Advertisement

ರಾಯಚೂರು ನಗರಸಭೆಗೆ ಮತ್ತೆ ಹಳೇ ಕಮಿಷನರ್‌?

04:49 PM May 17, 2022 | Team Udayavani |

ರಾಯಚೂರು: ವಿಆರ್‌ಎಸ್‌ ಪಡೆದು ನಿವೃತ್ತಿ ಹೊಂದಿದ ನಗರಸಭೆ ಪೌರಾಯುಕ್ತ ಮುನಿಸ್ವಾಮಿ ಅವರಿಂದ ತೆರವಾದ ಸ್ಥಾನಕ್ಕೆ ಹೊಸಬರ ಬದಲಿಗೆ ಹಿಂದೆ ಕಾರ್ಯ ನಿರ್ವಹಿಸಿದ್ದ ಅಧಿಕಾರಿಯನ್ನೇ ನಿಯುಕ್ತಿ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಿಂದೆ ಪ್ರಭಾರ ಮುಖ್ಯಾಧಿ ಕಾರಿಯಾಗಿದ್ದ ಗುರುಲಿಂಗಪ್ಪ ಅವರಿಗೆ ಅಧಿಕಾರ ನೀಡಲಾಗಿದೆ ಎನ್ನಲಾಗುತ್ತಿದೆ.

Advertisement

ನಗರಾಡಳಿತಕ್ಕೆ ಚುರುಕು ನೀಡಲು ಅಧ್ಯಕ್ಷರ ಪಾತ್ರ ಎಷ್ಟು ಮುಖ್ಯವೋ ಪೌರಾಯುಕ್ತರ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ, ಅಧ್ಯಕ್ಷರ ಅಣತಿಯಂತೆ, ಶಾಸಕರ ಸೂಚನೆಯಂತೆ ಕಾರ್ಯ ನಿರ್ವಹಿಸಿದಲ್ಲಿ, ರಾಜಕೀಯ ನಾಯಕರ ಹಿಡಿತದಲ್ಲಿದ್ದರೆ ಯಾವೊಂದು ಕೆಲಸವೂ ಸುಗಮಕ್ಕೆ ಆಗುವುದು ಕಷ್ಟ. ಜಿಲ್ಲಾ ಉಸ್ತುವಾರಿ ಸಚಿವರ ರೀತಿ ನಗರಸಭೆ ಪೌರಾಯುಕ್ತ ಹುದ್ದೆಗೂ ಹೊಸ ಹೊಸ ಅಧಿಕಾರಿಗಳು ಬರುತ್ತಲೇ ಇದ್ದಾರೆ. ಆದರೆ, ಇಲ್ಲಿನ ಆಡಳಿತ ವ್ಯವಸ್ಥೆ ಒಗ್ಗಿಕೊಳ್ಳಲಾಗದೆ ಬದಲಾವಣೆ ಬಯಸುತ್ತಾರೆ ಎನ್ನುತ್ತವೆ ನಗರಸಭೆ ಮೂಲಗಳು.

ವಿಆರ್ಎಸ್ಹಲವು ಕತೆಗಳು

ನಗರಸಭೆ ಪೌರಾಯುಕ್ತರಾಗಿ ಕೆಲಕಾಲ ಸೇವೆ ಸಲ್ಲಿಸಿದ ಮುನಿಸ್ವಾಮಿ ಅವರು ಇನ್ನೂ ಸಾಕಷ್ಟು ಸೇವಾವಇದ್ದಾಗ್ಯೂ ವಿಆರ್‌ಎಸ್‌ ಪಡೆದಿರುವುದು ಹಲವು ಚರ್ಚೆಗಳನ್ನು ಹುಟ್ಟು ಹಾಕಿತ್ತು. ನಗರದ ಕೆಲ ಪ್ರಭಾವಿ ರಾಜಕಾರಣಿಗಳು ಒತ್ತಡಕ್ಕೆ ಮಣಿದು ಕೆಲಸ ಮಾಡಬೇಕಾದ ಸಂದಿಗ್ಧತೆ ಇದೆ. ಇದರಿಂದ ನೊಂದು ರಾಜೀನಾಮೆ ನೀಡಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದವು. ಆದರೆ, ಬಜೆಟ್‌ ಸಭೆಯಲ್ಲಿ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಸ್ವತಃ ಮುನಿಸ್ವಾಮಿ ಅವರೇ ಮಾಡಿದರು. ನನ್ನ ಆರೋಗ್ಯದ ಕಾರಣಕ್ಕೆ ನಾನು ಸೇವೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ. ಇದಕ್ಕೆ ಯಾವುದೇ ಬೇರೆ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಆಡಳಿತಕ್ಕೆ ಬೇಕಿದೆ ಚೈತನ್ಯ

