ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ
ಭೂತಗ್ರಾಮಮಿದಂ ಕೃತ್ಸ ಮವಶಂ ಪ್ರಕೃತೇರ್ವಶಾತ್
ಅನ್ನುವಂತೆ ಮನುಷ್ಯ ತನ್ನದೇ ಆದ ಶಕ್ತಿಯನ್ನು ಪ್ರಯೋಗಿಸಿ ಮತ್ತೆ ಮತ್ತೆ ಈ ಎಲ್ಲಾ ಪಂಚಭೂತ ಪರಂಪರೆಯನ್ನು ಸೃಷ್ಟಿಸಬೇಕೆಂದು ಹೊರಟಿದ್ದಾನೆ. ಈ ದಿಕ್ಕಿನಲ್ಲಿ ಯೋಚಿಸಿದಾಗ ಕಾಣುವುದು ಗದ್ದಲದ ನಡುವಿನ ತಣ್ಣನೆಯ ಶೋಕ… ಏಕೆಂದರೆ ಆಧುನಿಕತೆಯ ಬೆನ್ನಲ್ಲೇ ಇರುವ ಅದರ ಸವಾಲುಗಳು. ಜಗತ್ತಿನ ವರ್ತಮಾನವನ್ನು ವೀಕ್ಷಣೆ ಮಾಡಿದರೆ, ಜೀವನದಲ್ಲಿ ಬಾಲ್ಯ ಹಣ್ಣು, ತಾರುಣ್ಯ ಹೆಣ್ಣು, ಸಂಸಾರ ಹೊನ್ನು, ಮುಪ್ಪು ಮಣ್ಣನ್ನು ಬಯಸುವುದು ಜೀವನದ ಒಂದು ಮುಖವಾದರೆ, ಆಧುನಿಕತೆಯ ಹಾದಿ ತುಳಿಯುತ್ತಿರುವುದು ಜೀವನದ ಇನ್ನೊಂದು ಮುಖ.
“ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎನ್ನುವಂತೆ ನೆಮ್ಮದಿಯ ಸುಖ ಜೀವನಕ್ಕೆ ಆಧುನಿಕತೆ ಬೇಕು ನಿಜ, ಆದರೆ ಆಧುನಿಕತೆಯಿಂದ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಇರುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲವನ್ನೂ ಡಿಜಿಟಲ್ ಅನ್ನೋ ಕಾಲದಲ್ಲಿ ನಾವು ಒಂಥರ ಮಷಿನ್ ತರನೇ ಆಗಿಬಿಟ್ಟಿದ್ದೇವೆ. ಈ ಆಧುನಿಕತೆಯ ಮೆಚ್ಚಿನ ಪಯಣದಲ್ಲಿ ಜನರು ಮಾನಸಿಕ ಮತ್ತು ದೈಹಿಕ ಶಾಂತಿ, ಸುಖಗಳನ್ನು ನಾಶ ಮಾಡಿಕೊಳ್ಳುತ್ತಾ ಇದ್ದಾರೆ.
ಉದಾಹರಣೆಗೆ ಅಣುವಿದ್ಯುತ್ ಸ್ಥಾವರವನ್ನೇ ತೆಗೆದುಕೊಳ್ಳಿ. 941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ “ಕೈಗಾ’ ವಿಶ್ವದಾಖಲೆ ಬರೆಯಿತು. ಆದರೆ 2010-13ರಲ್ಲಿ 316 ಜನ ಕ್ಯಾನ್ಸರ್ ಪೀಡಿತರಿದ್ದ ಕೈಗಾದ ಸುತ್ತಮುತ್ತಲಿನ ಹಳ್ಳಿ ಈಗ ಶೇ. 200ರಷ್ಟು ಕ್ಯಾನ್ಸರ್ ಪೀಡಿತರಾಗಿರುವುದು ವಿಷಾದನೀಯ. ಇದನ್ನು ಬಿಟ್ಟು ಅನೇಕ ಪ್ರಾಣಿಗಳು, ಸಸ್ಯಗಳು ಕೂಡಾ ಅಳಿವಿನ ಅಂಚಿನಲ್ಲಿವೆ.
ಇನ್ನು ಡಿಜಿಟಲ್ ಯುಗದ ಕಡೆ ಮುಖ ಮಾಡಿದರೆ, ಅಂಗೈಯಲ್ಲಿ ಪ್ರಪಂಚ ನೋಡಬಹುದು. ಆದರೆ ನೆಟ್‌ವರ್ಕ್ ಇರಬೇಕು ಅಷ್ಟೇ. ಆದರೆ ಎಲ್ಲ ಕಡೆ ನೆಟ್‌ವರ್ಕ್ ಸಿಗುವಂತೆ ಮಾಡುವುದು ಡಿಜಿಟಲ್ ಯುಗದ ದೊಡ್ಡ ಸವಾಲು ಅಂದರೆ ತಪ್ಪಾಗಲಾರದು. ಈ ಆಧುನಿಕತೆ ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಅಂದರೆ ಮೊದಲೆಲ್ಲಾ ಎಷ್ಟೇ ನೋವು, ಅಳು ಬಂದರು ಬೇರೆಯವರಿಗೆ ನಮ್ಮ ನೋವು ಗೊತ್ತಾಗಬಾರದು ಅನ್ನೋ ಕಾಲವೊಂದಿತ್ತು. ಆದರೆ ಈಗ ಅದು ಹೋಗಿ I’m feeling sad ಅಂತಾ ತಾತ್ಕಾಲಿಕ ಭಾವನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕಸದಂತೆ ರಾಶಿ ಹಾಕಿಡುವ ಮಟ್ಟದಲ್ಲಿ ಆಧುನಿಕತೆ ನಮ್ಮನ್ನು ಆಳುತ್ತಾ ಇದೆ.
ಹೊಸತನದಲ್ಲೂ ಹಳೆಕಂಪನ್ನು ಇಟ್ಟುಕೊಂಡು ಬೆಳೆಯೋದು ಮತ್ತು ಬೆಳೆಸೋದು ದೊಡ್ಡ ಸವಾಲು.
ಜಿ.ರಮಾ, ಹೊಸಾಕುಳಿ ಎಸ್‌ಡಿಎಂ ಕಾಲೇಜು, ಹೊನ್ನಾವರ