Advertisement

ಹಳೆ ನೋಟು ವಿನಿಮಯ ಮಾಡುತ್ತಿದ್ದವರ ಸೆರೆ 

11:33 AM Mar 19, 2017 | |

ಬೆಂಗಳೂರು: ಅಮಾನ್ಯಗೊಂಡ ನೋಟುಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಒಂದು ಸಾವಿರ ಮುಖ ಬೆಲೆಯ 1 ಲಕ್ಷ  ಹಾಗೂ 500 ಮುಖ ಬೆಲೆಯ 49 ಲಕ್ಷ ರೂ. ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಕಳೆದ ಡಿಸೆಂಬರ್‌ 31ರ ನಂತರ ಹಳೇ ನೋಟುಗಳನ್ನು ಹೊಂದುವುದು ಅಪರಾಧ ಎಂಬ ಕಾನೂನು ಜಾರಿಯಾದ ಬಳಿಕ ಪೊಲೀಸರು ವಶಪಡಿಸಿಕೊಂಡಿರುವ ದೊಡ್ಡ ಮೊತ್ತದ ಹಣ  ಇದಾಗಿದೆ. ಪ್ರಕರಣ ಸಂಬಂಧ ಆಡುಗೋಡಿ ನಿವಾಸಿ, ಶಾಂತಿನಗರದಲ್ಲಿ ಪಾನ್‌ಬ್ರೋಕರ್‌ ಮಳಿಗೆ ನಡೆಸುವ ಆನಂದ್‌ ಜೈನ್‌ (45) ಮತ್ತು ಈಜಿಪುರದ ರಿಯಲ್‌ ಎಸ್ಟೇಟ್‌ ಉದ್ಯಮಿ ವಿನಾಯಕ್‌ ಪ್ರಸಾದ್‌ (49) ಎಂಬುವರನ್ನು ಬಂಧಿಸಲಾಗಿದೆ. 

ಸದಾಶಿವ ನಗರದಲ್ಲಿ ಗಣೇಶ್‌ ಜ್ಯೂವೆಲ್ಲರಿ ಮಳಿಗೆ ಹೊಂದಿರುವ ವಿಜಯ್‌ ಕುಮಾರ್‌ ಮತ್ತು ರಿಯಲ್‌ ಎಸ್ಟೇಟ್‌ ಏಜಂಟ್‌ ಸಲಾಂ ಎಂಬುವರು ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಸ್‌.ರವಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾಂತಿನಗರ ಲಾಂಗ್‌ಫೋರ್ಡ್‌ ಲೇಔಟ್‌ನ ಲಿಂಕ್‌ ರಸ್ತೆಯಲ್ಲಿಯ ಮನೆಯೊಂದರಲ್ಲಿ ಆರೋಪಿಗಳು ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಒಂದು ಕೋಟಿ ಹೊಸ ನೋಟುಗಳ ಬದಲಾವಣೆಗೆ ಒಂದು ಲಕ್ಷ ಕಮಿಷನ್‌ ಕೊಡುವುದಾಗಿ ಕೆಲವರಿಗೆ ಆಮಿಷವೊಡ್ಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳು ನೋಟುಗಳ ಬದಲಾವಣೆಗೆ 15 ದಿನಗಳ ಹಿಂದೆಯೇ ಸಂಚು ರೂಪಿಸಿದ್ದರು. ಆದರೆ, ಮನೆಯಿಂದ ಹೊರಬರದೆ ಎಲ್ಲವನ್ನು ಮನೆಯಲ್ಲೇ ನಿರ್ವಹಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಮನೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ವಿದೇಶಿಯರಿಗೂ ವಂಚಿಸಲು ಸಂಚು 
ಬಂಧನಕ್ಕೊಳಗಾಗಿರುವ ಆನಂದ್‌ ಮತ್ತು ವಿನಾಯಕ್‌ ಪ್ರಸಾದ್‌ ತಮ್ಮ ಬಳಿ ಹಳೇ ನೋಟುಗಳನ್ನು ಇಟ್ಟುಕೊಂಡಿ ದ್ದರು. ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡುತ್ತೇವೆಂದು ಚಿನ್ನಾಭರಣ ಅಂಗಡಿ ಮಾಲೀಕರಿಂದ ಲಕ್ಷಾಂತರ ರುಪಾಯಿ ಹಣ ಪಡೆಯುತ್ತಿದ್ದರು.

ಅಲ್ಲದೇ ವಿದೇಶದಲ್ಲಿರುವ ಭಾರತೀಯರ ನೋಟುಗಳ ಬದಲಾವಣೆಗೆ ಮಾ.31ರವರೆಗೆ ಗಡುವು ನೀಡಲಾಗಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಲು ಸಂಚು ರೂಪಿಸಿದ್ದ ಆರೋಪಿಗಳು, ಕಮಿಷನ್‌ ಆಧಾರದ ಮೇಲೆ ಕೆಲ ಅನಿವಾಸಿ ಭಾರತೀಯರನ್ನು ಸಂಪರ್ಕಿಸಿ ಹಣ ಪಡೆದು ವಂಚನೆ ಮಾಡಲು ಸಂಚು ರೂಪಿಸಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next