ಮಹಾರಾಷ್ಟ್ರ: ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್ ಅವರ ಪ್ರಕರಣ ದೇಶದೆಲ್ಲೆಡೆ ತೀವ್ರ ಸಂಚಲನ ಸೃಷ್ಟಿಸಿದ್ದು, ಪೂಜಾ ಖೇಡ್ಕರ್ ವಿರುದ್ಧ ನಕಲಿ ದಾಖಲೆ ನೀಡಿ ಉದ್ಯೋಗ ಗಿಟ್ಟಿಸಿಕೊಂಡ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಇದರ ನಡುವೆ ಪೂಜಾ ತಾಯಿ ಕೈಯಲ್ಲಿ ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸುತ್ತಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ 2023ರಲ್ಲಿ ಚಿತ್ರೀಕರಿಸಲಾಗಿರುವುದು ಎಂದು ಹೇಳಲಾಗುತ್ತಿದ್ದು ಪೂಜಾ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ ರೈತರಿಗೆ ಬೆದರಿಕೆ ಹಾಕುತ್ತಿರುವ ತಾಯಿಯ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದಾದ್ಯಂತ ಆಸ್ತಿ ಹೊಂದಿರುವ ಖೇಡ್ಕರ್ ಕುಟುಂಬ ಪುಣೆಯ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿತ್ತು. ಇದೀಗ ಈ ಜಾಗದ ಅಕ್ಕಪಕ್ಕದಲ್ಲಿ ರೈತರ ಜಮೀನುಗಳು ಇದ್ದು ಇದೀಗ ಖೇಡ್ಕರ್ ಕುಟುಂಬ ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಇದರ ಕುರಿತು ರೈತರು ಆಕ್ಷೇಪ ವ್ಯಕ್ತಪಡಿಸಿದಾಗ ಖೇಡ್ಕರ್ ಅವರ ತಾಯಿ ಮನೋರಮಾ, ಬೌನ್ಸರ್ ಸಮೇತ ಸ್ಥಳಕ್ಕೆ ಆಗಮಿಸಿ ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ವೈರಲ್ ಆಗಿರುವ ವಿಡಿಯೋದಲ್ಲಿ ಮನೋರಮಾ ಜಮೀನು ತನ್ನ ಹೆಸರಿನಲ್ಲಿದೆ ಎಂದು ರೈತರ ಮರಾಠಿ ಭಾಷೆಯಲ್ಲಿ ಹೇಳುತ್ತಿರುವುದು ಕಾಣಬಹುದು. ಅಲ್ಲದೆ ಈ ಕುರಿತು ರೈತರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಅವರು ನೀಡಿದ ದೂರನ್ನು ಸ್ವೀಕರಿಸದೆ ಹಿಂದೆ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತ ಪುಣೆಯ ಸಹಾಯಕ ಜಿಲ್ಲಾಧಿಕಾರಿಯಾಗಿದ್ದ ಪೂಜಾ ಖೇಡ್ಕರ್ ತಮ್ಮ ಖಾಸಗಿ ಕಾರಿನಲ್ಲಿ ಮೇಲೆ ಐಎಎಸ್ ಅಧಿಕಾರಿಗಳಿಗೆ ಸಿಗುವ ಕೆಂಪು ನೀಲಿ ಬಣ್ಣದ ದೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಕಾರಿನ ನಂಬರ್ ಪ್ಲೇಟ್ ಮೇಲೆ ‘ಮಹಾರಾಷ್ಟ್ರ ಸರ್ಕಾರ’ ಎಂದು ಬರೆಸಿಕೊಂಡಿದ್ದರು. ಇದ್ಯಾವುದೂ ಪ್ರೊಬೇಷನರಿ ಅವಧಿಯಲ್ಲಿರುವ ಅಧಿಕಾರಿಗಳಿಗೆ ಸಿಗುವ ಸೌಲಭ್ಯಗಳಲ್ಲ. ಆದರೂ ಪೂಜಾ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದರು.
ಪೂಜಾ ಖೇಡ್ಕರ್ ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗದ(ಒಬಿಸಿ) ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪ್ರೊಬೇಷನರಿ ಅವಧಿಯಲ್ಲಿರುವ ಐಎಎಸ್ ಅಧಿಕಾರಿ ಪೂಜಾ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸದ್ಯ ನಿಯೋಜಿಸಲಾಗಿರುವ ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗ ಮಾಡಲಾಗಿದೆ. ಇದರೊಂದಿಗೆ ಪೂಜಾ ಪೂರ್ಣಾವಧಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಎತ್ತಂಗಡಿ ಶಿಕ್ಷೆ ಅನುಭವಿಸಿದಂತಾಗಿದೆ.