ಮುಂಬಯಿ : ತಮ್ಮ ಪಾವತಿ ವ್ಯವಸ್ಥೆಯನ್ನು ಪುನರ್ ರೂಪಿಸಬೇಕೆಂದು ಆಗ್ರಹಿಸಿ ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಟ್ಯಾಕ್ಸಿ ಚಾಲಕರು ಇಂದು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.
ಇದರ ಪರಿಣಾಮವಾಗಿ ಹೊಸದಿಲ್ಲಿ, ಮುಂಬಯಿ, ಹೈದರಾಬಾದ್, ಪುಣೆ ಮತ್ತು ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಲಿದೆ.
“ನಮಗೆ ದೊಡ್ಡ ಪಾವತಿಯ ಭರವಸೆಗಳನ್ನು ನೀಡಲಾಗಿತ್ತು. ಆದರೆ ವಾಸ್ತವದಲ್ಲಿ ನಮ್ಮ ವಾಹನದ ಖರ್ಚು ವೆಚ್ಚಗಳನ್ನು ಕೂಡ ನಿಭಾಯಿಸಲಾಗಷ್ಟು ಕಡಿಮೆ ಮೊತ್ತದ ಪಾವತಿ ನಮಗೆ ಸಿಗುತ್ತಿದೆ. ನಾವು ಐದರಿಂದ ಏಳು ಲಕ್ಷ ರೂಪಾಯಗಳನ್ನು ಈ ವಹಿವಾಟಿನಲ್ಲಿ ತೊಡಗಿಸಿದ್ದೇವೆ; ನಾವು ತಿಂಗಳಿಗೆ 1.5 ಲಕ್ಷ ರೂ. ನಿರೀಕ್ಷಿಸುತ್ತಿದ್ದೇವೆ. ಆದರೆ ನಮಗೆ ಅದು ಕನಸಿನ ಗಂಟಾಗಿದೆ. ಇದಕ್ಕೆ ಕಾರಣ ಈ ಕಂಪೆನಿಗಳ ಆಡಳಿತೆಯ ನಮೂನೆ ದೋಷಯುಕ್ತವಾಗಿರುವುದೇ ಆಗಿದೆ ‘ ಎಂದು ಓಲಾ, ಉಬರ್ ಟ್ಯಾಕ್ಸಿ ಚಾಲಕರು ಹೇಳಿದ್ದಾರೆ.
ಓಲಾ ಮತ್ತು ಉಬರ್ ಟ್ಯಾಕ್ಸಿ ಚಾಲಕರ ಈ ಮುಷ್ಕರವನ್ನು ಮಹಾರಾಷ್ಟ್ರ ನವನಿರ್ಮಾಣ ವಾಹತುಕ್ ಸೇನಾ ನಿರ್ವಹಿಸುತ್ತಿದ್ದು ಇದರ ಸಂಚಾಲಕ ಸಂಜಯ್ ನಾಯಕ್, ಟ್ಯಾಕ್ಸಿ ಚಾಲಕರ ಪಾವತಿ ವ್ಯವಸ್ಥೆಯನ್ನು ಪುನರ್ ರೂಪಿಸುವುದು ಅತೀ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಓಲಾ, ಉಬರ್ ಸಂಸ್ಥೆಗಳು ಕಂಪೆನಿ ಮಾಲಕತ್ವದ ಕಾರುಗಳಿಗೆ ಆದ್ಯತೆ ನೀಡುತ್ತವೆಯೇ ಹೊರತು ಟ್ಯಾಕ್ಸಿ ಮಾಲಕರ ಕಾರುಗಳಿಗೆ ಆದ್ಯತೆ ನೀಡುವುದಿಲ್ಲ; ಇದರಿಂದಾಗಿ ನಮ್ಮ ಧ್ವನಿಗೆ ಬೆಲೆ ಇಲ್ಲವಾಗಿದೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ.