ಅಂಕೋಲಾ: ಇಲ್ಲಿನ ಸಾರಿಗೆ ಸಂಸ್ಥೆ ಘಟಕ ಸಾಕಷ್ಟು ಗುಜರಿ ಬಸ್‌ಗಳಿಂದ ಕೂಡಿದ್ದು, ಗುಜರಿ ಅಡ್ಡೆಯಾಗಿ ಮಾರ್ಪಟ್ಟಿದೆ! ಕಿತ್ತೂಗಿರುವ ಆಸನ, ಗಡಗಡ ಅಲುಗಾಡುವ ಕಿಟಕಿ, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ವಾಹನ, ಮಳೆ ಬಂದರೆ ಸೋರುವ ಬಸ್ ಅಂಕೋಲಾ ಘಟಕದಲ್ಲಿದೆ.
ಅಂಕೋಲಾ ಸಾರಿಗೆ ಘಟಕದಲ್ಲಿ ಗ್ರಾಮೀಣ ಮಾರ್ಗಗಳೇ ಹೆಚ್ಚಾಗಿದ್ದು, ಈ ಮಾರ್ಗಗಳೇ ಆದಾಯದ ಮೂಲಗಳಾಗಿವೆ. ಆದರೆ ಈ ಮಾರ್ಗಗಳಲ್ಲಿ ಸಂಚರಿಸುವ ಗುಜರಿ ಬಸ್‌ಗಳು ಮಾತ್ರ ಪ್ರಯಾಣಿಕರಿಗೆ ಹಿಂಸೆ ನೀಡುತ್ತಿವೆ.
ಹಳೇ ಬಸ್ ಓಡಿಸಿದರೆ ಬಡ್ತಿ: ಹಳೆಯದಾದ ಗರಿಷ್ಠ ಕಿ.ಮೀ ಓಡಿಸಿದ ಬಸ್‌ಗಳನ್ನು ಬಳಸಿದ ಡಿಪೋ ಅಧಿಕಾರಿಗಳಿಗೆ ಇಲಾಖೆ ಉತ್ತಮ ಅಧಿಕಾರಿಯೆಂದು ಪ್ರಮೋಶನ್ ನೀಡುತ್ತದೆ. ಹೀಗಾಗಿ ಅಧಿಕಾರಿಗಳು ಹಳೆ ಬಸ್ಸುಗಳನ್ನು ತೆಗೆದು ಹಾಕುವುದಿಲ್ಲ. ಬದಲಾಗಿ ಹೊಸ ಬಸ್ಸುಗಳನ್ನು ತರಿಸಿದರೆ ಮೇಲಾಧಿಕಾರಿಗಳು ಆ ಬಸ್‌ಗಳ ಗರಿಷ್ಠ ಆದಾಯ ನಿರೀಕ್ಷಿಸುತ್ತಾರೆ. ಇದು ಅಧಿಕಾರಿಗಳಿಗೆ ತಲೆನೋವಾಗುವುದರಿಂದ ಕೆಲ ಅಧಿಕಾರಿಗಳು ಹೊಸ ಬಸ್ ತರಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎನ್ನುತ್ತಾರೆ ಸಿಬ್ಬಂದಿವರ್ಗದವರು. ಕಳೆದ ಮಾರ್ಚ್‌ನಲ್ಲಿ ಎರಡು ಹೊಸ ಬಸ್ ಬಂದಿರುವುದು ಬಿಟ್ಟರೆ ವರ್ಷ ಪೂರ್ತಿ ಗುಜರಿ ಬಸ್‌ಗಳದ್ದೆ ಕಾರುಬಾರು.
ಬಿಡಿಬಾಗಗಳೇ ಇಲ್ಲ: ಯಾವುದೇ ಬಸ್ ಗಳು ಕೆಟ್ಟಿದರೆ ಅವುಗಳನ್ನು ದುರಸ್ತಿ ಮಡಲು ಘಟಕದಲ್ಲಿ ಬಿಡಿಭಾಗಗಳೇ ಸಮರ್ಪಕವಾಗಿ ಇಲ್ಲ. ಬಸ್‌ಗಳ ದುರಸ್ತಿ ಸಮಯದಲ್ಲಿ ಒಂದು ಬಸ್ ನಿಂದ ಇನ್ನೊಂದು ಬಸ್‌ಗೆ ಬಿಡಿಭಾಗ ವರ್ಗಾಯಿಸಿ ದುರಸ್ತಿ ಮಾಡುವಂತಹ ಪರಿಸ್ಥಿತಿ ಅಂಕೋಲಾ ಘಟಕದ್ದಾಗಿದೆ. ಇದರಿಂದಾಗಿ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿಯಿದೆ.
ಗುಜರಿ ಬಸ್ ಸಂಖ್ಯೆಯೇ ಹೆಚ್ಚು : ಅಂಕೋಲಾ ಘಟಕದಲ್ಲಿ 56 ರೂಟ್‌ಗಳು ಪ್ರತಿನಿತ್ಯ ಚಾಲನೆಯಲಿದ್ದು, ಇಲ್ಲಿ ಸಂಚರಿಸಲು 59 ಬಸ್‌ಗಳು ಮಾತ್ರ ಇಲ್ಲಿವೆ. ಸಾರಿಗೆ ನಿಯಮದ ಪ್ರಕಾರ 8 ಲಕ್ಷ ಕಿಮೀ ಮುಗಿದರೆ ಅದು ಗುಜರಿಗೆ ಸೇರಿಸಬೇಕು. ಇಲ್ಲಿ 14 ಲಕ್ಷ ಕಿಮೀ ಒಡಾಟ ನಡೆಸಿದರು ಗುಜರಿಗೆ ಸೇರದೆ ಘಟಕದಲ್ಲಿಯೇ ಇದೆ. ಘಟಕದಲ್ಲಿರುವ 59 ಬಸ್‌ನಲ್ಲಿ 25 ಬಸ್ ತನ್ನ ಒಡಾಟದ ಸಾಮರ್ಥ್ಯ ಮುಗಿಸಿಕೊಂಡು ಗುಜರಿ ಸೇರಿವೆ. ಆದರು ಈ ಬಸ್ ಗಳನ್ನು ಈ ಘಟಕದ ಅ ಧಿಕಾರಿಗಳು ರೂಟ್‌ಗಳಲ್ಲಿ ಚಲಾಯಿಸಿ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವ ಡಕೋಟ್ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ಘಟಕ ಅಧಿಕಾರಿಗಳು ಪ್ರಯಾಣಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಡಕೋಟಾ ಬಸ್‌ಗಳನ್ನು ತೆಗೆದು ಉತ್ತಮ ಬಸ್‌ಗಳನ್ನು ಓಡಾಟಕ್ಕೆ ಬಿಡದಿದ್ದರೆ ಸಂಘಟನೆ ವತಿಯಿಂದ ಬಸ್ ನಿಲ್ದಾಣ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು.
–ಉಮೇಶ ನಾಯ್ಕ, ವಕೀಲರು
-ಅರುಣ ಶೆಟ್ಟಿ