ಬಂದರು: ಶತಮಾನಗಳ ಇತಿಹಾಸ ಹೊಂದಿದ್ದ ಹಾಗೂ ಮಂಗಳೂರಿನ ಸ್ಥಳೀಯಾಡಳಿತದಲ್ಲಿ ಮಹತ್ವದ ನಿರ್ಧಾರಗಳಿಗೆ ಸಾಕ್ಷಿಯಾಗಿದ್ದ ಹಳೆ ಬಂದರು ಸ್ಟರಕ್ ವೃತ್ತದ ಬಳಿಯ ಮುನ್ಸಿಪಾಲಿಟಿ ಕಚೇರಿ ಕಟ್ಟಡವು(ಹಳೆ ಪಾಲಿಕೆ ಕಟ್ಟಡ) ಇನ್ನು ನೆನಪು ಮಾತ್ರ!
ಜಿಲ್ಲಾಧಿಕಾರಿ ಕಚೇರಿಯಿಂದ ಮೀನುಗಾರಿಕೆ ಬಂದರಿಗೆ ತೆರಳುವ ರಸ್ತೆಯ ಬಲಬದಿಯಲ್ಲಿರುವ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ಮುಂಭಾಗದಲ್ಲಿನ ಹಿಂದಿನ ಮುನ್ಸಿ ಪಾಲಿಟಿ ಕಟ್ಟಡವನ್ನು ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವು ಗೊಳಿಸಲಾಗಿದೆ. ಸಂಪೂರ್ಣ ಶಿಥಿಲಾ ವಸ್ಥೆಯಲ್ಲಿದ್ದ ಈ ಕಟ್ಟಡದ ಜಾಗವನ್ನು ರಸ್ತೆ ಅಭಿವೃದ್ಧಿ ಹಾಗೂ ಪಾಲಿಕೆಯ ಇತರ ಕಾರ್ಯಗಳಿಗೆ ಮೀಸಲಿಡಲು ಉದ್ದೇಶಿಸಲಾಗಿದೆ.
ಪಾಲಿಕೆಯ 45ನೇ ಪೋರ್ಟ್ ವಾರ್ಡ್‌ಗೆ ಸಂಬಂಧಿಸಿ ಸ್ಮಾರ್ಟ್ ಸಿಟಿಯಿಂದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯು ಪ್ರಗತಿಯಲ್ಲಿದೆ. ಬದ್ರಿಯಾ ಶಾಲೆ ರಸ್ತೆ ಜಂಕ್ಷನ್‌ಗೆ ಸಂಪರ್ಕಿ ಸುವ ಕೆನರಾ ಚೇಂಬರ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ. ಇದರಂತೆ ಪಾಲಿಕೆ ಹಳೆ ಕಚೇರಿ ಕಟ್ಟಡ ವನ್ನು ನೆಲಸಮಗೊಳಿಸುವಂತೆ ಸ್ಮಾರ್ಟ್ ಸಿಟಿ ಯಿಂದ ಮಂಗಳೂರು ಪಾಲಿಕೆಗೆ ಪತ್ರ ಬರೆಯಲಾಗಿತ್ತು.
ಸ್ಮಾರ್ಟ್‌ಸಿಟಿಯವರು ಪಾಲಿಕೆಗೆ ಸಲ್ಲಿಸಿರುವ ನಕ್ಷೆಯ ಅನ್ವಯ ಒಟ್ಟು 35.60 ಚ.ಮೀ. (0.88 ಸೆಂಟ್ಸ್)ಜಾಗವು ರಸ್ತೆ ಅಭಿವೃದ್ಧಿಗೆ ಆವಶ್ಯಕವಾಗಿದ್ದು, ಹೀಗಾಗಿ ಕಟ್ಟಡ ಇರುವ ಒಂದು ಭಾಗವನ್ನು ತೆರವುಗೊಳಿಸಿದರೆ ಉಳಿದ ಭಾಗವು ಅಪಾಯಕ್ಕೆ ಕಾರಣವಾಗಬಹುದು. ಈ ಕಾರಣದಿಂದ ಶಿಥಿಲಾವಸ್ಥೆಯಲ್ಲಿರುವ, ಉಪಯೋಗವಿಲ್ಲದ ಕಟ್ಟಡದ ಭಾಗವನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ನೀಡಲು ತೀರ್ಮಾನಿಸಲಾಗಿತ್ತು.
