Advertisement

ಸೀರೆ ಹಳೆಯದಾದರೇನು…

09:56 AM Mar 12, 2020 | mahesh |

ಅದೊಂದು ದಿನ ನೆಂಟರ ಮದುವೆಗೆ ಹೋಗಲೆಂದು ಬೀರುವಿನ ಬಾಗಿಲು ತೆರೆದವಳಿಗೆ ಉಡದೆ ಬಿಟ್ಟ ಅನಾಥ ಸೀರೆಗಳು ಕಾಣಿಸಿದವು. ಅವೆಲ್ಲಾ ಒಟ್ಟಾಗಿ “ನಮಗೆ ಈ ಕಪಾಟಿನಿಂದ ಮುಕ್ತಿ ಯಾವಾಗ?’ ಅಂತ ಕೇಳಿದಂತಾಯ್ತು. ಆಗ ಹೊಳೆಯಿತು ನೋಡಿ ಒಂದೊಂದೇ ಐಡಿಯಾಗಳು…

Advertisement

“ಅಮ್ಮಾ, ಪ್ಯಾಂಟು-ಅಂಗಿ ಬೇಡ. ಉದ್ದ ಲಂಗ ತೊಡಿಸು. ಸುತ್ತಾ ತಿರುಗುತ್ತಾ ಆಡಲು ಚೆನ್ನಾಗಿರುತ್ತೆ…’ ಹೀಗಂತ ಮಗಳು ಬೇಡಿಕೆಯಿಟ್ಟಾಗ, “ಅಯ್ಯೋ, ಮನೆಯಲ್ಲಿ ತೊಡೋದಕ್ಕೆ ಹಣ ಕೊಟ್ಟು ಉದ್ದ ಲಂಗ ಹೊಲಿಸಲೆ? ಸುಮ್ಮನೆ ದುಂದು ವೆಚ್ಚ’ ಎಂದಿತು ಮನಸ್ಸು. ಆದರೂ, ಹೂಂಗುಟ್ಟಿ ಆ ಕ್ಷಣಕ್ಕೆ ಮಗಳನ್ನು ಸುಮ್ಮನಾಗಿಸಿದ್ದೆ. ಇದಾಗಿ ಕೆಲವು ದಿನ ಕಳೆದಿತ್ತು. ಈ ವಿಷಯ ತಲೆಯಿಂದ ಮರೆಯಾಗಿತ್ತು. ಜಾಣ ಮರೆವು ಇದ್ದರೂ ಇರಬಹುದು!

ಅದೊಂದು ದಿನ ನೆಂಟರ ಮದುವೆಗೆ ಹೋಗಲೆಂದು ಬೀರುವಿನ ಬಾಗಿಲು ತೆರೆದವಳಿಗೆ ಉಡದೆ ಬಿಟ್ಟ ಅನಾಥ ಸೀರೆಗಳು ಕಾಣಿಸಿದವು. ಅವೆಲ್ಲಾ ಒಟ್ಟಾಗಿ “ನಮಗೆ ಈ ಕಪಾಟಿನಿಂದ ಮುಕ್ತಿ ಯಾವಾಗ?’ ಅಂತ ಕೇಳಿದಂತಾಯ್ತು. ಮಗಳು ಉದ್ದ ಲಂಗ ಕೇಳಿದ್ದಳಲ್ವ? ಅದಕ್ಕೆ ಮೆಟೀರಿಯಲ್‌ ಇಲ್ಲೇ ಇದೆಯಲ್ಲಾ ಅಂತ ತಲೆಗೆ ಹೊಳೆದದ್ದೇ ತಡ, ಅಲ್ಲೇ ಆಟವಾಡುತ್ತಿದ್ದ ಮಗಳನ್ನು ಹಿಡಿದು ನಿಲ್ಲಿಸಿ ಆಕೆಯ ಅಳತೆ ತೆಗೆದುಕೊಂಡೆ. ಹಳೇ ಸೀರೆಯೊಂದಕ್ಕೆ ಕತ್ತರಿ ಹಾಕಿ ಮುಕ್ತಿ ಕೊಟ್ಟೂ ಬಿಟ್ಟೆ. ಒಂದು ವಾರದಲ್ಲಿ ಹಾಗೂ ಹೀಗೂ ಮಾಡಿ, ಮನೆಯಲ್ಲಿ ಧರಿಸುವಷ್ಟು ಚಂದದ ಉದ್ದ ಲಂಗ ಹೊಲಿದೆ. ಮಗಳಿಗೆ ಖುಷಿಯೋ ಖುಷಿ.

