Advertisement
ಪ್ರಯಾಣಿಕರಿಗೆ “ಲಾಸ್ಟ್ ಮೈಲ್ ಕನೆಕ್ಟಿವಿಟಿ’ ನೀಡಲು ಸ್ವತಃ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿ, ಅಗ್ರಿಗೇಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಆ್ಯಪ್ ಆಧಾರಿತ ಸೇವೆ ಕಲ್ಪಿಸಲು ಚಿಂತನೆ ನಡೆದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಒಲಾ-ಉಬರ್‌ನಂತೆಯೇ ಬಿಎಂಟಿಸಿಯಿಂದಲೂ “ಕ್ಯಾಬ್ ಸೇವೆ’ ದೊರೆಯಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
Related Articles
Advertisement
ವಾಹನ ಲಿಂಕ್ ಮಾಡಲು ಅವಕಾಶ: ಆ್ಯಪ್ ಆಧರಿತ ಸೇವೆ ನಿರ್ವಹಣೆಗೆ ಅಗ್ರಿಗೇಟರ್‌ಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲಿರುವ ಬಿಎಂಟಿಸಿ, ನಂತರ ಒಲಾ, ಉಬರ್ ಸಂಸ್ಥೆಗಳೊಂದಿಗೆ ಚಾಲಕರು ತಮ್ಮ ವಾಹನವನ್ನು “ಜೋಡಣೆ’ ಮಾಡಿದಂತೆಯೇ ಬಿಎಂಟಿಸಿ ಜತೆ ಕೂಡ “ಜೋಡಣೆ’ (ಲಿಂ ಕ್) ಮಾಡಿಕೊಳ್ಳಲು ಅವಕಾಶ ಇರಲಿದೆ.
ಯೋಜನೆ ಕಾರ್ಯರೂಪಕ್ಕೆ ಬಂದರೆ, ಯಾವುದೇ ಹೂಡಿಕೆ ಇಲ್ಲದೆ ಸೇವೆ ವಿಸ್ತಾರಗೊಳ್ಳಲಿದೆ. ಹಾಗೇ ಸಂಸ್ಥೆಯ ಆದಾಯ ಕೂಡ ಹೆಚ್ಚಲಿದೆ. ಆದರೆ, ಈ ಪರಿಕಲ್ಪನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಅಂತಿಮ ಸ್ವರೂಪ ಪಡೆದುಕೊಂಡಿಲ್ಲ ಎಂದು ನಿಗಮದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊನೆ ಹಂತದ ಸಂಪರ್ಕವೇ ಸವಾಲು: ನಗರದಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ (ಕೊನೆಯ ಹಂತ ಸಂಪರ್ಕಿಸುವಿಕೆ) ದೊಡ್ಡ ಸವಾಲಾಗಿದೆ. ಮೆಟ್ರೋದಲ್ಲಿ ಬಂದಿಳಿಯುವ ಲಕ್ಷಾಂತರ ಜನ, ಮನೆಗಳನ್ನು ತಲುಪಲು ಈಗಲೂ ಆಟೋ ಅಥವಾ ಟ್ಯಾಕ್ಸಿಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣಕ್ಕಾಗಿ ಮೆಟ್ರೋ ನಡುವೆಯೂ ಒಲಾ ಮತ್ತು ಉಬರ್ ಸೇವೆಗಳು ಅಲ್ಪಾವಧಿಯಲ್ಲೇ ಹೆಚ್ಚು ಜನರನ್ನು ತಲುಪಿವೆ.
ಇದರ ಮುಂದುವರಿದ ಭಾಗವಾಗಿ ಈಗ ಬೈಕ್ ಟ್ಯಾಕ್ಸಿ ಸೇವೆಗೂ ಸರ್ಕಾರ ಅನುಮತಿ ನೀಡಲು ಹೊರಟಿದೆ. ಹೀಗಿರುವಾಗ, ನಿಗಮದಿಂದಲೇ ಆ್ಯಪ್ ಆಧಾರಿತ ಸೇವೆ ನೀಡಲು ಉದ್ದೇಶಿಸಲಾಗಿದೆ.ಆದರೆ, ಏಕಾಏಕಿ ಇದನ್ನು ಜಾರಿಗೊಳಿಸುವುದು ಕಷ್ಟ. ಮೊದಲು ಸಾರಿಗೆ ಇಲಾಖೆಯಿಂದ ಪರ್ಮಿಟ್ ಪಡೆಯಬೇಕಾಗುತ್ತದೆ. ಸೀಟುಗಳನ್ನು ಮೊದಲೇ ಬುಕಿಂಗ್ ಮಾಡಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರಯಾಣಿಕರ ಸ್ಪಂದನೆ ಹೇಗಿರುತ್ತದೆ ಎಂಬುದನ್ನೂ ನೋಡಬೇಕು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಮಾರ್ಗದಲ್ಲಿ ಇದನ್ನು ಪರಿಚಯಿಸಲಾಗುವುದು. ನಂತರ ಉಳಿದೆಡೆ ವಿಸ್ತರಿಸುವ ಬಗ್ಗೆ ಆಲೋಚಿಸಬಹುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಶೇರ್ಡ್ ಆಟೋ ಅನುಕೂಲ?: ನಗರದಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಬೇಕೇ ಬೇಕು. ಆದರೆ, ಅದಕ್ಕಾಗಿ ಆ್ಯಪ್ ಆಧಾರಿತ ಸೇವೆಗಳಿಗಿಂತ ಹೆಚ್ಚಾಗಿ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಶೇರ್ಡ್ ಆಟೋ ಅಥವಾ ಇ-ಆಟೋ ಸೇವೆ ಅವಶ್ಯಕತೆ ಇದೆ ಎನ್ನುತ್ತಾರೆ ಬಿಎಂಟಿಸಿ ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್.
50 ಲಕ್ಷ ಜನ ನಿತ್ಯ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು, ಬಡ ಮತ್ತ ಮಧ್ಯಮ ವರ್ಗದವರಾಗಿದ್ದು, ಈಗಲೂ ಅವರೆಲ್ಲರ ಬಳಿ ಸ್ಮಾರ್ಟ್‌ಫೋನ್ ಇಲ್ಲ. ಅಷ್ಟಕ್ಕೂ ಆ್ಯಪ್ ಆಧಾರಿತ ಸೇವೆ ತುಂಬಾ ದುಬಾರಿ ಆಗಿರುತ್ತದೆ. ಹೀಗಿರುವಾಗ, ಇದು ಯಾವ ವರ್ಗಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂಬುದನ್ನೂ ಯೋಚಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಒಲಾ ಹಾಗೂ ಉಬರ್ ಮಾದರಿಗಿಂತ ಶೇರ್ಡ್ ಆಟೋಗಳಿಗೆ ಒತ್ತು ನೀಡುವ ಅವಶ್ಯಕತೆ ಇದೆ. ಈ ಸಂಬಂಧ ಸಾರಿಗೆ ಇಲಾಖೆ ನಿಯಮ ತಿದ್ದುಪಡಿ ಮಾಡಬೇಕು ಎಂದು ವಿನಯ್ ಶ್ರೀನಿವಾಸ್ ಆಗ್ರಹಿಸುತ್ತಾರೆ.
ಈ ಯೋಜನೆ ಇನ್ನೂ ಪರಿಶೀಲನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಡಾ.ಎನ್.ವಿ.ಪ್ರಸಾದ್, ಬಿಎಂಟಿಸಿ ಎಂ.ಡಿ * ವಿಜಯಕುಮಾರ್ ಚಂದರಗಿ