ಅಗರ್ತಲಾ : ತ್ರಿಪುರಾದಲ್ಲಿ ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದುರಾಡಳಿತದ ಹಳೆಯ ಆಟಗಾರರು ಕೈಜೋಡಿಸಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.
ಧಲೈ ಜಿಲ್ಲೆಯ ಅಂಬಾಸಾದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ತಿಪ್ರಾ ಮೋಥಾದ ಬಗ್ಗೆ ಉಲ್ಲೇಖ ಮಾಡಿ, ಇತರ ಕೆಲವು ಪಕ್ಷಗಳು ಸಹ ವಿರೋಧ ಪಕ್ಷದ ಮೈತ್ರಿಗೆ ಹಿಂದಿನಿಂದ ಸಹಾಯ ಮಾಡುತ್ತಿವೆ ಆದರೆ ಅವರಿಗೆ ನೀಡುವ ಪ್ರತೀ ಮತವು ತ್ರಿಪುರಾವನ್ನು ಹಲವಾರು ವರ್ಷಗಳ ಹಿಂದೆ ಕೊಂಡೊಯ್ಯುತ್ತದೆ ಎಂದರು.
“ದುರಾಡಳಿತದ ಹಳೆಯ ಆಟಗಾರರು ಕೈಜೋಡಿಸಿದ್ದಾರೆ, ಇತರ ಕೆಲವು ಪಕ್ಷಗಳು ಅವರಿಗೆ ಹಿಂದಿನಿಂದ ಸಹಾಯ ಮಾಡುತ್ತಿವೆ – ಅವರ ಹೆಸರು ಅಥವಾ ಘೋಷಣೆ ಏನೇ ಇರಲಿ ಆದರೆ ಅವರಿಗೆ ಒಂದೇ ಒಂದು ಮತವು ತ್ರಿಪುರವನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ” ಎಂದು ಅವರು ಹೇಳಿದರು.
ಎಡ ಮತ್ತು ಕಾಂಗ್ರೆಸ್ ಸರ್ಕಾರಗಳು ಬುಡಕಟ್ಟು ಜನಾಂಗದವರ ನಡುವೆ ಒಡಕು ಮೂಡಿಸಿದರೆ, ಬ್ರೂಸ್ ಸೇರಿದಂತೆ ಅವರ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಕೆಲಸ ಮಾಡಿದೆ ಎಂದರು.ಭಾರತದಾದ್ಯಂತ ಆದಿವಾಸಿಗಳ ಉನ್ನತಿಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದರು.
ಈಶಾನ್ಯ ರಾಜ್ಯದಲ್ಲಿ ಅಭಿವೃದ್ಧಿಯ ಪಥವನ್ನು ಮುಂದುವರಿಸಲು “ಡಬಲ್ ಇಂಜಿನ್” ಸರ್ಕಾರಕ್ಕೆ ಮತ ನೀಡಿ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಎರಡಲಗಿನ ಕತ್ತಿಯಿಂದ ಎಚ್ಚರದಿಂದಿರಿ, ಅವರು ಜನರಿಗೆ ಪ್ರಯೋಜನವಾಗುವ ಎಲ್ಲಾ ಯೋಜನೆಗಳನ್ನು ನಿಲ್ಲಿಸಲು ಬಯಸುತ್ತಾರೆ ಎಂದರು.