Advertisement

95 ವರ್ಷಗಳಷ್ಟು ಹಳೆಯ ಗುರುಪುರಸೇತುವೆ ಕುಸಿಯುವ ಭೀತಿ!

10:26 AM May 07, 2018 | Team Udayavani |

ಗುರುಪುರ: ಮಂಗಳೂರಿನಿಂದ ಮೂಡಬಿದಿರೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಫ‌ಲ್ಗುಣಿ ನದಿಗೆ 95 ವರ್ಷಗಳ ಹಿಂದೆ ಅಡ್ಡಲಾಗಿ ಕಟ್ಟಿದ ಸೇತುವೆ ಯಾವುದೇ ಕ್ಷಣದಲ್ಲೂ ಕುಸಿದುಬೀಳಬಹುದು.

Advertisement

ನಿತ್ಯವೂ ಅನೇಕ ಭಾರೀ ಗಾತ್ರದ ವಾಹನಗಳು, ಬಸ್‌ ಗಳು ಈ ಸೇತುವೆ ಮೂಲಕ ಕಾರ್ಕಳ, ಮೂಡಬಿದಿರೆ ಮಾರ್ಗವಾಗಿ ಮಂಗಳೂರು ಹಾಗೂ ಮಂಗಳೂರಿನಿಂದ ಮೂಡಬಿದಿರೆ ಮೂಲಕ ಕಾರ್ಕಳಕ್ಕೆ ಸಂಚರಿಸುತ್ತದೆ. ಸಂಪೂರ್ಣ ಶಿಥಿಲಾವ ಸ್ಥೆಯಲ್ಲಿರುವ ಈ ಸೇತುವೆ ವಾಹನ ಸಂಚಾರದ ವೇಳೆ ಮುರಿದು ಬಿದ್ದರೆ ಭಾರೀ ದುರಂತವೊಂದು ನಡೆಯುವ ಆತಂಕವಿದೆ.

ಸೇತುವೆಯ ಅಡಿಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಕೆಲವೊಂದು ಕಂಬಗಳು ಮುರಿಯುವ ಹಂತದಲ್ಲಿದೆ. ತ್ವರಿತವಾಗಿ ಈ ಸೇತುವೆಯನ್ನು ನೆಲಸಮಗೊಳಿಸಿ ಪ್ರತ್ಯೇಕ ಸೇತುವೆ ನಿರ್ಮಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಾದ ಪರಿಣಾಮ ಈ ರಸ್ತೆ ಮೇಲ್ದರ್ಜೆಗೇರಿಸಲಾಯಿತಾದರೂ ಚತುಷ್ಪಥ ರಸ್ತೆ ನಿರ್ಮಾಣವಾಗಲಿಲ್ಲ. ಇದರ ಜತೆಗೆ ಸೇತುವೆ ಮರುನಿರ್ಮಾಣ ಕಾರ್ಯವೂ ನನೆಗುದಿಗೆ ಬಿದ್ದಿತು. ಈ ಸೇತುವೆ 170 ಮೀ.ಉದ್ದ, 5ಮೀ. ಅಗಲವಿದ್ದು, ಈ ರಸ್ತೆಯಲ್ಲಿ ಏಕಕಾಲಕ್ಕೆ ಕೇವಲ ಒಂದು ವಾಹನವಷ್ಟೇ ಸಂಚರಿಸಲು ಸಾಧ್ಯ. 

ಸಾಮರ್ಥ್ಯಕ್ಕೂ ಮೀರಿ ಭಾರ ಹೊರುವ ಸೇತುವೆ!
ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಈ ಸೇತುವೆ ಸಾಮರ್ಥ್ಯ ಕ್ಕೂ ಮೀರಿ ಭಾರ ಹೊರುತ್ತದೆ. ಒಮ್ಮೆಗೆ 40 ಟನ್‌ಗೂ ಅಧಿಕ ಭಾರ ಹೊರುವ ವಾಹನಗಳು ಇದರ ಮೇಲೆಯೇ ಸಾಗುತ್ತದೆ. ಪ್ರತೀ ದಿನ ಸಾವಿರಕ್ಕೂ ಅಧಿಕ ವಾಹನಗಳು ಈ ಸೇತುವೆಯಲ್ಲಿ ಸಂಚರಿಸುತ್ತವೆ. ಈಗಾಗಲೇ ಈ ಸೇತುವೆ ಅಲುಗಾಡಲಾರಂಭಿಸಿದೆ.

Advertisement

ತುಕ್ಕು ಹಿಡಿದ ಅಡಿಭಾಗ!
ಸೇತುವೆಯ ಅಡಿಭಾಗದಲ್ಲಿ ಹಾಕಿರುವ ಕಬ್ಬಿಣದ ಕಂಬಗಳು, ಆಧಾರ ಸ್ತಂಭ, ಪಿಲ್ಲರ್‌ಗೆ ತುಕ್ಕುಹಿಡಿದಿದ್ದು ಹಾಕಲಾಗಿರುವ ಸಿಮೆಂಟ್‌ ಕಿತ್ತುಹೋಗಿದೆ.

ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಈ ಸೇತುವೆಯ ಅನೇಕ ಕಂಬಿಗಳು ಬಿದ್ದುಹೋಗಿವೆ. ನದಿಯ ದಡವನ್ನು
ಸಂಪರ್ಕಿಸುವ ಆಧಾರ ಸ್ತಂಭಗಳೂ ತುಕ್ಕು ಹಿಡಿದಿದೆ. ಇದು ಗ್ರಾಮ ಸ್ಥರ ಆತಂಕಕ್ಕೆ ಕಾರಣ ವಾಗಿದೆ. ಪಿಲ್ಲರ್‌ಗಳಿರುವ ಜಾಗದಲ್ಲಿ ಮಣ್ಣಿನ ಸವಕಳಿ ಉಂಟಾಗಿರುವುದೂ ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

ಹೊಸ ಸೇತುವೆ ನಿರ್ಮಾಣ
ಗುರುಪುರಕ್ಕೆ ಹೊಸದಾಗಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಮತ್ತೆ ಮಳೆ ಆರಂಭವಾಗಲಿದ್ದು, ಈ ವೇಳೆ ಕಾಮಗಾರಿ ನಡೆಸುವುದು ಅಸಾಧ್ಯ. ಹೀಗಾಗಿ ಮಳೆಗಾಲ ಕಳೆದ ಬಳಿಕ ಅಂದರೆ ಮುಂದಿನ ವರ್ಷ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು.
– ಯಶವಂತ್‌, ಸಹಾಯಕ ಎಂಜಿನಿಯರ್‌,
ರಾಷ್ಟ್ರೀಯ ಹೆದ್ದಾರಿ-169, ಮಂಗಳೂರು 

ಗಿರೀಶ್‌ ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next