೆ ಈಗ ಕೊಡುತ್ತೇವೆ, ಆಗ ಕೊಡುತ್ತೇವೆ ಎಂದು ನಾಟಕವಾಡಿ ನಮ್ಮನ್ನು ಕಳುಹಿಸುತ್ತಿದ್ದರೇ ಹೊರತು, ಇಲ್ಲಿಯವರೆಗೂ ಯಾವುದೇ ನಿವೇಶನ ನೀಡಿಲ್ಲ.
– ನೀಲಮ್ಮ, ನಿವೇಶನ ವಂಚಿತರು
-ಕೆ.ಎಸ್.ಮಂಜುನಾಥ್ ಕುದೂರು