Advertisement

ಸಂಪುಟದಲ್ಲಿ ಹಳೇ ಮೈಸೂರಿಗೆ 4 ಸ್ಥಾನ; ಕರಾವಳಿ, ಕಲ್ಯಾಣ, ಮಧ್ಯ ಕರ್ನಾಟಕಕ್ಕೂ ಇಲ್ಲ

01:20 AM Jun 10, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಈ ಬಾರಿ ಕರ್ನಾಟಕದಿಂದ ಬರೋಬ್ಬರಿ ಐದು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಾದೇಶಿಕತೆ, ಜಾತಿ, ಹಿರಿತನ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಾನಮಾನ ನೀಡಲಾಗಿದೆ.

Advertisement

ಪ್ರಬಲ ಮೇಲ್ಜಾತಿಗಳಾದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಅವಕಾಶ ಸಿಕ್ಕಿದ್ದು, ಎಸ್ಸಿ-ಎಸ್ಟಿ, ಓಬಿಸಿ ವರ್ಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ.ಪ್ರಾದೇಶಿಕ ಲೆಕ್ಕಾಚಾರದ ಪ್ರಕಾರ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಸ್ಥಾನಗಳು ಲಭಿಸಿವೆ.ಇನ್ನು ಕಿತ್ತೂರು ಕರ್ನಾಟಕ ಭಾಗಕ್ಕೆ ಒಂದು ಸ್ಥಾನ ಮಾತ್ರ ಲಭಿಸಿದ್ದು, ಪ್ರಹ್ಲಾದ್‌ ಜೋಶಿ ಈ ಪ್ರದೇಶವನ್ನು ಪ್ರತಿನಿಧಿಸಿದಂತಾಗಿದೆ. ಕಲ್ಯಾಣ ಕರ್ನಾಟಕದಿಂದ ಈ ಬಾರಿ ಬಿಜೆಪಿಯಿಂದ ಯಾರೂ ಗೆದ್ದಿಲ್ಲ. ಹೀಗಾಗಿ ಅವಕಾಶ ನೀಡುವ ಪ್ರಶ್ನೆ ಉದ್ಭವಿಸಿಲ್ಲ. ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಸಂಪುಟದಲ್ಲಿ ಸ್ಥಾನ ಪಡೆದಿದ್ದ ಶೋಭಾ ಕರಂದ್ಲಾಜೆ ಕರಾವಳಿ ಭಾಗವನ್ನು ಪ್ರತಿನಿಧಿಸಿದ್ದರು. ಈ ಬಾರಿ ಕರಾವಳಿ ಭಾಗದಿಂದ ಆಯ್ಕೆಗೊಂಡ ಮೂವರು ಮೊದಲ ಬಾರಿಗೆ ಸಂಸದರಾಗುತ್ತಿದ್ದಾರೆ. ಹೀಗಾಗಿ ಈ ಭಾಗಕ್ಕೂ ಸಚಿವ ಸ್ಥಾನ ದಕ್ಕಿಲ್ಲ. ಮಧ್ಯ ಕರ್ನಾಟಕಕ್ಕೂ ಯಾವುದೇ ಅವಕಾಶ ಸಿಕ್ಕಿಲ್ಲ.

ಜಾತಿ ಸಮೀಕರಣ ಏನು ?: ಸಂಪುಟದಲ್ಲಿ ಇಬ್ಬರು ಬ್ರಾಹ್ಮಣರು ಹಾಗೂ ಇಬ್ಬರು ಒಕ್ಕಲಿಗರಿಗೆ ಅವಕಾಶ ಲಭಿಸಿದೆ. ಲಿಂಗಾಯತ ಕೋಟಾದಲ್ಲಿ ವಿ.ಸೋಮಣ್ಣ ಅವರಿಗೆ ಅವಕಾಶ ನೀಡಲಾಗಿದೆ. ನಿರ್ಮಲಾ ಸೀತಾರಾಮನ್‌ ಹಾಗೂ ಪ್ರಹ್ಲಾದ್‌ ಜೋಶಿ ಬ್ರಾಹ್ಮಣರಾಗಿದ್ದು, ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಒಕ್ಕಲಿಗ ಕೋಟಾದಲ್ಲಿ ಮಂತ್ರಿಗಳಾ ಗಿದ್ದಾರೆ. ಈ ಹಿಂದೆ ಸುರೇಶ್‌ ಅಂಗಡಿ ಲಿಂಗಾಯತ ಸಮುದಾಯ ಕೋಟಾದಡಿ ಮಂತ್ರಿಯಾಗಿದ್ದರಲ್ಲದೆ, ಕಿತ್ತೂರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅವರ ಅಕಾಲಿಕ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಇತ್ತ ಒಕ್ಕಲಿಗ ಕೋಟಾದಲ್ಲಿ ಡಿ.ವಿ. ಸದಾನಂದಗೌಡ ಸಂಪುಟ ಸಚಿವರಾಗಿದ್ದರಲ್ಲದೆ, ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಕಲ್ಪಿಸಿಕೊಟ್ಟಿದ್ದರು.

