Advertisement

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

01:17 AM Jun 19, 2024 | Team Udayavani |

ಹೊಸದಿಲ್ಲಿ: “ನನ್ನನ್ನು ಗಂಗಾ ಮಾತೆ ದತ್ತು ಸ್ವೀಕರಿಸಿದ್ದಾಳೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತೃತೀಯ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮಂಗಳವಾರ ಮೊದಲ ಬಾರಿಗೆ ಸ್ವಕ್ಷೇತ್ರ ಉತ್ತರಪ್ರದೇಶದ ವಾರಾಣಸಿಗೆ ಮೋದಿ ಭೇಟಿ ನೀಡಿದರು.

Advertisement

ಈ ವೇಳೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 17ನೇ ಕಂತಿನಲ್ಲಿ 9.26 ಕೋಟಿ ರೈತರಿಗೆ 20 ಸಾವಿರ ಕೋಟಿ ರೂ. ಮೊತ್ತವನ್ನು ಅವರು ಬಿಡುಗಡೆ ಮಾಡಿದರು. ಕೃಷಿ ಸಖಿ ತರಬೇತಿ ಪಡೆದ 30 ಸಾವಿರ ಸ್ವಸಹಾಯ ಗುಂಪುಗಳಿಗೆ ಪ್ರಮಾಣಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಅವರು, “ರೈತರು, ಮಹಿಳೆಯರು, ಯುವ ಜನತೆ ಮತ್ತು ಬಡವರನ್ನು ದೇಶದ ಅಭಿವೃದ್ಧಿಯ ಪ್ರಮುಖ ನಾಲ್ಕು ಆಧಾರ ಸ್ತಂಭ ಎಂದು ನಾನು ಪರಿಗಣಿಸಿದ್ದೇನೆ. ಹಾಗಾಗಿ 3ನೇ ಬಾರಿಗೆ ಹೊಸ ಸರಕಾರ ನಿರ್ಮಿಸಿದ ಬಳಿಕ ಮೊದಲ ಆದ್ಯತೆಯಾಗಿ ಬಡವರು ಮತ್ತು ರೈತರ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. 3 ಸಾವಿರ ಕೋಟಿ ಪಕ್ಕಾ ಮನೆಗಳ ನಿರ್ಮಾಣದ ಘೋಷಣೆ ಹಾಗೂ ಪಿಎಂ ಕಿಸಾನ್‌ ಯೋಜನೆಯ ವಿಸ್ತರಣೆ ಈ ನಿಟ್ಟಿನ ಮೊದಲ ಹೆಜ್ಜೆ’ ಎಂದಿದ್ದಾರೆ.

ಕಾಶಿಯ ಜನತೆ ಆರಿಸಿದ್ದಾರೆ
ಸತತ ಮೂರನೇ ಬಾರಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ವಾರಾಣಸಿಯ ಜನರಿಗೆ ಮೋದಿ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಯಾಗಿಸಿದ್ದಕ್ಕೆ ವಾರಾ ಣಸಿಯ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ.

“ಕಾಶಿಯ ಜನರು ಬರೀ ಸಂಸದನನ್ನು ಅಲ್ಲ, ಪ್ರಧಾನಿಯನ್ನು ಸತತ 3ನೇ ಬಾರಿಗೆ ಆಯ್ಕೆ ಮಾಡಿದ್ದೀರಿ, ನಿಮ್ಮ ವಿಶ್ವಾಸವೇ ನಾನು ಜನರಿಗಾಗಿ ಹಗಲಿರುಳು ಶ್ರಮಿಸಲು ಪ್ರೇರಣೆಯಾಗಿದೆ. ಕಾಶಿ ಕೇವಲ ಸಾಂಸ್ಕೃತಿಕ ನಗರಿಯಷ್ಟೇ ಅಲ್ಲ, ನಗರಾಭಿವೃದ್ಧಿಗೂ ಮಾದರಿ ಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.

Advertisement

ಗಂಗಾ ಮಾತೆಗೆ
ನಾನು ದತ್ತು ಪುತ್ರ
ಕಾಶಿ ವಿಶ್ವನಾಥ, ಗಂಗಾ ಮಾತೆಯ ಆಶೀರ್ವಾದದಿಂದ ಹಾಗೂ ಕಾಶಿ ಜನತೆಯ ಪ್ರೀತಿಯಿಂದ 3ನೇ ಬಾರಿಗೆ ನಾನು ದೇಶದ “ಪ್ರಧಾನ ಸೇವಕ’ ನಾಗಿದ್ದೇನೆ. ಗಂಗಾ ಮಾತೆ ನನ್ನನ್ನು ದತ್ತು ಪಡೆದಿರುವಂತೆ ತೋರುತ್ತಿದೆ. ಹಾಗಾಗಿಯೇ ನಾನು ಇಲ್ಲಿಯವರಲ್ಲೇ ಒಬ್ಬನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಕೃಷಿಸಖಿ ಸಂವಾದದಲ್ಲಿ ರಾಜ್ಯದ ಅನುಷಾ, ಲತಾ
ನೈಸರ್ಗಿಕ ಕೃಷಿ ತರಬೇತಿ ಪಡೆದಿರುವ ಕೃಷಿಸಖಿಯ ರೊಂದಿಗೆ ಮೋದಿ ನಡೆಸಿದ ಸಂವಾದದಲ್ಲಿ ಕಲಬುರಗಿ ಜಿಲ್ಲೆಯ ಕೃಷಿಸಖಿ ಅನುಷಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ ಹೆಗಡೆ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next