ಭಾರತ ಕ್ರಿಕೆಟ್ ತಂಡಕ್ಕೆ ದೊರೆತ ಶ್ರೇಷ್ಠ ಆಟಗಾರರು ಎಂದು ಪಟ್ಟಿ ಮಾಡಲು ಹೊರಟರೆ, ತಪ್ಪದೇ ಸೇರಿಸಬೇಕಾದ ಹೆಸರು -ಮೊಹಿಂದರ್ ಅಮರನಾಥ್ ಅವರದ್ದು. ಈತ ‘ಜಿಮ್ಮಿ’ ಅಮರನಾಥ್ ಎಂಬ ಅಡ್ಡ ಹೆಸರಿನಿಂದಲೇ ಹೆಸರಾಗಿದ್ದವನು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತಲ್ಲ, ಆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಗಿದ್ದು ಇದೇ ಮೊಹಿಂದರ್. ಟೆಸ್ಟ್ ಮತ್ತು ಏಕದಿನ – ಎರಡೂ ಬಗೆಯ ಪಂದ್ಯಗಳಿಗೆ ಈತ ಹೇಳಿ ಮಾಡಿಸಿದ ಆಟಗಾರ. ಟೆಸ್ಟ್ ಅಂದಾಕ್ಷಣ ಭಾರೀ ಜಿಗುಟಿನ ಆಟಕ್ಕೆ ಮುಂದಾಗುತ್ತಿದ್ದ. ಸೋತು ಹೋಗುವಂಥ ಎಷ್ಟೋ ಪಂದ್ಯಗಳಲ್ಲಿ ಜಿಗುಟಿನ ಆಟವಾಡಿ, ಔಟ್ ಆಗದೆ ಉಳಿದು ಪಂದ್ಯವನ್ನು ಡ್ರಾ ಮಾಡಿಸಿದ್ದು ಮೊಹಿಂದರ್‌ನ ಹೆಚ್ಚುಗಾರಿಕೆ. ಇಂಥ ವ್ಯಕ್ತಿ, ಏಕದಿನ ಪಂದ್ಯ ಆಡಲು ಬಂದರೆ, ಟೆಸ್ಟ್ ಪಂದ್ಯವನ್ನು ಆಡಿದ್ದೇ ಸುಳ್ಳು ಎಂಬ ಭಾವನೆ ಬರುವಂತೆ ಬ್ಯಾಟ್ ಬೀಸುತ್ತಿದ್ದ. ಇಂಥ ಹಿನ್ನೆಲೆಯ ಮೊಹಿಂದರ್ ಹೆಸರಿನಲ್ಲಿ ಒಂದು ವಿಶಿಷ್ಟ ದಾಖಲೆಯಿದೆ. ಈತ ಮೂರು ಬಾರಿ ಹ್ಯಾಂಡಲ್ಡ್ ದ ಬಾಲ್ ಮೂಲಕ ಔಟ್ ಆಗಿದ್ದಾರೆ. ಕ್ರಿಕೆಟ್‌ನಲ್ಲಿ ಹಲವಾರು ರೀತಿಯ ಔಟ್‌ಗಳಿವೆ. ಅದರಲ್ಲಿ ಹ್ಯಾಂಡಲ್ಡ್ ದಿ ಬಾಲ್, ಹಿಟ್‌ವಿಕೆಟ್‌ಗಳೆಲ್ಲ ವಿಚಿತ್ರವಾದವು. ಅಪರೂಪಕ್ಕೊಮ್ಮೆ ಆಗುವಂತಹದ್ದು. ಹ್ಯಾಂಡಲ್ಡ್ ಬಾಲ್ ಎಂದರೇನು, ಅದರಲ್ಲಿ ವಿಶೇಷವೇನು ಎನ್ನುತ್ತೀರಾ? ಚೆಂಡು ಬ್ಯಾಟ್ಸ್‌ಮನ್ ಅನ್ನು ವಂಚಿಸಿ, ವಿಕೆಟ್ ಕಡೆ ನುಗ್ಗುವಾಗ ಬ್ಯಾಟ್ಸ್‌ಮನ್‌ಗಳು ಅದನ್ನು ಕೈಯಿಂದ ತಡೆದು ಔಟಾಗುವುದು! ಮೂರು