ಸೀರೆ ಹಳೆಯದಾದರೂ, ಅದರಿಂದ ಹತ್ತಾರು ಪ್ರಯೋಜನಗಳಿವೆ ಅಂತ ಅರಿವಾಗಿದ್ದು ಆಗಲೇ. ಮನೆಯಲ್ಲಿ ಹೊಸತಾಗಿ ಹೊಲಿಗೆ ಕಲಿಯುವವರಿದ್ದರಂತೂ ಲಂಗ-ದಾವಣಿ, ರವಿಕೆ, ಫ್ರಾಕ್‌, ಚೂಡಿದಾರ್‌ ಹೀಗೆ ನಾನಾ ಉಡುಪುಗಳ ಪ್ರಯೋಗಕ್ಕೆ ಅಮ್ಮ, ಅಜ್ಜಿ ಉಟ್ಟು ಬೀರುವಿನಲ್ಲಿ ಭದ್ರವಾಗಿ ಇಟ್ಟಿರುವ ಹಳೇ ಸೀರೆಗೆ ಸಖತ್‌ ಡಿಮ್ಯಾಂಡ್‌ ಇರುತ್ತದೆ. ಅಷ್ಟರ ಹೊರತಾಗಿಯೂ ಹಳೆ ಸೀರೆಯನ್ನು ಬಗೆಬಗೆಯಲ್ಲಿ ಬಳಸಬಹುದು.

-ಬೆಡ್‌ ಶೀಟ್‌ ಆಗಲೂ ಸೈ
ಜನರ ಬೇಡಿಕೆಗೆ ತಕ್ಕಂತೆ ಈಗ ನಾನಾ ನಮೂನೆಯ, ರಂಗು ರಂಗಿನ ಬೆಡ್‌ಶೀಟ್‌ಗಳು, ಹೊದಿಕೆಗಳು ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಕಾಲ ಹೀಗಿರಲಿಲ್ಲ. ಬಣ್ಣ ಮಾಸಿದ ಮಗ್ಗ/ಕಾಟನ್‌ ಸೀರೆಗಳನ್ನೇ ಬೆಡ್‌ ಶೀಟ್‌ ಆಗಿ ಬಳಸುತ್ತಿದ್ದರು. ಸೀರೆ ಹಾಸಿದ ಹಾಸಿಗೆಯಲ್ಲಿ ಮಲಗಿದರೆ ಮಕ್ಕಳಿಗಂತೂ ಅಮ್ಮನ ಬಿಸಿಯಪ್ಪುಗೆಯಲ್ಲಿ ಮಲಗಿದ ಅನುಭವ.

Advertisement

-ಪಾಪುವಿಗೆ ಬೆಚ್ಚನೆಯ ಜೋಲಿ
ಅಮ್ಮನ ಬೆಚ್ಚಗಿನ ಗರ್ಭದೊಳಗೆ ನವಮಾಸವಿದ್ದು ಹೊರ ಪ್ರಪಂಚಕ್ಕೆ ಬರೋ ಕಂದಮ್ಮಗಳಿಗೂ ಮಗ್ಗ/ ಕಾಟನ್‌ ಸೀರೆಯಿಂದ ಜೋಲಿ ಮಾಡಬಹುದು. ಸೀರೆಯ ಜೋಲಿಯಲ್ಲಿ ಮಲಗಿಸಿದರೆ, ಮೈ ಕೊರೆಯುವ ಚಳಿಯಿಂದ, ಸೊಳ್ಳೆ ನೊಣಗಳ ಉಪಟಳದಿಂದ ಮಗುವಿಗೆ ರಕ್ಷಣೆ ಸಿಗುವುದು.

