ಚಿತ್ರ ಅಂದರೆ ಮನರಂಜನೆ. ಅಂತಹ ಚಿತ್ರದಲ್ಲಿ ಕಥೆ ಇರಬೇಕು, ಇರದಿದ್ದರೆ ಕಣ್ಮನ ಸೆಳೆಯುವ ಮೇಕಿಂಗ್ ಇರಬೇಕು, ಅದೂ ಇರದಿದ್ದರೆ, ಕಚಗುಳಿ ಇಡುವಂತಹ ದೃಶ್ಯಗಳು, ಅದಕ್ಕೆ ತಕ್ಕಂತಹ ಮಾತುಗಳಾದರೂ ಇರಬೇಕು. ಇದೆಲ್ಲ ಇದ್ದರೂ ಅರ್ಥವಾಗಿಸುವ ಚಿತ್ರವಾಗಿರಬೇಕು. “ಗಡ್ಡಪ್ಪನ್ ದುನಿಯಾ’ ಇದ್ಯಾವುದರ ಪರಿವೇ ಇಲ್ಲದ ಚಿತ್ರವೆಂದರೆ ನಿರ್ದೇಶಕರು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇಲ್ಲಿ ರಂಜಿಸುವ ಅಂಶಗಳು ದೂರ, ಅಪೂರ್ಣ ಎನಿಸುವ ಕಥೆ, ಒಂದಕ್ಕೊಂದು ಸಂಬಂಧವಿರದ ಮತ್ತು ಅರ್ಥವಾಗದ ದೃಶ್ಯಗಳದ್ದೇ ಕಾರುಬಾರು.
ಇಲ್ಲಿ ಗೊಂದಲವಾಗುವ ಅಂಶಗಳು ಹೇರಳವಾಗಿಯೇ ಸಿಗುತ್ತವೆ. ಸಿನಿಮಾದಲ್ಲಿ ಹಾಸ್ಯ ಇರಲೇಬೇಕು ಎಂಬ ಜಿದ್ದಿಗೆ ಬಿದ್ದಂತೆ ನಿರ್ದೇಶಕರು “ಚಂಬು’ ಪುರಾಣದ ವ್ಯಕ್ತಿಯೊಬ್ಬನನ್ನು ಸಿನಿಮಾದುದ್ದಕ್ಕೂ ತೋರಿಸಿ, ನಗೆಪಾಟಿಲಿಗೆ ಈಡಾಗಿದ್ದಾರೆ. “ಚೆಂಬು’ ಹಿಡಿದು ಆಗಾಗ ಎಂಟ್ರಿ ಕೊಡುವ ಪಾತ್ರಧಾರಿಯನ್ನು ಇಟ್ಟು, ಇಡೀ ಚಿತ್ರದ ಗಂಭೀರತೆಯನ್ನು ಹಾಳುಗೆಡವಿರುವುದೇ ಸಾರ್ಥಕತೆ. ಆ ದೃಶ್ಯ ಇರದಿದ್ದರೂ ಹೇಗೋ ನೋಡಿಸಿಕೊಂಡು ಹೋಗುವ ಸಣ್ಣ ತಾಕತ್ತು “ಗಡ್ಡಪ್ಪ’ನಿಗಿತ್ತು. ವಿನಾಕಾರಣ ಕೆಲ ಕ್ರಮವಲ್ಲದ ದೃಶ್ಯಗಳನ್ನು ಪೋಣಿಸಿ, ನೋಡುಗರ ತಾಳ್ಮೆ ಕೆಡಿಸಲಾಗಿದೆ.
ಹಳ್ಳಿಯೊಂದರ ಕಥೆ ಅಂದಮೇಲೆ ಮುಖ್ಯವಾಗಿ ಹಳ್ಳಿಯ ಪರಿಸರವನ್ನು ಚೆನ್ನಾಗಿ ತೋರಿಸುವ ಅವಕಾಶವಿತ್ತು. ಕಥೆ, ನಿರೂಪಣೆ ಪಕ್ಕಕ್ಕಿಟ್ಟು ನೋಡುವುದಾದರೆ, ಹಳ್ಳಿಯ ಸೊಗಡನ್ನಾದರೂ ಅಂದವಾಗಿ ತೋರಿಸುವ ಪ್ರಯತ್ನ ಮಾಡಬಹುದಿತ್ತು. ಅದೂ ಕೂಡ ಇಲ್ಲಿ ಕಾಣುವಂತಿಲ್ಲ. ಸರಾಗವಾಗಿ ಕಥೆ ಸಾಗುತ್ತಾ? ಅದೂ ಇಲ್ಲ. ಹೇಳಿದ ಡೈಲಾಗ್‌ಗಳೇ ಪದೇ ಪದೇ ಬರುವ ಮೂಲಕ ನೋಡುಗರ ತಾಳ್ಮೆ ಮತ್ತಷ್ಟು ಪರೀಕ್ಷಿಸಲಾಗಿದೆ. ಚಿತ್ರದಲ್ಲಿ ಕಥೆಯ ಒನ್‌ಲೈನ್ ಚೆನ್ನಾಗಿದೆ. ಅದನ್ನು ಇನ್ನಷ್ಟು ಚೆನ್ನಾಗಿ ಹೆಣೆದು ಒಂದೊಳ್ಳೆಯ ಚಿತ್ರವಾಗಿಸುವ ಸಾಧ್ಯವಿತ್ತು.
