Advertisement

Olave Mandara 2; ಮಂದಾರದ ಮೇಲೆ ಹೊಸಬರ ಕನಸು

01:04 PM Sep 05, 2023 | Team Udayavani |

ಕೆಲ ವರ್ಷಗಳ ಹಿಂದೆ “ಒಲವೇ ಮಂದಾರ’ ಎಂಬ ಸಿನಿಮಾವೊಂದು ತೆರೆಗೆ ಬಂದು ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅಂಥದ್ದೇ ಮತ್ತೂಂದು ಲವ್‌ ಸ್ಟೋರಿಯನ್ನು ಇಟ್ಟುಕೊಂಡು “ಒಲವೇ ಮಂದಾರ 2′ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ.

Advertisement

ಅಂದಹಾಗೆ, ಈ ಸಿನಿಮಾದ ಹೆಸರು “ಒಲವೇ ಮಂದಾರ 2′ ಅಂತಿದ್ದರೂ, ಈ ಸಿನಿಮಾಕ್ಕೂ ಕೆಲ ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ಒಲವೇ ಮಂದಾರ’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಕಥೆಗೆ ಹೊಂದಾಣಿಕೆಯಾಗುತ್ತದೆ ಮತ್ತು ಆ ಸಿನಿಮಾದ ಟೈಟಲ್‌ನಿಂದ ತಮ್ಮ ಸಿನಿಮಾಕ್ಕೂ ಅದೇ ಹೆಸರನ್ನು ಇಟ್ಟುಕೊಂಡಿದ್ದೇವೆ ಎಂಬುದು ಚಿತ್ರತಂಡದ ಮಾತು.

ಈಗಾಗಲೇ ಸದ್ದಿಲ್ಲದೆ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗೆ ಸಿನಿಮಾದ ಹಾಡನ್ನು ಬಿಡುಗಡೆಗೊಳಿಸಿದೆ. “ಬಸವ ಕಂಬೈನ್ಸ್‌’ ಬ್ಯಾನರಿನಲ್ಲಿ ರಮೇಶ್‌ ಮಾರ್ಗೋಲ್‌ ಮತ್ತು ಟಿ. ಎಂ ಸತೀಶ್‌ ಜಂಟಿಯಾಗಿ ನಿರ್ಮಿಸುತ್ತಿರುವ “ಒಲವೇ ಮಂದಾರ 2′ ಸಿನಿಮಾಕ್ಕೆ ಎಸ್‌. ಆರ್‌ ಪಾಟೀಲ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸನತ್‌ ನಾಯಕನಾಗಿ ಅಭಿನಯಿಸುತ್ತಿರುವ “ಒಲವೇ ಮಂದಾರ 2′ ಸಿನಿಮಾದಲ್ಲಿ ಅನೂಪಾ, ಪ್ರಜ್ಞಾ ಭಟ್‌ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಭವ್ಯಾ, ವಿಜಯಲಕ್ಷ್ಮೀ, ಮಂಜುಳಾ ರೆಡ್ಡಿ, ಬೆನಕ ಮಂಜಪ್ಪ, ಡಿಂಗ್ರಿ ನಾಗರಾಜ, ಮಡೆನೂರು ಮನು ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಎಸ್‌. ಆರ್‌ ಪಾಟೀಲ್‌, “ಇದೊಂದು ಅಪ್ಪಟ ಲವ್‌ಸ್ಟೋರಿ ಸಿನಿಮಾ. ಪ್ರೀತಿ, ಸ್ನೇಹ, ಸಂಬಂಧಗಳ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಮಕ್ಕಳು ಪ್ರೀತ್ಸೋದು ತಪ್ಪಲ್ಲ, ಆದರೆ ಪೋಷಕರು ಅದನ್ನು ನೋಡುವ ದೃಷ್ಟಿ ಬದಲಾಗಬೇಕು ಎಂಬುದನ್ನು ಸಿನಿಮಾದಲ್ಲಿ ಹೆಳಿದ್ದೇವೆ. ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಟೈಟಲ್‌ ಇಡಲಾಗಿದೆ’ ಎಂದು ವಿವರಣೆ ನೀಡಿದರು.

Advertisement

“ಸಿನಿಮಾದ ಮೇಲಿನ ಆಸಕ್ತಿಯಿಂದ ಈ ಸಿನಿಮಾ ನಿರ್ಮಿಸಿದ್ದೇವೆ. ಜೊತೆಗೆ ಸಿನಿಮಾದಲ್ಲಿ ಒಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಕಲಬುರಗಿ ಸುತ್ತಮುತ್ತ ಮಾಡಿದ್ದೇವೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಸೆನ್ಸಾರ್‌ ಮುಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್‌ 15ಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ’ ಎಂಬುದು ನಿರ್ಮಾಪಕರ ಮಾತು.

“ಒಲವೇ ಮಂದಾರ 2′ ಸಿನಿಮಾಕ್ಕೆ ಒಂದು ಮುತ್ತಿನ ಕಥೆ’ ಎಂಬ ಅಡಿಬರಹವಿದೆ. ಚಿತ್ರದ 4 ಹಾಡುಗಳಿಗೆ ಡಾ. ಕಿರಣ್‌ ತೋಟಂಬೈಲು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಹೇಮಂತ್‌, ಅನುರಾಧಾ ಭಟ್‌, ಅಂಕಿತಾ ಮೊದಲಾದವರು ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಆನಂದ ಇಳಯರಾಜ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next