-ಕಿಟಕಿಗೆ ಕರ್ಟನ್‌
ಸೂರ್ಯನ ಶಾಖವನ್ನು ತಡೆದು, ಮನೆಯ ಅಲಂಕಾರವನ್ನು ಹೆಚ್ಚಿಸುವ ಕರ್ಟನ್‌ ಟ್ರೆಂಡ್‌ ಈಗ ನಗರಷ್ಟಕ್ಕಷ್ಟೇ ಸೀಮಿತವಾಗಿಲ್ಲ. ಹಳ್ಳಿ ಮನೆಗಳಲ್ಲೂ ಅದೀಗ ಕಾಮನ್‌ ಆಗಿಬಿಟ್ಟಿದೆ. ಹಣ ವ್ಯಯಿಸದೆ ಕಿಟಕಿಯ ಅಂದ ಹೆಚ್ಚಿಸಬೇಕೆನ್ನುವವರು, ಹಳೇ ಸೀರೆಗಳನ್ನೇ ತುಂಡರಿಸಿ, ಕರ್ಟನ್‌ ಹೊಲಿಸಬಹುದು.

-ಚಳಿಯಿಂದ ರಕ್ಷಣೆಗೆ ರಜಾಯಿ
ಸೀರೆಗಳಿಂದ (ಕಾಟನ್‌ ಸೀರೆಯಾದರೆ ಉತ್ತಮ) ದಪ್ಪನೆಯ ರಜಾಯಿಯನ್ನು ಮನೆಯಲ್ಲೇ ತಯಾರಿಸಬಹುದು. ಹೇಗೆ ಅಂತೀರಾ..? ಎರಡು/ಮೂರು ಸೀರೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಮಡಿಚಿ ಹೊಲಿಗೆ ಮಿಷನ್‌ ಸಹಾಯದಿಂದ ನಾಲ್ಕೂ ಕಡೆ ಸ್ಟಿಚ್‌ ಹಾಕಿದರೆ ಹಳೇ ಸೀರೆ ಬ್ಲಾಂಕೆಟ್‌ ರೆಡಿ.

-ಕಾಲು ಒರೆಸಲು ಕಾರ್ಪೆಟ್‌
ಹಿಂದೆಲ್ಲಾ ಹಳೇ ಸೀರೆ, ಗೋಣಿಗಳನ್ನು ಕಾಲೊರೆಸುಗಳಾಗಿ ಬಳಸಲಾಗುತ್ತಿತ್ತು. ಈಗ ಬಣ್ಣ ಬಣ್ಣದ, ಹಲವು ಚಿತ್ತಾರದ ಕಾಲ. ವಿವಿಧ ಬಣ್ಣದ ಹಳೇ ಸೀರೆಗಳನ್ನೇ ತುಂಡರಿಸಿ ಕ್ರೋಷರ್‌ ಸಹಾಯದಿಂದ ನಾನಾ ವಿನ್ಯಾಸ, ಆಕಾರದಲ್ಲಿ ಹೆಣೆದು ಒಪ್ಪವಾದ ಕಾಪೆìಟ್‌ ಮಾಡಿಕೊಳ್ಳಬಹುದು.

-ಸೀರೆಯಿಂದ ಚೀಲ
ಹೊಲಿಗೆ ಗೊತ್ತಿದ್ದವರು, ಮನೆಯಲ್ಲಿ ಹೊಲಿಗೆ ಮಷಿನ್‌ ಇಟ್ಟುಕೊಂಡಿರುವವರು, ಹಳೆಯ ಸೀರೆಗಳನ್ನು ವ್ಯಾನಿಟಿ ಬ್ಯಾಗ್‌ನಂತೆ ಹೊಲಿದುಕೊಳ್ಳಬಹುದು. ಸಾದಾ ಸೀರೆಯನ್ನು ಚೀಲ ಮಾಡಿ, ಅದರ ಮೇಲೆ ಕಸೂತಿ ಹಾಕಿದರೆ ಇನ್ನೂ ಚೆನ್ನ. ಇಲ್ಲದಿದ್ದರೆ, ಸಿಂಪಲ್‌ ಆಗಿ ಹೊಲಿದ ಚೀಲಗಳನ್ನು ತರಕಾರಿ-ದಿನಸಿ ತರಲು ಬಳಸಬಹುದು.

-ವಂದನಾ ರವಿ.ಕೆ.ವೈ.

Advertisement

Udayavani is now on Telegram. Click here to join our channel and stay updated with the latest news.

Next