ಆತ 24 ಗಂಟೆಯೂ ಆ್ಯಕ್ಷನ್ ಮೂಡ್‌ನಲ್ಲಿರುವ ಖಡಕ್ ಯುವಕ. ಆತನ ಧಿಮಾಕೇ ಆತನಿಗೆ ಶೋಭೆ. ಎಲ್ಲರನ್ನು ಬೇಗನೇ ನಂಬುವ ಅಷ್ಟೇ ಬೇಗ ಪ್ರೀತಿಗೆ ಬೀಳುವ “ಮುಗ್ಧ’. ಪ್ರೀತಿಗೆ ಬೇಗ ಕರಗಲು, ಚೂರು ಪ್ರೀತಿ ಸಿಕ್ಕರೂ ಖುಷಿಯಿಂದ ಕುಣಿದಾಡಲು ಕಾರಣ ಆತ ಅನಾಥ. ಹಾಗಾಗಿ, ಪ್ರೀತಿಗೆ ಕರಗುತ್ತಾನೆ, ಮರುಗುತ್ತಾನೆ. ಹಾಗಂತ ಪ್ರೀತಿಯ ಹಿಂದೆ ಸ್ವಾರ್ಥ ಇರುತ್ತದೆಂಬುದನ್ನು ಆತ ತಿಳಿದುಕೊಳ್ಳಲು ಹೋಗುವುದಿಲ್ಲ. ಹಾಗಾಗಿ, ಆತ ಪದೇ ಪದೇ ಕಣ್ಣೀರು ಹಾಕುತ್ತಾನೆ. ಆತನ ಮಾತಲ್ಲೇ ಹೇಳಬೇಕಾದರೆ “ಮೆಂಟಲ್’ ಆಗುತ್ತಾನೆ.
“ಕಿರೀಟ’ ಚಿತ್ರದಲ್ಲಿ ಏನಿದೆ ಎಂದರೆ ಲವ್ ಇದೆ, ಆ್ಯಕ್ಷನ್ ಇದೆ, ಆಸೆ, ದುರಾಸೆ, ಅಹಂ ಅನ್ನುವ ಕಿರೀಟವನ್ನು ಕಿತ್ತು ಬಿಸಾಕಿ ಎನ್ನುವ ಒಂದು ಸೂಕ್ಷ್ಮ ಸಂದೇಶವಿದೆ. ಹಾಗಂತ ಇದು ಸಂದೇಶ ಸಾರುವ ಸಿನಿಮಾನಾ, ಸಿನಿಮಾದುದ್ದಕ್ಕೂ ಬರೀ ಸಂದೇಶವೇ ತುಂಬಿಕೊಂಡಿದೆಯಾ ಎಂದರೆ ಖಂಡಿತಾ ಇಲ್ಲ. ನಿಮಗೆ ಸಂದೇಶ ಕೇಳುವ ಆಸೆ ಇದ್ದರೆ ನೀವು ಕ್ಲೈಮ್ಯಾಕ್ಸ್‌ವರೆಗೆ ಕಾಯಬೇಕು. ಅದಕ್ಕಿಂತ ಮುಂಚೆ ನಿಮಗೆ ಸಿಗೋದು ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಹೀರೋ ಇಂಟ್ರೋಡಕ್ಷನ್, ಲವ್, ಬಿಲ್ಡಪ್, ಗ್ಯಾಪಲ್ಲೆರಡು ಹಾಡುಗಳನ್ನು ನೀವು ಕಣ್ತುಂಬಿಕೊಳ್ಳಬಹುದು.
