ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ರಥಬೀದಿಯಲ್ಲಿದ್ದ ಬೃಹತ್ ಗಾತ್ರದ ಅರಳಿ ಮರ(ಅಶ್ವತ್ಥ)ವೊಂದು ಗುರುವಾರ ಬೆಳೆಗ್ಗೆ ಧರೆಗುರುಳಿದ್ದು, ಮರ ವಿದ್ಯುತ್ ತಂತಿಯ ಮೇಲೆ ಬಿದ್ದು 5-6 ವಿದ್ಯುತ್ ಕಂಬಗಳು ಧರೆಗುರುಳಿರುವ ಜತೆಗೆ ರಸ್ತೆಗೆ ಬಿದ್ದ ಪರಿಣಾಮ ಕೆಲವೊತ್ತು ಸಂಚಾರ ವ್ಯತ್ಯಯ ಉಂಟಾಯಿತು.
ಬೆಳ್ಳಗ್ಗಿನ ಹೊತ್ತು ಜನಸಂಚಾರ ಹಾಗೂ ವಾಹನ ಸಂಚಾರ ಹೆಚ್ಚಿರುವ ಸಮಯವಾದರೂ, ದೇವರ ಪವಾಡದ ರೀತಿಯಲ್ಲಿ ಯಾವುದೇ ಜೀವಹಾನಿ ಉಂಟಾಗಿಲ್ಲ.ಕಳೆದೆರಡು ದಿನಗಳಲ್ಲಿ ಮರದ ರೆಂಬೆಗಳು ಬಿದ್ದಿದ್ದು, ಆಗಲೂ ಯಾವುದೇ ಹಾನಿ ಉಂಟಾಗಿಲ್ಲ.
ಗುರುವಾರ ಬೆಳಗ್ಗಿನ ಹೊತ್ತು ಮರ ಏಕಾಏಕಿ ಬುಡದ ಭಾಗದಲ್ಲಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ಕಂಬಗಳು ಧರೆಗುರುಳಿರುವುದು ಬಿಟ್ಟರೆ, ಪಕ್ಕದಲ್ಲಿದ್ದ ಪ್ರಯಾಣಿಕರ ತಂಗುದಾಣ, ಅಂಗಡಿಗೆ ಯಾವುದೇ ಹಾನಿಯಾಗಿಲ್ಲ. ಮರ ಬೀಳುವ ಕೆಲ ಹೊತ್ತಿನ ಮೊದಲೇ ಶಾಲಾ ಬಸ್ಸುಗಳು, ಇತರ ವಾಹನಗಳು ಮರದ ಬಿದ್ದಿರುವ ಭಾಗದಲ್ಲೇ ಹಾದು ಹೋಗಿದ್ದವು. ಜತೆಗೆ ಬೀಳುವ ಹೊತ್ತಿನಲ್ಲೂ ದೂರದಲ್ಲಿ ದ್ವಿಚಕ್ರ ವಾಹನಗಳು ಅದೇ ಭಾಗಕ್ಕೆ ಆಗಮಿಸುತ್ತಿತ್ತು. ಬೀಳುವ ಹೊತ್ತಿನಲ್ಲಿ ಜೋರಾದ ಶಬ್ದ ಕೇಳಿಬಂದಿದ್ದು, ತಂಗುದಾಣದಲ್ಲಿ ಕೂತವರು ಕೂಡ ಬೀಳುತ್ತಿದ್ದಂತೆ ಹೆದರಿ ದೂರಕ್ಕೆ ಓಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಹತ್ತಾರು ವಾಹನಗಳಿದ್ದವು.
ದೇವಸ್ಥಾನದ ವಠಾರದಲ್ಲಿ ಫೆ. 6ರಂದು ಯಕ್ಷಗಾನ ಸೇವೆಯಾಟ ನಡೆದಿದ್ದು, ಆ ಸಂದರ್ಭದಲ್ಲಿ ಬುಡದಲ್ಲೇ ಹತ್ತಾರು ವಾಹನಗಳು ನಿಂತಿದ್ದವು. ಆ ವೇಳೆ ಬಿದ್ದಿದ್ದರೆ ಜೀವಹಾನಿಯ ಜತೆಗೆ ವಾಹನಗಳೂ ಜಖಂಗೊಳ್ಳುತ್ತಿದ್ದವು. ಈ ರೀತಿಯಲ್ಲಿ ಜೀವಕ್ಕೆ ಒಂದು ಸಣ್ಣ ಹಾನಿಯನ್ನೂ ಮಾಡದೆ ಅಶ್ವತ್ಥ ಮರ ಬಿದ್ದಿರುವುದಕ್ಕೆ ಶ್ರೀ ಶರಭೇಶ್ವರ ದೇವರ ಪವಾಡವೆಂದೇ ಗ್ರಾಮಸ್ಥರು ಅಭಿಪ್ರಾಯಿಸುತ್ತಿದ್ದಾರೆ.