ನಿರ್ದೇಶಕರಿಗೆ “ತಿಥಿ’ ಚಿತ್ರದ ಗುಂಗು ಇನ್ನೂ ಇದೆ ಎಂಬುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ. ಗಡ್ಡಪ್ಪ ಮತ್ತು ಸೆಂಚುರಿಗೌಡ ಇವರಿಬ್ಬರಿಂದಲೂ ಕೇಳರಿಯದಷ್ಟು ಮಾತುಗಳನ್ನಾಡಿಸಿದ್ದಾರೆ. ಅದೇ ನಿರ್ದೇಶಕದ್ವಯರ ಸಾಧನೆ ಅನ್ನಬಹುದು. ಸೆಂಚುರಿ ಗೌಡನ ಮಗ ಗಡ್ಡಪ್ಪನಿಗೆ ಸದಾ ಊರಿನ ಬಗ್ಗೆ ಚಿಂತೆ. ಕಾರಣ, ಮಳೆ ಕಾಣದ ಊರು ಬರಗಾಲ ಎದುರಿಸುತ್ತಿರುವುದು. ಊರಿನ ಗೌಡ ಊರ ಜನರಿಗೆ ಸಾಲ ಕೊಟ್ಟು, ಸಾಲ ಹಿಂದಿರುಗಿಸಲಾಗದೆ ಜನರು ಒದ್ದಾಡುತ್ತಿರುವುದು.
ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಯೋಚನೆಯೊಂದನ್ನು ಮಾಡುವ ಗಡ್ಡಪ್ಪ, ಊರ ಕೆರೆಯ ಹೂಳು ತೆಗೆಸಿ, ಮಳೆ ನೀರು ನಿಲ್ಲುವಂತೆ ಮಾಡುವ ಸಾಹಸಕ್ಕೆ ಮುಂದಾಗುತ್ತಾನೆ. ಅದೇ ಊರ ಗೌಡನ ಬಳಿ ಸಾಲ ಪಡೆದು, ತನ್ನ ಪ್ರಯತ್ನ ಮುಂದುವರೆಸುತ್ತಾನೆ. ಗಡ್ಡಪ್ಪನ ಆಸೆ ಈಡೇರುತ್ತೋ ಇಲ್ಲವೋ ಎಂಬುದು ಕಥೆ. ಈ ಮಧ್ಯೆ ಗಿರಿ-ಸಿದ್ಧ ಎಂಬ ಜೀವದ ಗೆಳೆಯರ ಕಥೆ-ವ್ಯಥೆ, ರಾಣಿ-ಕಿರಣ ಎಂಬ ಹುಡುಗ, ಹುಡುಗಿಯ ಪ್ರೇಮ ತಿಲ್ಲಾನ, ಬುಲೆಟ್ ಪೈಲ್ವಾನ ಎಂಬ ಬಡ್ಡಿ ವಸೂಲು ಮಾಡುವ ಅಸಾಧಾರಣ ವ್ಯಕ್ತಿಯ ಚಿತ್ರಣ ಇಲ್ಲಿದೆ.
ಗಡ್ಡಪ್ಪನ ಸಾಧನೆ ಬಗ್ಗೆ ತಿಳಿದುಕೊಳ್ಳುವ “ಭಾರೀ’ ಕುತೂಹಲವಿದ್ದರೆ “ಗಡ್ಡಪ್ಪನ್ ದುನಿಯಾ’ದೊಳಗೆ ಎಂಟ್ರಿಕೊಟ್ಟು ಬರಬಹುದು. ಗಡ್ಡಪ್ಪ ಮತ್ತು ಸೆಂಚುರಿಗೌಡ ಅವರ ಅಭಿನಯಕ್ಕಿಂತ ಮಾತುಗಳ ಆರ್ಭಟವೇ ಜಾಸ್ತಿ. ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ. ಉಳಿದಂತೆ ಊರ ಗೌಡ ಪಾತ್ರ ಮಾಡಿರುವ ಪಾತ್ರಧಾರಿಯ ಕರ್ಕಶ ಧ್ವನಿ ಎಲ್ಲವನ್ನೂ ತಿಂದುಹಾಕಿದೆ. ತೆರೆ ಮೇಲೆ ಬರುವ ಪಾತ್ರಗಳ್ಯಾವೂ ಅಷ್ಟಾಗಿ ಗಮನಸೆಳೆಯಲ್ಲ. ಹರ್ಷ ಕಾಗೋಡ್ ಹಿನ್ನೆಲೆ ಸಂಗೀತ ಚಿತ್ರದ ಮತ್ತೂಂದು ಮೈನಸ್. ರಘು, ನವೀನ್‌ಗೌಡ ಕ್ಯಾಮೆರಾದಲ್ಲಿ “ಗಡ್ಡಪ್ಪನ್’ ಪರಿಸರ ಅಷ್ಟಾಗಿ ಕಣ್ಮನ ಸೆಳೆಯಲ್ಲ.
ಚಿತ್ರ: ಗಡ್ಡಪ್ಪನ್ ದುನಿಯಾ
ನಿರ್ಮಾಣ: ಅರುಣ ಅಜಿತ್ ಗೌಡ
ನಿರ್ದೇಶನ: ಅನಿಲ್ ವೆಂಕಟರಾಜು – ಸುನಿಲ್ ರೆಡ್ಡಿ
ತಾರಾಗಣ: ಗಡ್ಡಪ್ಪ, ಸೆಂಚುರಿ ಗೌಡ, ಪ್ರಕೃತಿ ಪ್ರಕಾಶ್, ತಮ್ಮೇಗೌಡ, ರಘು ಆಚಾರ್, ಬಾಲಕೃಷ್ಣ, ಬರಗೂರು ನರಸಿಂಹಮೂರ್ತಿ ಮುಂತಾದವರು
* ವಿಜಯ್ ಭರಮಸಾಗರ