ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2021ರ ಮಾರ್ಚ್ ಅಥವಾ ಏಪ್ರಿಲ್ ಅಂತ್ಯದೊಳಗೆ 100, 10 ಹಾಗೂ 5 ರೂಪಾಯಿ ಹಳೆಯ ನೋಟುಗಳನ್ನು ಹಿಂಪಡೆಯಲು ಸಿದ್ಧತೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ಆದರೆ ಈ ಬಗ್ಗೆ ಆರ್ ಬಿಐ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.
ಇದನ್ನೂ ಓದಿ:ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ
ಹಲವು ಮಾಧ್ಯಮಗಳ ವರದಿ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ.ಮಹೇಶ್ ಅವರು, ಜಿಲ್ಲಾ ಮಟ್ಟದ ಭದ್ರತಾ ಸಮಿತಿ(ಡಿಎಲ್ ಎಸ್ ಸಿ), ಜಿಲ್ಲಾ ಮಟ್ಟದ ಕರೆನ್ಸಿ ನಿರ್ವಹಣಾ ಸಮಿತಿ(ಡಿಎಲ್ ಎಂಸಿ) ಸಭೆಯಲ್ಲಿ ಮಾತನಾಡುತ್ತ, ಆರ್ ಬಿಐ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಹಳೆಯ 100 , 10 ಹಾಗೂ 5 ರೂಪಾಯಿ ನೋಟುಗಳನ್ನು ಶಾಶ್ವತವಾಗಿ ಚಲಾವಣೆಯಿಂದ ಹಿಂಪಡೆಯಲು ಸಿದ್ಧತೆ ನಡೆಸುತ್ತಿದೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಸತತ ಎರಡನೇ ದಿನ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ; ತಿಂಗಳಲ್ಲಿ 8 ಬಾರಿ ಬೆಲೆ ಬದಲಾವಣೆ
ಇದಕ್ಕೆ ಪೂರಕವಾಗಿ ಈಗಾಗಲೇ 100, 10 ಹಾಗೂ 5 ರೂಪಾಯಿಯ ನೂತನ ನೋಟುಗಳು ಚಲಾವಣೆಗೆ ಬಂದಿದ್ದು, ಇದರಿಂದ ಹಳೆಯ ನೋಟುಗಳ ಬದಲಾವಣೆಗೆ ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.
2019ರಲ್ಲಿ ಭಾರತದ ಆರ್ ಬಿಐ 100 ರೂಪಾಯಿಯ ನೂತನ ಕರೆನ್ಸಿಯನ್ನು ಬಿಡುಗಡೆ ಮಾಡಿತ್ತು. ಮೂಲಗಳ ಪ್ರಕಾರ, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ನಡೆದಂತಹ ಕಳವಳವನ್ನು ತಪ್ಪಿಸುವ ನಿಟ್ಟಿನಲ್ಲಿ ಆರ್ ಬಿಐ ಯಾವುದೇ ವಿಧದ ಹಳೆಯ ನೋಟುಗಳನ್ನು ವಾಪಸ್ ಪಡೆಯುವುದಕ್ಕೆ ಒಲವು ತೋರಿಸಿಲ್ಲ ಎಂದು ಮತ್ತೊಂದು ವರದಿ ವಿವರಿಸಿದೆ.