Advertisement

ಓಲಾ ಅಮಾನತು ಆದೇಶ ಹಿಂದಕ್ಕೆ?

12:15 PM Mar 25, 2019 | Lakshmi GovindaRaju |

ಬೆಂಗಳೂರು: ಆ್ಯಪ್‌ ಆಧಾರಿತ ಟ್ಯಾಕ್ಸಿ ಓಲಾ ಸಂಸ್ಥೆ ಸೇವೆಯನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಕೇವಲ ಮೂರು ದಿನಗಳ ಅಂತರದಲ್ಲಿ ಸರ್ಕಾರ, ತನ್ನ ನಿರ್ಧಾರ ಹಿಂಪಡೆಯಲು ಮುಂದಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳನ್ನು ಉಲ್ಲಂ ಸಿದ ಆರೋಪದ ಹಿನ್ನೆಲೆಯಲ್ಲಿ ಓಲಾ ಸಂಸ್ಥೆಗೆ ನೀಡಿದ್ದ ಪರವಾನಗಿಯನ್ನು ಆರು ತಿಂಗಳು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ಆದೇಶ ಸ್ವೀಕರಿಸಿದ ಮೂರು ದಿನಗಳಲ್ಲಿ ಪರವಾನಗಿಯನ್ನು ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ವಾಪಸ್‌ ನೀಡಬೇಕು ಎಂದು ಸೂಚಿಸಿತ್ತು. ಆದರೆ, ಮೂರು ದಿನಗಳಲ್ಲಿ ತಾನು ನೀಡಿದ್ದ ಆದೇಶವನ್ನೇ ಹಿಂಪಡೆಯಲು ಉದ್ದೇಶಿಸಿದೆ.

“ಹೀಗೆ ಏಕಾಏಕಿ ಸೇವೆ ಸ್ಥಗಿತಗೊಳಿಸುವುದರಿಂದ ಅವಲಂಬಿತ 75 ಸಾವಿರಕ್ಕೂ ಚಾಲಕರು ಅತಂತ್ರರಾಗಲಿದ್ದಾರೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮನದಟ್ಟು ಮಾಡಲಾಗಿದೆ.

ಅಲ್ಲದೆ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಅವರೊಂದಿಗೂ ಚರ್ಚಿಸಿದ್ದು, ಸರ್ಕಾರ ಶೀಘ್ರ ಈ ಆದೇಶವನ್ನು ಹಿಂಪಡೆಯಲಿದೆ’ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

Advertisement

ಅಲ್ಲದೆ, “ಓಲಾ ಕ್ಯಾಬ್‌ಗಳು ಇಂದಿನಿಂದ (ಭಾನುವಾರದಿಂದ) ಎಂದಿನಂತೆ ಕಾರ್ಯಾಚರಣೆ ಆರಂಭಿಸಿವೆ. ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಉದ್ದಿಮೆಗಳೊಂದಿಗೆ ಸರ್ಕಾರವು ಕೈಜೋಡಿಸಿ ಕೆಲಸ ಮಾಡಲು ಪೂರಕವಾದ ನೀತಿಗಳ ಅವಶ್ಯಕತೆ ಇದೆ’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಟಿ.ಎಂ. ವಿಜಯ್‌ ಭಾಸ್ಕರ್‌, “ಓಲಾ ಸಂಸ್ಥೆಯ ಸೇವೆಗಳನ್ನು ಇದುವರೆಗೆ ಸ್ಥಗಿತಗೊಳಿಸಿಲ್ಲ. ಸೋಮವಾರ ಆ ಸಂಸ್ಥೆ ಮುಖ್ಯಸ್ಥರು ಸಾರಿಗೆ ಆಯುಕ್ತರು ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ.

ತದನಂತರ ಸಾರಿಗೆ ಆಯುಕ್ತರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು. ಇದೆಲ್ಲದರ ಮಧ್ಯೆ ಓಲಾ ಸೇವೆ ಎಂದಿನಂತೆ ಮುಂದುವರಿದಿದೆ. ಓಲಾ ಸಂಸ್ಥೆಯು ತನ್ನ ಸೇವಾ ವ್ಯಾಪ್ತಿ ವಿಸ್ತರಿಸುವ ಭರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಆ್ಯಪ್‌ ಆಧಾರಿತ ಬೈಕ್‌ ಸೇವೆ ಆರಂಭಿಸಿತ್ತು.

ಈ ಬಗ್ಗೆ ವಿವಿಧ ಟ್ಯಾಕ್ಸಿ ಚಾಲಕರ ಸಂಘಗಳು ಸಾರಿಗೆ ಇಲಾಖೆಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂ ಸಿದ ಆರೋಪದ ಮೇರೆಗೆ “ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳು -2018ರ 11 (1)’ರ ಅಡಿ ಸಂಸ್ಥೆಗೆ ನೀಡಲಾಗಿದ್ದ ಪರವಾನಗಿ ಅಮಾನತುಗೊಳಿಸಿ, ತಕ್ಷಣದಿಂದಲೇ ಸೇವೆ ಸ್ಥಗಿತಗೊಳಿಸಬೇಕೆಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಈ ವಿಷಯದ ಗಂಭೀರತೆ ಅರಿಯದೆ, ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೂ ತರದೆ ಕೆಳಹಂತದ ಅಧಿಕಾರಿ ಏಕಾಏಕಿ ಆದೇಶ ಹೊರಡಿಸಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಓಲಾ ಕ್ಯಾಬ್‌ ಪರವಾನಗಿ ನಿಯಮಗಳ ಉಲ್ಲಂಘನೆ ವಿಚಾರದ ಬಗ್ಗೆ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದು, ಶೀಘ್ರ ಬಗೆಹರಿಸುವಂತೆ ಸೂಚಿಸಿದ್ದೇನೆ. ಹಾಗಾಗಿ, ಆದಷ್ಟು ಬೇಗ ಇತ್ಯರ್ಥಗೊಳ್ಳಲಿದೆ.
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next