Advertisement

ಗುಜರಿ ಬಸ್‌ಗಳಲ್ಲೇ ನಿತ್ಯ ಪ್ರಯಾಣ

02:19 PM Dec 22, 2019 | Suhan S |

ಹಾವೇರಿ : ಮಾರ್ಗ ಮಧ್ಯೆಯೇ ಹೋದಲ್ಲೇ ಕೆಟ್ಟು ನಿಲ್ಲುವುದು, ಯಂತ್ರಗಳ ಸದ್ದು ಗದ್ದಲ ಮಾಡುತ್ತ ಕುಂಟುತ್ತ ಸಂಚರಿಸುವುದು, ಮುರಿದ, ಒಡೆದ, ಸೀಟು ಹರಿದ ಸ್ಥಿತಿಯಲ್ಲೇ ನಿಧಾನಗತಿಯಲ್ಲಿ ಸಾಗುವುದು… ಇದು ಜಿಲ್ಲೆಯಲ್ಲಿ ಸಂಚರಿಸುವ ಹಲವು ಸಾರಿಗೆ ಬಸ್‌ ಗಳ ದುಸ್ಥಿತಿ.

Advertisement

ಒಂದು ಕಡೆ ಗ್ರಾಮೀಣ ಜನರು ಹಳ್ಳಿಗಳಿಗೆ ಸಮರ್ಪಕ ಬಸ್‌ ಬರುತ್ತಿಲ್ಲ ಎಂದು ದೂರಿದರೆ, ಇತ್ತ ಸಾರಿಗೆ ಸಂಸ್ಥೆಯರಿಂದ ಪ್ರಯಾಣಿಕರು ಬಸ್‌ಲ್ಲಿ ಹೆಚ್ಚು ಪ್ರಯಾಣ ಮಾಡುವುದಿಲ್ಲ ಎನ್ನುವ ವಿಪರ್ಯಾಸ ಆರೋಪ ಕೇಳಿ ಬರುವುದು ಸಾಮಾನ್ಯವಾಗಿದೆ. ಈ ನಡುವೆ ಸಂಚರಿಸುವ ಒಂದಿಷ್ಟು ಬಸ್‌ಗಳು ತೀರಾ ಹಳೆಯದಾದ ಹಾಗೂ ಅವಧಿ ಮುಗಿದ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಂತು ಪ್ರಮಾದನ್ನುಂಟು ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿವೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ರಾಜ್ಯದಲ್ಲಿಯೇ ಹೆಚ್ಚು ಗುಣಮಟ್ಟದ ಸೇವೆ ನೀಡುವ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಆದರೆ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಗುಜರಿ ಬಸ್‌ಗಳ ಸಂಚಾರ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಮರೀಚಿಕೆಯಾಗಿದೆ. ಹಾವೇರಿ ವಿಭಾಗದ ಬಸ್‌ಗಳಲ್ಲಿ ಶೇ.30ರಿಂದ 40ರಷ್ಟು ಬಸ್‌ಗಳು ಗುಜರಿ ಪಟ್ಟಿಗೆ ಸೇರಿವೆ. ಇವುಗಳಿಂದ ಪರಿಸರದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿರುವ ಜೊತೆಗೆ ಸಾರಿಗೆ ಸಂಸ್ಥೆಯನ್ನು ಆರ್ಥಿಕ ನಷ್ಟಕ್ಕೆ ತಳ್ಳುತ್ತಿವೆ.

ಗುಜರಿ ಬಸ್‌: ಸಾರಿಗೆ ನಿಯಮದ ಪ್ರಕಾರ ಬಸ್‌ ಗಳನ್ನು 8 ರಿಂದ 10 ಲಕ್ಷ ಕಿ.ಮೀ ಅಥವಾ 10 ವರ್ಷದವರೆಗೆ ಬಳಸಬಹುದು. ಆದರೆ, ಹಾವೇರಿ ವಿಭಾಗದಲ್ಲಿರುವ 509 ಬಸ್‌ಗಳಲ್ಲಿ 189 ಬಸ್‌ಗಳು 8ರಿಂದ 10 ಲಕ್ಷ ಕಿಮೀ ಸಂಚರಿಸಿದ್ದು, ಗುಜರಿ ಪಟ್ಟಿಗೆ ಸೇರಿಸಲು ಅರ್ಹತೆ ಪಡೆದಿವೆ. ಹಾವೇರಿ ತಾಲೂಕಿನಲ್ಲಿ 38 ಬಸ್‌, ಹಿರೇಕೆರೂರು 28, ರಾಣಿಬೆನ್ನೂರು 38, ಹಾನಗಲ್ಲ 31, ಬ್ಯಾಡಗಿ 28, ಸವಣೂರು 26 ಬಸ್‌ಗಳು ಸೇರಿ ಒಟ್ಟು 189 ಬಸ್‌ಗಳು ನಿಯಮ ಮೀರಿ ಅನಿವಾರ್ಯವಾಗಿ ಸಂಚಾರ ಮಾಡುತ್ತಿವೆ.