ಸಂದರ್ಭದಲ್ಲಿ ಮೊಹಿಂದರ್ ತಾನೇ ಚೆಂಡು ಎದುರಿಸಲು ವಿಫಲವಾಗಿದ್ದಾರೆ. ಬ್ಯಾಟ್‌ಗೆ ಸಿಗದೇ ನುಸುಳಿದ ಚೆಂಡು, ವಿಕೆಟ್‌ಗೆ ತಾಗುವ ಮೊದಲೇ, ಅದನ್ನು ತಾವೇ ಕೈಲಿ ಹಿಡಿದು, ಆಚೆ ಎಸೆದಿದ್ದಾರೆ!!! ಇಂಥ ದಾಖಲೆಯನ್ನು ಈವರೆಗೂ ಇನ್ಯಾರೂ ಮಾಡಿಲ್ಲ…
Advertisement
ಹಿರಿಯರು ನಿವೃತ್ತಿಯಾಗ್ತಾರೆ, ಚಿಕ್ಕವರನ್ನು ನೋಡ್ಕೋ…ಇಮ್ರಾನ್ ಖಾನ್ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಆಗಿದ್ದಾಗ, ಅವರ ಪ್ರೀತಿಪಾತ್ರ ಆಟಗಾರ ಆಗಿದ್ದವ ವಾಸಿಂ ಆಕ್ರಂ. ವೇಗದ ಬೌಲರ್ ಆಗಿದ್ದ ಅಕ್ರಂ, ಬೌನ್ಸರ್‌ಗಳಿಗೆ ಹೆಸರಾಗಿದ್ದ. ಆತ ರೊಯ್ಯನೆ ಎಸೆದ ಚೆಂಡುಗಳು ಎಷ್ಟೋ ಬಾರಿ ಬ್ಯಾಟ್ಸ್ಮನ್‌ಗಳ ಭುಜ, ತಲೆ, ಕಾಲಿಗೆ ಅಪ್ಪಳಿಸಿ, ಗಾಯಮಾಡುತ್ತಿದ್ದವು. ಆ ವೇಗದ ಬೌಲಿಂಗ್ ಎದುರಿಸಲು ಸಾಧ್ಯವಾಗದೆ ಎಷ್ಟೋ ಆಟಗಾರರು ಔಟ್ ಆಗಿಬಿಡುತ್ತಿದ್ದರು. ಅದೊಮ್ಮೆ, ಭಾರತದ ಎದುರು ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಈ ಅಕ್ರಂ ಯಥಾಪ್ರಕಾರ, ಭಾರತದ ಹಿರಿಯ ಆಟಗಾರರಾದ ಕಪಿಲ್ ದೇವ್, ಅಜರುದ್ದೀನ್ ಮುಂತಾದವರ ಮೇಲೆ ಬೌನ್ಸರ್ ಹಾಕುತ್ತಿದ್ದ. ಆ ಪಂದ್ಯದಲ್ಲಿ ಹೊಸಮುಖವಾಗಿ ತೆಂಡೂಲ್ಕರ್ ಕೂಡ ಇದ್ದ. ಹಿರಿಯ ಆಟಗಾರರ ಮೇಲೆ ಬೌನ್ಸರ್ ಹಾಕುವುದನ್ನು ಗಮನಿಸಿದ ಇಮ್ರಾನ್ ಖಾನ್, ವಾಸಿಂ ಅಕ್ರಂ ಬಳಿ ಬಂದು ಹೇಳಿದ ಮಾತು- ಈ ಹಿರಿಯರು ಇನ್ನು ವರ್ಷದೊಳಗೆ ನಿವೃತ್ತಿಯಾಗ್ತಾರೆ. ಡ್ಯಾಮೇಜ್‌ಮಾಡುವುದಾದರೆ, ಹೊಸ ಆಟಗಾರರಿಗೆ ಡ್ಯಾಮೇಜ್ ಮಾಡು. ಪಾಕಿಸ್ತಾನ ತಂಡಕ್ಕೆ ಅಪಾಯ ಇರುವುದು ತೆಂಡೂಲ್ಕರ್ ಥರದ ಕಿರಿಯ ಆಟಗಾರರಿಂದಲೇ…