Advertisement

ಬೆಳಗೊಳದಲ್ಲಿ ಹಳೆಗನ್ನಡ ಸಾಹಿತ್ಯ ಸಮ್ಮೇಳನ

12:13 PM Apr 18, 2018 | |

ಬೆಂಗಳೂರು: ಜನಮಾನಸದಿಂದ ದೂರವಾಗುತ್ತಿರುವ ಹಳೆಗನ್ನಡದ ವೈಭವವನ್ನು ಮತ್ತೆ ಮುನ್ನೆಲೆಗೆ ತರಲು ಕನ್ನಡ ಸಾಹಿತ್ಯ ಪರಿಷತ್‌ ನಿರ್ಧರಿಸಿದೆ. ಆದಿ ಕವಿ ಪಂಪ, ರನ್ನ, ಕುಮಾರವ್ಯಾಸ, ಹರಿಹರ ಮತ್ತು ರಾಘವಾಂಕ ಸೇರಿ ಹಳೆಗನ್ನಡ ಸಾಹಿತಿಗಳ ಮಹಾಕಾವ್ಯಗಳು ಇನ್ನೊಮ್ಮೆ ಅನುರಣಿಸಲಿವೆ.

Advertisement

ಹೌದು, ಹೊಸ ತಲೆಮಾರಿಗೆ ಹಳೆಗನ್ನಡದ ಗತ ವೈಭವ ಪರಿಚಯಿಸುವ ನಿಟ್ಟಿನಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ “ಹಳೆಗನ್ನಡ ಸಾಹಿತ್ಯ ಸಮ್ಮೇಳನ’ ಆಯೋಜನೆಗೆ ಕಸಾಪ ನಿರ್ಧರಿಸಿದೆ. ವಿಶೇಷವೆಂದರೆ, ಈ ರೀತಿ ಹಳೆಗನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಇದೇ ಪ್ರಥಮ. ಈ ಅಪರೂಪದ ಸಮ್ಮೇಳನಕ್ಕೆ ಜೈನ ಕಾಶಿ ಶ್ರವಣಬೆಳಗೊಳ ಸಾಕ್ಷಿಯಾಗಲಿದೆ.

ಸಮ್ಮೇಳನದ ಆಯೋಜನೆ ಸಂಬಂಧ‌ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಸದ್ಯದಲ್ಲೇ “ಕನ್ನಡ ಸಾಹಿತ್ಯದ ತಲಕಾವೇರಿ’ ಎಂದು ವರ್ಣಿಸಿಕೊಂಡಿರುವ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಜೈನ ಮುನಿಗಳಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. 

ಜೂನ್‌ನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳೂ ಇದಕ್ಕೆ ಸಮ್ಮತಿಸಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಭೋಜನ ವ್ಯವಸ್ಥೆ ಮಾಡಲು ಸ್ವಾಮೀಜಿ ಮುಂದೆ ಬಂದಿದ್ದಾರೆ. ಉಳಿದ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಕಸಾಪ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಎರಡು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ, ಹಂಪ ನಾಗರಾಜಯ್ಯ, ಮೈಸೂರಿನ ವೆಂಕಟಾಚಲ ಶಾಸ್ತ್ರೀ ಮತ್ತು ಸಂಶೋಧಕ ಷ.ಶೆಟ್ಟರ್‌ ಹೆಸರುಗಳಿವೆ. ಇವರಲ್ಲಿ ಒಬ್ಬರನ್ನು ಶೀಘ್ರ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

ಹಳೆಗನ್ನಡ ಸಾಹಿತ್ಯವನ್ನು ಯುವಪೀಳಿಗೆಗೆ ಮತ್ತೆ ನೆನಪಿಸುವ ಅಗತ್ಯವಿದೆ. ಇದರೊಂದಿಗೆ ಹಳೆಗನ್ನಡ ಸಾಹಿತಿಗಳ ಬಗ್ಗೆಯೂ ಜನರಿಗೆ ತಿಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಕಸಾಪ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಮುಂದಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ತಿಳಿಸಿದರು.

ಸಾಹಿತ್ಯದ ಬೇರುಗಳಿರುವುದೇ ಹಳೆಗನ್ನಡ ಸಾಹಿತ್ಯದಲ್ಲಿ. ಅದನ್ನು ಅರಿತರೆ ಹೊಸ ಕಾಲದ ಬರವಣಿಗೆಗೆ ತುಂಬಾ ಶಕ್ತಿ ಕೊಡುತ್ತದೆ. ಹೀಗಾಗಿ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕಸಾಪ ನಡೆ ಸ್ವಾಗತಾರ್ಹ.
-ಹಂಪ ನಾಗರಾಜಯ್ಯ, ಸಾಹಿತಿ

ಪಠ್ಯಕ್ರಮದಿಂದ ಹಳೆಗನ್ನಡ ಸಾಹಿತ್ಯ ದೂರವಾಗುತ್ತಿದೆ. ಸಾಹಿತ್ಯ ಓದಿ, ಪದ ಬಿಡಿಸಿ ಅರ್ಥ ಹೇಳುವುದಕ್ಕೆ ತಯಾರಿ ಬೇಕು. ಗಮಕಿಗಳ ಪ್ರಯೋಜನ ಪಡೆದು ಹಳೆಗನ್ನಡವನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವಾಗಬೇಕು. 
-ಸಿದ್ದಲಿಂಗಯ್ಯ, ಕವಿ

ಕಾವ್ಯ ಸ್ವಾದನೆ ಮಾಡುವ ಪರಂಪರೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಸಾಪ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಹೊರಟಿರುವುದು ಖುಷಿ ತಂದಿದೆ.
-ಡಾ.ಕೆ.ಮರುಳಸಿದ್ದಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next