ಒಬ್ಬ ಕಮರ್ಷಿಯಲ್ ಹೀರೋನಾ ಲಾಂಚ್‌ಗೆ ಈ ಸಿನಿಮಾ ಹೊಂದಿಕೊಂಡಿದೆ. ಜಬರ್‌ದಸ್ತ್ ಫೈಟ್, ಡೈಲಾಗ್ ಮೇಲೆ ಡೈಲಾಗ್ … ಎಲ್ಲವೂ ಇದೆ. ಆ ಮಟ್ಟಿಗೆ ನಾಯಕ ಸಮರ್ಥ್ಗೆ ಇದು ಒಳ್ಳೆಯ ಲಾಂಚ್. ಹಾಗಂತ ಕಥೆ ವಿಭಿನ್ನವಾಗಿದೆಯಾ, ಹೊಸತನದಿಂದ ಕೂಡಿದೆಯಾ ಎಂದರೆ ಉತ್ತರಿಸೋದು ಕಷ್ಟ. ಏಕೆಂದರೆ, ಇದೊಂದು ಆ್ಯಕ್ಷನ್ ಕಂ ಲವ್‌ಸ್ಟೋರಿ. ಖಡಕ್ ಆಗಿರುವ ಅನಾಥ ಹುಡುಗನ ಬಾಳಲ್ಲಿ ಬರುವ ಮೂವರು ಹುಡುಗಿಯರು ಹಾಗೂ ಅವರಿಂದ ಈತ ಕಲಿಯುವ ಪಾಠವೇ ಈ ಸಿನಿಮಾದ ಹೈಲೈಟ್. ಹಾಗಾಗಿ, ಚಿತ್ರದ ಮೊದಲರ್ಧ ಹೊಡೆದಾಟದ ಜೊತೆಗೆ ಲವ್, ಬ್ರೇಕಪ್, ತನಗೆ ತಾನೇ ಸಮಾಧಾನ ಮಾಡಿಕೊಳ್ಳುವ ನಾಯಕ…
ಇವೇ ತುಂಬಿಕೊಂಡಿವೆ. ಕಥೆಯ ವಿಷಯದಲ್ಲಿ ಇದು ತೀರಾ ಹೊಸದಲ್ಲದಿದ್ದರೂ ನಿರೂಪಣೆ ಹಾಗೂ ಸನ್ನಿವೇಶಗಳು ನಿಮಗೆ ಖುಷಿಕೊಡುತ್ತದೆ. ಇಲ್ಲಿ ಲವ್‌ಸ್ಟೋರಿ, ಎರಡೆರಡು ಬ್ರೇಕಪ್‌ಗ್ಳಿದ್ದರೂ ಅತಿಯಾದ ಕಣ್ಣೀರ ಕಥೆ ಇಲ್ಲ ಎಂಬುದು ಖುಷಿಯ ವಿಚಾರ. ನಿರ್ದೇಶಕರು ಉಪೇಂದ್ರ ಹಾಗೂ ಅವರ “ಉಪೇಂದ್ರ’ ಚಿತ್ರದ ದೊಡ್ಡ ಅಭಿಮಾನಿ ಎಂಬುದು ಸಿನಿಮಾದುದ್ದಕ್ಕೂ ಗೊತ್ತಾಗುತ್ತದೆ. ಅದರಲ್ಲೂ ಚಿತ್ರದ ಡೈಲಾಗ್ ಡೆಲಿವರಿ ವಿಷಯದಲ್ಲಿ ಅದು ಸ್ಪಷ್ಟವಾಗುತ್ತದೆ. ನಾಯಕನ ಮ್ಯಾನರೀಸಂ, ಆಟಿಟ್ಯೂಡ್‌ನಲ್ಲಿ “ಉಪೇಂದ್ರ’ ಅವರನ್ನು ಬೆರೆಸುವ ಪ್ರಯತ್ನ ಮಾಡಿರೋದು ಎದ್ದು ಕಾಣುತ್ತದೆ.