Advertisement

ನಗರಸಭೆ ಚುಕ್ಕಾಣಿ ಈಗ ಮಹಿಳಾ ಮಣಿಗಳ ಕೈಯಲ್ಲಿದೆ. ಅಧ್ಯಕ್ಷೆ, ಉಪಾಧ್ಯಕ್ಷೆಯರಿಬ್ಬರು ಮಹಿಳೆಯರೇ. ಅದರ ಜತೆಗೆ ಅನೇಕ ವಾರ್ಡ್‌ಗಳ ಸದಸ್ಯರು ಮಹಿಳೆಯರೇ. ಸಾಮಾನ್ಯ ಸಭೆ ಸೇರಿದಂತೆ ಇನ್ನಿತರ ಸಭೆಗಳಲ್ಲಿ ಇವರು ಮಾತನಾಡುವುದೇ ಇಲ್ಲ. ಎಲ್ಲದಕ್ಕೂ ಪೌರಾಯುಕ್ತರೇ ಉತ್ತರದಾಯಿ ಎನ್ನುವಂತಾಗಿರುತ್ತದೆ ಸ್ಥಿತಿ. ಆದರೆ, ನಗರಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಜನರಿಗೆ ಸಕಾಲಕ್ಕೆ ಕೆಲಸ ಮಾಡಕೊಡದೆ ವಿಳಂಬ ನೀತಿ ಅನುಸರಿಸುತ್ತಾರೆ ಎಂಬ ಆರೋಪಗಳಿವೆ.

ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಹೇಳುವವರು ಕೇಳುವವರಿಲ್ಲದ ಸ್ಥಿತಿ ಇದೆ. ಇದನ್ನೆಲ್ಲ ಗಮನಿಸಬೇಕಾದ ಪೌರಾಯುಕ್ತರು ಕೂಡ ಮೌನಕ್ಕೆ ಶರಣಾಗುವುದರಿಂದಲೇ ಆಡಳಿತ ವ್ಯವಸ್ಥೆ ಹಳ್ಳ ಹಿಡಿಯುತ್ತಿದೆ ಎನ್ನುವುದು ನಗರಸಭೆ ಸದಸ್ಯರ ಆರೋಪವಾಗಿದೆ.

ಹಸ್ತಕ್ಷೇಪಕ್ಕೆ ಬೇಕಿದೆ ಕಡಿವಾಣ

ನಗರಸಭೆ ಆಡಳಿತದಲ್ಲಿ ಪ್ರಭಾವಿ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಬೇಕಿದೆ. ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರು ಮಾತ್ರವಲ್ಲದೇ ನಗರಸಭೆಯ ಕೆಲ ಸದಸ್ಯರು ಕೂಡ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡುವಂಥ ವಾತಾವರಣ ಇಲ್ಲ. ಇನ್ನಾದರೂ ಇಂಥ ಹಸ್ತಕ್ಷೇಪಗಳಿಗೆ ಕಡಿವಾಣ ಬೀಳಬೇಕಿದೆ.

ನಗರಸಭೆಯಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಎಷ್ಟು ಅಧಿಕಾರಿಗಳು ಬಂದರೂ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡದಿದ್ದರೆ ಏನು ಮಾಡಲಾಗದು. ಅವರ ಇತಿಮಿತಿಯೊಳಗೆ ಕೆಲಸ ಮಾಡಬೇಕಿದೆ. ಪೌರಾಯುಕ್ತರು ಚನ್ನಾಗಿದ್ದರೆ ಮಾತ್ರ ಉಳಿದ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಕೆಲಸ ಮಾಡಲು ಸಾಧ್ಯ. ಆದರೆ, ಅವರ ಕೈ ಕಟ್ಟಿ ಹಾಕುವಂತ ಕೆಲಸ ಮಾಡುವುದು, ಪ್ರಭಾವಿಗಳಿಂದ ಒತ್ತಡ ಹಾಕಿಸಿದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಿರೀಕ್ಷೆಯಂತೆ ಆಗುವುದಿಲ್ಲ. ನಗರದ ಅಭಿವೃದ್ಧಿ ಆಗಬೇಕಿದ್ದರೆ ಪೌರಾಯುಕ್ತ ಬದಲಾವಣೆಯಲ್ಲ ಇಂಥ ವ್ಯವಸ್ಥೆ ಬದಲಾಗಬೇಕು. ರಮೇಶ ಬಿ., ನಗರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next