Advertisement

ಸರಕಾರಿ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಭಗೀರಥ ಪ್ರಯತ್ನ

06:00 AM Jul 06, 2018 | |

ಕಂಬದಕೋಣೆ: ದಾಖಲಾತಿ ಕುಸಿತದಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಯನ್ನು ಉಳಿಸುವ ಉದ್ದೇಶದಿಂದ ಕಂಬದಕೋಣೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘವು ಈ ವರ್ಷದಿಂದ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಿದೆ.
 
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಆಂಗ್ಲ ಭಾಷೆಗೆ ಪ್ರಾಧಾನ್ಯತೆ ಕೊಡುವುದಿಲ್ಲ ಎನ್ನುವ ಸಾಮಾನ್ಯ ಆರೋಪಕ್ಕೆ ವಿರುದ್ಧವೆನ್ನುವಂತೆ  ಇಲ್ಲಿನ ಶಾಲೆಯಲ್ಲಿ  ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಹಳೆ ವಿದ್ಯಾರ್ಥಿ ಸಂಘ ಮುಂದಾಗಿದೆ. ಇದಕ್ಕೆ  ಶಾಲಾ ಎಸ್‌ಡಿಎಂಸಿ ಸಮಿತಿಯು ಕೈಜೋಡಿಸಿದೆ.
 
ಹಿಂದೆ ಈ ಶಾಲೆಯಲ್ಲಿ 700 ರಿಂದ 800 ವಿದ್ಯಾರ್ಥಿಗಳು ಪ್ರತಿ ವರ್ಷ ಕಲಿಯುತ್ತಿದ್ದರು. ಬಳಿಕ ಖಾಸಗಿ ಶಾಲೆಗಳು, ಇಂಗ್ಲಿಷ್‌ ವ್ಯಾಮೋಹ ಹೆಚ್ಚಾದಂತೆ ಮಕ್ಕಳ ಸಂಖ್ಯೆ ಕುಸಿಯತೊಡಗಿತು. ಈಗ ಮಕ್ಕಳ ಸಂಖ್ಯೆ 100 ಕೂಡ ಇಲ್ಲ.  

Advertisement

ಹಳೆ ವಿದ್ಯಾರ್ಥಿಗಳಿಂದಲೇ ಅಭಿಯಾನ
ಮಕ್ಕಳನ್ನು ಶಾಲೆಗೆ ಸೆಳೆಯಲು ಹಳೆ ವಿದ್ಯಾರ್ಥಿಗಳು ಸ್ವತಃ ಸನಿಹದ ಊರುಗಳ  ಎಲ್‌ಕೆಜಿ- ಯುಕೆಜಿ ವಯೋಮಾನದ ಮಕ್ಕಳಿರುವ ಮನೆ – ಮನೆಗೆ ಭೇಟಿ ನೀಡಿ, ಪೋಷಕರಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ, ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತೇವೆ ಎನ್ನುವುದನ್ನು ಅಭಿಯಾನದ ಮೂಲಕ ಮನವರಿಕೆ ಕೂಡ ಮಾಡಿದ್ದರು. 

24 ವಿದ್ಯಾರ್ಥಿಗಳು ದಾಖಲು
ಹಳೆ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಫ‌ಲ ಎಂಬಂತೆ ಈ ವರ್ಷ ಎಲ್‌ಕೆಜಿಗೆ 8 ಹಾಗೂ ಯುಕೆಜಿಗೆ 16 ಒಟ್ಟು 24 ಮಂದಿ ಮಕ್ಕಳು ದಾಖಲಾತಿಯಾಗಿದ್ದಾರೆ.  ಇಬ್ಬರು ಗೌರವ ಶಿಕ್ಷಕಿಯರನ್ನು ಕೂಡ ನೇಮಿಸಲಾಗಿದೆ.

ಖರ್ಚು ಭರಿಸಲಿದೆ 
ಹಳೆ ವಿದ್ಯಾರ್ಥಿ ಸಂಘ

ಈ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಉಚಿತವಾಗಿ ನಡೆಸುವುದು ಅಷ್ಟು ಸುಲಭವಲ್ಲ.  ಶಿಕ್ಷಕರ ಸಂಬಳ, ಮಕ್ಕಳಿಗೆ ಹೊಸದಾಗಿ ಕುರ್ಚಿ, ಟೇಬಲ್‌, ಆಟದ ಸಾಮಗ್ರಿಗಳು, ಪಠ್ಯ, ನೋಟ್‌ ಪುಸ್ತಕಗಳೆಲ್ಲ ಸೇರಿ ವರ್ಷಕ್ಕೆ ಸುಮಾರು  2 ಲಕ್ಷ ರೂ. ಗೂ ಅಧಿಕ ಹಣ ಬೇಕು. ಅದನ್ನೆಲ್ಲ ಹಳೆ ವಿದ್ಯಾರ್ಥಿಗಳೇ ಭರಿಸಲಿದ್ದಾರೆ. 

ಶಾಲೆ ಉಳಿಸುವ ಉದ್ದೇಶ
ಅಂದು ತರಗತಿಯಲ್ಲಿ ಕುಳಿತಕೊಳ್ಳಲು ಸಾಧ್ಯವಿಲ್ಲದಷ್ಟು ಮಕ್ಕಳು ಇರುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಭವಿಷ್ಯದಲ್ಲಿ ಈ ಶಾಲೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದುವರಿಸಿಕೊಂಡು ಹೋಗಲು ನಾವೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿದ್ದೇವೆ. ಅದರೊಂದಿಗೆ ಬಾಕಿ ಉಳಿದ 1 ರಿಂದ 7 ನೇ ವರೆಗಿನ ತರಗತಿಗಳಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ಪೂರೈಸಲಾಗುವುದು.
– ವಿಜಯ ಕುಮಾರ್‌ ಶೆಟ್ಟಿ, 
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ 

Advertisement

ಉತ್ತಮ ಬೆಳವಣಿಗೆ
ಇಂಗ್ಲಿಷ್‌ ವ್ಯಾಮೋಹದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಆ ಕಾರಣಕ್ಕೆ ಹಳೆ ವಿದ್ಯಾರ್ಥಿಗಳೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಮುಂದಾಗಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ. ಎಲ್ಲ ಸಹಕಾರ ನೀಡಲಿದ್ದೇವೆ. 
– ಗಂಗಾಧರ ಬಂಟ್‌,ಮುಖ್ಯೋಪಾಧ್ಯಾಯರು

Advertisement

Udayavani is now on Telegram. Click here to join our channel and stay updated with the latest news.

Next