ಹಾವೇರಿ ವಿಭಾಗದಲ್ಲಿರುವ 189 ಬಸ್‌ಗಳು 8-10 ಲಕ್ಷ ಕಿಮೀ ಪೂರೈಸಿದ್ದರೂ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಪದೇ ಪದೇ ರಿಪೇರಿಗೆ ಬರುತ್ತಿವೆ. ಇದರಿಂದ ಸಂಸ್ಥೆಗೆ ನಿರ್ವಹಣಾ ವೆಚ್ಚ ಹೊರೆಯಾಗಿ ಪರಿಣಮಿಸಿದೆ. ಇಂಜಿನ್‌ ಕ್ಷಮತೆ ಕಡಿಮೆಯಾಗುವುದು, ಹೆಚ್ಚು ಡಿಸೇಲ್‌- ಕಡಿಮೆ ಮೈಲೇಜ್‌, ಬಿಡಿ ಭಾಗಗಳು ಹಾಳಾಗುವುದು ಸೇರಿದಂತೆ ವಿವಿಧ ರೀತಿಯ ಹೊರೆಯಿಂದಾಗಿ ಈ ಬಸ್‌ಗಳಿಂದ ಸಾರಿಗೆ ಸಂಸ್ಥೆಯ ಆರ್ಥಿಕ ಸಂಕಷ್ಟ ತಂದೊಂಡುತ್ತಿವೆ. ಒಟ್ಟಾರೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗ ಗುಜರಿ ಬಸ್‌ಗಳಿಂದಾಗಿ ಸಮರ್ಪಕ ಸೇವೆ ನೀಡದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಸ್‌ ಕೊರತೆ: ಹಾವೇರಿ ವಿಭಾಗದಲ್ಲಿ ಒಟ್ಟು 509 ಬಸ್‌ಗಳು ಸಂಚರಿಸುತ್ತಿದ್ದು ಇನ್ನೂ 41 ಬಸ್‌ಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಲಾಗಿದ್ದು ಸದ್ಯ ಕೇವಲ 11 ಬಸ್‌ಗಳನ್ನು ಮಾತ್ರ ಬಂದಿವೆ. ವಿಭಾಗ ಇನ್ನೂ 30 ಬಸ್‌ಗಳ ಕೊರತೆ ಎದುರಿಸುತ್ತಿದ್ದು, ಗುಜರಿ ಬಸ್‌ಗಳ ಸಂಖ್ಯೆ ಹೆಚ್ಚುತ್ತಿದ್ದರಿಂದ ಜಿಲ್ಲೆಯಲ್ಲಿ ಜನರಿಗೆ ಗುಣಮಟ್ಟದ ಸಾರಿಗೆ ಸೇವೆ ಅಕ್ಷರಶಃ ಮರೀಚಿಕೆಯಾಗಿದೆ.

Advertisement

28 ಕೋಟಿ ನಷ್ಟ : ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗವೂ ನಷ್ಟದಲ್ಲಿ ಸಾಗುತ್ತಿದೆ. ಬಸ್‌ ಸೇವೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಜನರು ಖಾಸಗಿ ವಾಹನಗಳ ಮೇಲೆ ಹೆಚ್ಚು ಅವಲಂಬಿಸುತ್ತಿದ್ದಾರೆ. ಹೀಗಾಗಿ ವಿಭಾಗ ಆರ್ಥಿಕ ನಷ್ಟದಲ್ಲಿ ದಿನ ದೂಡುತ್ತಿದೆ. ಪ್ರಸಕ್ತ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 28ಕೋಟಿ ನಷ್ಟ ಅನುಭವಿಸಿದೆ.

ಸಿಬ್ಬಂದಿ ಕೊರತೆ: ಹಾವೇರಿ ವಿಭಾಗದಲ್ಲಿ ಸಿಬ್ಬಂದಿ ಕೊರತೆಯೂ ಹೆಚ್ಚಾಗಿದೆ ಇರುವ ಸಿಬ್ಬಂದಿಯ ಮೇಲೆಯೇ ಒತ್ತಡ ಹಾಕಿ ಕೆಲಸ ಪಡೆಯಲಾಗುತ್ತಿದೆ. ಇದರಿಂದ ನೌಕರರು ಅನಿವಾರ್ಯವಾಗಿ ಹೆಚ್ಚಿನ ಅವ  ದುಡಿಯುವಂತಾಗಿದೆ. ಹಾವೇರಿ ವಿಭಾಗದಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸಲು ವಾಹನ ಚಾಲಕರು ಹಾಗೂ ನಿರ್ವಾಹಕರು ಸೇರಿ ಒಟ್ಟು 100 ಸಿಬ್ಬಂದಿ ಅವಶ್ಯಕತೆ ಇದ್ದು ಈಗಷ್ಟೇ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ನೇಮಕಾತಿ ಆಗಬೇಕಿದೆ.

 

-ವಿಶೇಷ  ವರದಿ

Advertisement

Udayavani is now on Telegram. Click here to join our channel and stay updated with the latest news.

Next