ಜಿ.ಎಂ. ಸಿದ್ದೇಶ್ವರ್‌ ಅವರನ್ನು ಮಂತ್ರಿ ಮಾಡುವ ಮೂಲಕ ಲಿಂಗಾಯತರಿಗೆ ಮತ್ತೂಂದು ಅವಕಾಶ ಕೊಟ್ಟು, ಮಧ್ಯ ಕರ್ನಾಟಕವನ್ನು ಮುನ್ನೆಲೆಗೆ ತರಲಾಗಿತ್ತು. ಭಗವಂತ್‌ ಖೂಬಾರಿಗೆ ಮಂತ್ರ ಪಟ್ಟ ಗಿಟ್ಟಿದ್ದರಿಂದ ಕಲ್ಯಾಣ ಕರ್ನಾಟಕಕ್ಕೂ ಪ್ರಾಶಸ್ತ್ಯ ದೊರೆತಿತ್ತು.

ಅದೇ ರೀತಿ ದಲಿತ ಸಮುದಾಯದ ಎ. ನಾರಾಯಣಸ್ವಾಮಿ ಅವರಿಗೆ ಕಳೆದ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿತ್ತು. ಈ ಬಾರಿ ದಲಿತ ಸಮುದಾಯದಕ್ಕೆ ಅವಕಾಶ ನೀಡಲಾಗಿಲ್ಲ.

Advertisement

ಉತ್ತರಕ್ಕೊಬ್ಬರೇ ಕೇಂದ್ರ ಸಂಪುಟ ದರ್ಜೆ ಸಚಿವ
ಹುಬ್ಬಳ್ಳಿ: ಮೋದಿ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದ ಉತ್ತರ ಕರ್ನಾಟಕದ ಏಕೈಕ ಸಚಿವ ಪ್ರಹ್ಲಾದ ಜೋಶಿ. ಸತತ ಎರಡನೇ ಬಾರಿಗೆ ಕ್ಯಾಬಿ ನೆಟ್‌ ಸಚಿವ ಸ್ಥಾನ ಪಡೆದ ಕೀರ್ತಿಗೆ ಜೋಶಿ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕಕ್ಕೆ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಸಚಿವ ಸ್ಥಾನ ಕಡಿಮೆ, ಕ್ಯಾಬಿನೆಟ್‌ ಸಚಿವ ಸ್ಥಾನ ಇನ್ನಷ್ಟು ಕಡಿಮೆ ಎನ್ನಬಹುದು. ಆದರೆ, ಪ್ರಹ್ಲಾದ ಜೋಶಿ ಸತತ 2ನೇ ಬಾರಿಗೆ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಡಾ. ಯುಪಿ ಎ ಸರ್ಕಾರ-1 ಮತ್ತು 2 ಹಾಗೂ ಪ್ರಧಾನಿ ಮೋದಿ ನೇತೃತ್ವದ 3 ಅವಧಿ ಸರ್ಕಾರ ನೋಡಿದರೆ ಉತ್ತರಕ್ಕೆ ಕ್ಯಾಬಿನೆಟ್‌ ರ್‍ಯಾಂಕ್‌ ದೊರೆತಿದ್ದು ಕಡಿಮೆ.

 

Advertisement

Udayavani is now on Telegram. Click here to join our channel and stay updated with the latest news.

Next