ಮೊದಲೇ ಹೇಳಿದಂತೆ ಚಿತ್ರದಲ್ಲಿ ಮನುಷ್ಯನಲ್ಲಿರುವ ಬೇರೆ ಬೇರೆ ರೀತಿಯ ಅಹಂಗಳನ್ನು ಬಿಟ್ಟು ಬದುಕಬೇಕೆಂಬ ಸಂದೇಶವಿದೆ. ಆ ಸಂದೇಶವನ್ನು ತುಂಬಾ ಸುತ್ತುಬಳಸಿ ಹೇಳಲಾಗಿದೆ. ಈ ಸಿನಿಮಾದ ಪ್ಲಸ್ ಎಂದರೆ ಸಂಭಾಷಣೆ ಹಾಗೂ ನಾಯಕ ಸಮರ್ಥ್ ಅವರ ನಟನೆ. ಒಂದರ್ಥದಲ್ಲಿ ಈ ಸಿನಿಮಾ ನಿಂತಿರೋದೇ ಸಂಭಾಷಣೆಯ ಮೇಲೆ ಎಂದರೆ ತಪ್ಪಲ್ಲ. ಆ ಮಟ್ಟಿಗೆ ನಿರ್ದೇಶಕರು ಸಂಭಾಷಣೆಯನ್ನು ನಂಬಿಕೊಂಡಿದ್ದಾರೆ. ಚಿತ್ರದ ಸಂಭಾಷಣೆಗಳು ಚುರುಕಾಗಿವೆ ಮತ್ತು ಆ ಸಮಯಕ್ಕೆ ಹೊಂದಿಕೆಯಾಗುತ್ತದೆ.
ಆದರೆ, ನಾಯಕನಿಂದ ಕಂಠಪಾಠ ಮಾಡಿ ಹೇಳಿಸುವ “ಮೈಲುದ್ದದ’ ಡೈಲಾಗ್‌ಗಳು ಅತಿ ಎನಿಸದೇ ಇರದು. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಮತ್ತಷ್ಟು ಟ್ರಿಮ್ ಮಾಡುವ ಅವಕಾಶವಿತ್ತು. ಅದು ಬಿಟ್ಟರೆ ಹೊಸಬರ ಪ್ರಯತ್ನವಾಗಿ “ಕಿರೀಟ’ ನಿಮಗೆ ಮಜಾ ಕೊಡುತ್ತಾ ಸಾಗುತ್ತದೆ. ನಾಯಕ ಸಮರ್ಥ್ಗೆ ಇದು ಒಳ್ಳೆಯ ಲಾಂಚ್ ಎಂದರೆ ತಪ್ಪಲ್ಲ. ಆ್ಯಕ್ಷನ್, ಲವ್, ಸೆಂಟಿಮೆಂಟ್ ಎಲ್ಲವೂ ಇದೆ. ಅದಕ್ಕಿಂತ ಹೆಚ್ಚಾಗಿ ಮೊದಲ ಚಿತ್ರದಲ್ಲೇ ಸಮರ್ಥ್ ಭರವಸೆ ಮೂಡಿಸಿದ್ದಾರೆ.
ಖಡಕ್ ಹುಡುಗ ದೇವ್ರು ಆಗಿ ಹಾಗೂ ಲವರ್‌ಬಾಯ್ ಅಶೋಕ್ ಆಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸಾಗಿದ್ದು, ನಟನೆಯಲ್ಲಿ ಸಮರ್ಥ್ ಶ್ರಮ ಎದ್ದು ಕಾಣುತ್ತದೆ. ನಾಯಕಿಯರಾದ ಲೇಖಾ ಚಂದ್ರ, ದೀಪ್ತಿ ಕಾಪ್ಸೆ ಹಾಗೂ ರಿಷಿಕಾ ಸಿಂಗ್ ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ. “ಉಗ್ರಂ’ ಮಂಜು ಪಾತ್ರಕ್ಕೆ ತೂಕವಿಲ್ಲದೇ ಇದ್ದರೂ, ಅವರ ಎಂದಿನಂತೆ ಅಬ್ಬರಿಸಿದ್ದಾರೆ. ಸಮೀರ್ ಕುಲಕರ್ಣಿ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ.
ಚಿತ್ರ: ಕಿರೀಟ
ನಿರ್ಮಾಣ: ಚಂದ್ರಶೇಖರ್
ನಿರ್ದೇಶನ: ಕಿರಣ್ ಚಂದ್ರ
ತಾರಾಗಣ: ಸಮರ್ಥ್, ಲೇಖಾ ಚಂದ್ರ, ದೀಪ್ತಿ ಕಾಪ್ಸೆ, ರಿಷಿಕಾ ಸಿಂಗ್ ಮತ್ತಿತರರು.
* ರವಿಪ್ರಕಾಶ್ ರೈ