Advertisement

ನಾನು ಬಂಡೆಯಲ್ಲ, ಸರ್ಕಾರಕ್ಕೆ ಜನ ಬೀಸುವ ಕಲ್ಲು

12:20 PM Oct 24, 2020 | Suhan S |

ಬೆಂಗಳೂರು: ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುವ ಆಸೆ. ಈ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದಾರೆ.

Advertisement

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾಅವರಪರವಾಗಿಆರ್‌.ಆರ್‌.ನಗರದ ಐಡಿಯಲ್‌ ಹೋಮ್ಸ್‌ನಲ್ಲಿ ಒಕ್ಕಲಿಗ ಸಮುದಾಯದ ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿ ಮಾತನಾಡಿದರು. ತಮ್ಮ ವಿರುದ್ಧ ಲೇವಡಿ ಮಾಡಿದ್ದ ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದರು.

ಕೆಲವರು ಬಂಡೆನಾ ಡೈನಮೇಟ್‌ ಇಟ್ಟು ಪುಡಿಪುಡಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡುಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗವಾಗಲು ಸಾಧ್ಯ. ಮಿತಿ ಮೀರಿದರೆ. ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ನಾನು ಕೇವಲ ಬಂಡೆಯಾಗಲು ಇಚ್ಚಿಸುವುದಿಲ್ಲ ಎಂದರು.

ಡಿ.ಕೆ. ರವಿ ಯಾವುದೋ ಕಾರಣಕ್ಕೆ ಹೇಡಿತನ ತೋರಿಬಿಟ್ಟ. ಆತ ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸಿ ತನ್ನ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ನೋಡಿಕೊಳ್ಳಬೇಕಿತ್ತು. ನಷ್ಟ ಆಗಿದ್ದು ಯಾರಿಗೆ? ನಮ್ಮದೇ ಸರ್ಕಾರ ಸಿಬಿಐ ತನಿಖೆಗೆ ಕೊಟ್ಟೆವು. ಆದರೆ, ನಾವು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದರು. ನಮ್ಮ ಹೆಣ್ಣು ಮಗಳು ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿತ್ತಾಳೆ. ಆದರೆ, ನಮ್ಮ ಶೋಭಕ್ಕ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಅಂತಾರಲ್ಲ ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳ್ಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ ಎಂದು ಪ್ರಶ್ನಿಸಿದರು.

ಮೊದಲು ಕೋವಿಡ್ ಗೆ ಲಸಿಕೆ ತರಲಿ: ಡಿಕೆಶಿ :

Advertisement

ಬೆಂಗಳೂರು: ಕೋವಿಡ್ ಹರಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ನೇರ ಕಾರಣವಾಗಿದ್ದು, ಮೊದಲು ಲಸಿಕೆ ತರಲಿ. ಆಮೇಲೆ ಅದನ್ನು ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಲಿ. ಚುನಾವಣೆಗೋಸ್ಕರ ಸುಮ್ಮನೆ ಆಶ್ವಾಸನೆ ನೀಡುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಟೀಕಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಶುಕ್ರವಾರ ಪ್ರಚಾರ ವೇಳೆ ಮಾತನಾಡಿದ ಅವರು, ಸರ್ಕಾರ ಮೊದಲು ಲಸಿಕೆ ಕಂಡುಹಿಡಿದಿರುವ ಘೋಷಣೆ ಮಾಡಲಿ. ಸುಮ್ಮನೆ ಚುನಾವಣೆಗಾಗಿ ಭರವಸೆ ನೀಡುವುದು ಬೇಡ. ಸರ್ಕಾರವೇ ಸೋಂಕು ಹರಡಿಸಿ, ಅವರಿಗೆ ಹಾಸಿಗೆ, ಚಿಕಿತ್ಸೆ ಸೌಲಭ್ಯ ನೀಡಲು ಸಾಧ್ಯವಾಗದೆ, ಎಲ್ಲಾ ವಿಚಾರದಲ್ಲೂ ವಿಫ‌ಲವಾಗಿದ್ದು, ಈಗ ಉಚಿತ ಚಿಕಿತ್ಸೆ ನೀಡುವ ಭರವಸೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಸರ್ಕಾರ ಲಾಕ್‌ ಡೌನ್‌ ಮಾಡಿದ್ದಕ್ಕೆ ಚಾಲಕರಿಗೆ, ನೇಕಾರರಿಗೆ, ಸವಿತಾ ಸಮಾಜದವರಿಗೆ 5 ಸಾವಿರ ಕೊಡುತ್ತೇನೆ ಎಂದರು.

ಆದರೆ ಈವರೆಗೂ ಕೊಟ್ಟಿಲ್ಲ. ಒಬ್ಬ ಕಾರ್ಮಿಕ, ರೈತನಿಗೆ ಸಹಾಯ ಮಾಡಿಲ್ಲ. ನಗರ ಪ್ರದೇಶಗಳಲ್ಲಿ ಕಟ್ಟಡಗಳು ಖಾಲಿ ಬಿದ್ದಿದೆ. ಪಾಲಿಕೆಗಳಿಗೆ ಸೂಚನೆ ನೀಡಿ ಅವರಿಗೆ ತೆರಿಗೆ ವಿನಾಯಿತಿ ಕೊಡಲು ಇವರಿಂದ ಸಾಧ್ಯವಾಗುವುದಿಲ್ಲವೇ? ಬ್ಯಾಂಕ್‌ ಸಾಲದ ಬಡ್ಡಿ ಮನ್ನಾ ಮಾಡಿದ್ದಾರಾ? ಇವರೇನು ಲಸಿಕೆಕೊಡುತ್ತಾರೆ ಎಂದರು.

ಪ್ರಮೋಷನ್‌ಗಾಗಿ ಆರೋಪ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಗೆ, ನಮ್ಮ ಅಶೋಕಣ್ಣಗೆ, ಸಿ.ಟಿ ರವಿ ಅಣ್ಣನಿಗೆ, ಸರ್ವೀಸ್‌ ಪ್ರೋವೈಡರ್‌ ಅಶ್ವಥ್‌ ನಾರಾಯಣ ಎಲ್ಲರಿಗೂ ಸಮಯ ಬಂದಾಗ ಬಂಡೆ ಕಥೆ ಹೇಳುತ್ತೇನೆ. ನನ್ನ ವಿರುದ್ಧ ಮಾತನಾಡಿದರೆ ಅವರಿಗೆ ಪ್ರಮೋಷನ್‌ ಸಿಗುತ್ತದೆ. ಆದರೆ, ಅಶೋಕ್‌ ಅವರಿಗೆ ಡಿಮೋಷನ್‌ ಆಗಿದೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next