1909ರ ಮುನ್ಸಿಪಾಲಿಟಿ ಕಚೇರಿ ಇಲ್ಲಿತ್ತು! 1866ರಲ್ಲಿ ಮಂಗಳೂರು ಮುನ್ಸಿಪಾಲಿಟಿ ಆರಂಭವಾಯಿತು. 1909ರ ವರೆಗೆ ಮಂಗಳೂರು ಮುನ್ಸಿಪಾಲಿಟಿಯ ಕಾರ್ಯಚಟುವಟಿಕೆಗಳು ಹಾಗೂ ಸಭೆಗಳು ಜಿಲ್ಲಾ ಕಲೆಕ್ಟರ್ ಕಚೇರಿ (ಡಿಸಿ ಕಚೇರಿ)ಯಲ್ಲಿ ನಡೆಯಿತು. ಬಳಿಕ ಮುನ್ಸಿಪಾಲಿಟಿ ಕಚೇರಿಯು ಬಂದರು ರಸ್ತೆಯ ಕಟ್ಟಡಕ್ಕೆ ವರ್ಗಾವಣೆಗೊಂಡಿತು. 1909 ಫೆ. 22 ರಿಂದ ಈ ಕಟ್ಟಡದಲ್ಲಿ ಕಾರ್ಯಚಟುವಟಿಕೆಗಳು ನಡೆಯಿತು. ಇದಕ್ಕೂ ಮೊದಲು ಈ ಕಟ್ಟಡವನ್ನು ಈಸ್ಟ್ ಇಂಡಿಯಾ ಕಂಪೆನಿಯವರು ಉಗ್ರಾಣವಾಗಿ ಬಳಸುತ್ತಿದ್ದರು ಎಂದು ಹೇಳಲಾಗಿದೆ. 1979ರಲ್ಲಿ ಮುನ್ಸಿಪಾಲಿಟಿಯನ್ನು ರದ್ದುಗೊಳಿಸಲಾಯಿತು. ಬಳಿಕ ಆಡಳಿತಾಧಿಕಾರಿ (ಅಂದಿನ ಜಿಲ್ಲಾಧಿಕಾರಿ) ಅಧಿಕಾರಕ್ಕೆ ಒಳಪಟ್ಟಿತು. ಬಳಿಕ 1980 ಜೂ. 23ರಂದು ಮಂಗಳೂರು ಪಾಲಿಕೆಯಾಗಿ ಪರಿವರ್ತನೆಗೊಂಡಿತು. 1984ರಲ್ಲಿ ಪಾಲಿಕೆಗೆ ಮೊದಲ ಚುನಾವಣೆ ನಡೆಯಿತು. ಅಲ್ಲಿಂದ 1988ರ ವರೆಗೆ ಬಂದರ್‌ನ ಕಟ್ಟಡವೇ ಪಾಲಿಕೆ ಕಚೇರಿಯಿತ್ತು. ಬಳಿಕ ಲಾಲ್‌ಬಾಗ್‌ನಲ್ಲಿ ಪಾಲಿಕೆ ಕಟ್ಟಡಕ್ಕೆ ಆಡಳಿತ ವ್ಯವಸ್ಥೆ ವರ್ಗಾವಣೆಯಾಯಿತು ಎಂದು “ಮಂಗಳೂರು ದರ್ಶನ’ ಪುಸ್ತಕದಲ್ಲಿ ಉಲ್ಲೇಖವಿದೆ.