Advertisement

Andhra; ಸಿಎಂ ಆಗಿ ಚಂದ್ರ ಬಾಬು ನಾಯ್ಡು ಪ್ರಮಾಣವಚನ: ಪ್ರಧಾನಿ ಮೋದಿ ಆತ್ಮೀಯ ಅಪ್ಪುಗೆ

12:24 PM Jun 12, 2024 | Team Udayavani |

ವಿಜಯವಾಡ: ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಜನಸೇನಾ ಪಕ್ಷದ ಸ್ಥಾಪಕ, ಖ್ಯಾತ ನಟ ಪವನ್ ಕಲ್ಯಾಣ್, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಮತ್ತು ಜನಸೇನಾ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಪ್ರಮಾಣ ವಚನ ಬೋಧಿಸಿದರು

Advertisement

ಪ್ರಮಾಣ ವಚನ ಸ್ವೀಕರಿಸಿದ ನಂತರ ನಾಯ್ಡು ಅವರು ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್ ಡಿ ಎ ಮಿತ್ರ ಪಕ್ಷದ ಪ್ರಮುಖ ನಾಯಕ, ಸಚಿವ ರಾಮದಾಸ್ ಅಠವಳೆ , ಅನುಪ್ರಿಯಾ ಪಟೇಲ್, ಚಿರಾಗ್ ಪಾಸ್ವಾನ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಮತ್ತು ಮಾಜಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ದಕ್ಷಿಣ ಭಾರತ ಸಿನಿ ರಂಗದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ಚಿರಂಜೀವಿ, ರಾಮ್ ಚರಣ್, ನಂದಮೂರಿ ಬಾಲಕೃಷ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಡದ ಗನ್ನಾವರಂ ವಿಮಾನ ನಿಲ್ದಾಣದ ಬಳಿ ಇರುವ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಿತು.

ಚಂದ್ರಬಾಬು ನಾಯ್ಡು ನಾಲ್ಕನೇ ಅವಧಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ಎರಡು ಅವಧಿಗಳಲ್ಲಿ, ನಾಯ್ಡು ಅವರು ಅವಿಭಜಿತ ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ.

Advertisement

ನಾದೆಂದ್ಲ ಮನೋಹರ್, ಪೊಂಗೂರು ನಾರಾಯಣ, ಅನಿತಾ ವಂಗಲಪುಡಿ, ಸತ್ಯಕುಮಾರ್ ಯಾದವ್ ಕೊಲ್ಲು, ರವೀಂದ್ರನ್ ಕಿಂಜರಾಪು ಅಚ್ಚನ್ನಾಯ್ಡು, ಆನಂ ರಾಮನಾರಾಯಣ ರೆಡ್ಡಿ,ನಸ್ಯಂ ಮೊಹಮ್ಮದ್ ಫಾರೂಕ್ ಸೇರಿ 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜನ ಸೇನೆಗೆ ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಸತ್ಯ ಕುಮಾರ್ ಯಾದವ್ ನಾಯ್ಡು ಸಂಪುಟದಲ್ಲಿ ಬಿಜೆಪಿಯ ಏಕೈಕ ಸಚಿವರಾಗಿದ್ದಾರೆ.

24 ಮಂದಿ ಸಚಿವರ ಪೈಕಿ 17 ಮಂದಿ ಹೊಸಬರಾಗಿದ್ದಾರೆ. ಸಂಪುಟದಲ್ಲಿ ಮೂವರು ಮಹಿಳೆಯರು, ಎಂಟು ಹಿಂದುಳಿದ ವರ್ಗಗಳ ಮುಖಂಡರು, ಇಬ್ಬರು ಎಸ್‌ಸಿಗಳು, ಒಬ್ಬರು ಎಸ್‌ಟಿ ಮತ್ತು ಒಬ್ಬ ಮುಸ್ಲಿಂಗೆ ಪ್ರಾತಿನಿಧ್ಯ ನೀಡಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ 175 ಸ್ಥಾನಗಳ ಪೈಕಿ 164 ಸ್ಥಾನಗಳನ್ನು ಗೆದ್ದುಕೊಂಡು ಐತಿಹಾಸಿಕ ಜಯ ಸಾಧಿಸಿತ್ತು. ಟಿಡಿಪಿ ಸ್ಪರ್ಧಿಸಿದ 144 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದರೆ, ಜನಸೇನಾ ಸ್ಪರ್ಧಿಸಿದ ಎಲ್ಲಾ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಸ್ಪರ್ಧಿಸಿದ 10 ಸ್ಥಾನಗಳ ಪೈಕಿ ಎಂಟನ್ನು ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next