ಚೆನ್ನೈ/ತಿರುವನಂತಪುರ: ಕರ್ನಾಟಕ ಸಹಿತ ಮೂರು ರಾಜ್ಯಗಳಿಗೆ ತಲೆನೋವಾಗಿದ್ದ ಓಖಿ ಚಂಡಮಾರುತ ಶನಿವಾರ ಲಕ್ಷದ್ವೀಪವನ್ನು ದಾಟಿದ್ದು, ಕೇರಳ, ತಮಿಳು ನಾಡು ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಚಂಡ ಮಾರುತದ ಅಬ್ಬರ ಇನ್ನೂ ತಗ್ಗಿಲ್ಲ. ಇದರ ತೀವ್ರತೆ ಕ್ಷಣ ಕ್ಷಣಕ್ಕೂ ಹೆಚ್ಚು ತ್ತಿದ್ದು, “ತೀವ್ರ’ದಿಂದ “ಅತಿತೀವ್ರ’ ಹಂತಕ್ಕೆ ತಲುಪಿದ್ದು, ಮುಂಬಯಿ, ಗುಜರಾತ್ ಕರಾವಳಿಯಲ್ಲಿ ಆತಂಕದ ಛಾಯೆ ಎಬ್ಬಿಸಿದೆ. ಡಿ. 4ರಿಂದ ಚಂಡ ಮಾರುತ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ವೇಳೆ, ಓಖಿಗೆ ಬಲಿಯಾದವರ ಸಂಖ್ಯೆ ಶನಿವಾರ 22ಕ್ಕೇರಿದೆ. ಕೇರಳದಲ್ಲಿ 12, ತಮಿಳುನಾಡಿನಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಕ್ಷ ದ್ವೀಪದಲ್ಲಿ ಅಪಾರ ಹಾನಿ ಉಂಟಾಗಿದೆ.
531 ಮೀನುಗಾರರ ರಕ್ಷಣೆ: ಕೇರಳ ಮತ್ತು ಲಕ್ಷದ್ವೀಪದ ಕರಾವಳಿಯಾಚೆ ಸಿಲುಕಿದ್ದ 531 ಮಂದಿ ಮೀನುಗಾರ ರನ್ನು ರಕ್ಷಿಸಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಈ ಪೈಕಿ 393 ಮಂದಿ ಕೇರಳಿಗರು, 138 ಮಂದಿ ಲಕ್ಷದ್ವೀಪದವರು ಎಂದೂ ಹೇಳಿದ್ದಾರೆ. ಜತೆಗೆ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು ದೋಣಿ, ಸಲಕರಣೆ ಕಳೆದುಕೊಂಡವ ರಿಗೆ ಮೀನುಗಾರಿಕಾ ಇಲಾಖೆ ವತಿ ಯಿಂದ 4 ಲಕ್ಷ ರೂ. ಪರಿಹಾರವನ್ನೂ ಘೋಷಿಸಲಾಗಿದೆ.
ಶೋಧ ಕಾರ್ಯ: ಕೇರಳ ಮತ್ತು ತಮಿಳುನಾಡಿನಲ್ಲಿ ಇನ್ನೂ ಹಲವು ಮೀನುಗಾರರು ನಾಪತ್ತೆಯಾಗಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ನೌಕಾಪಡೆಯ ಯೋಧರು ಹಗಲು ರಾತ್ರಿಯೆನ್ನದೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಐಎನ್‌ಎಸ್ ನಿರೀಕ್ಷಕ್, ಐಎನ್‌ಎಸ್ ಜಮುನಾ ಮತ್ತು ಐಎನ್‌ಎಸ್ ಸಾಗರಧ್ವನಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಶನಿವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ತಮಿಳುನಾಡು ಸಿಎಂ ಪಳನಿಸ್ವಾಮಿ, ರಾಜ್ಯದ ಮೀನು ಗಾರರ ರಕ್ಷಣೆಗಾಗಿ ನೌಕಾಪಡೆ ಮತ್ತು ಕರಾವಳಿ ರಕ್ಷಕ ಪಡೆಯ ನೆರವು ಒದಗಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಸಿಎಂ ಪಳನಿಗೆ ಕರೆ ಮಾಡಿ, ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರೂ ನೆರವಿನ ಭರವಸೆ ನೀಡಿದ್ದಾರೆ.
ಲಂಕೆಯಲ್ಲೂ 13 ಬಲಿ: ಇಲ್ಲಿ 2 ದಿನಗಳಿಂದ ಭಾರೀ ಮಳೆ, ಬಿರುಗಾಳಿಯಿಂದಾಗಿ 13 ಮಂದಿ ಮೃತಪಟ್ಟಿದ್ದಾರೆ. 77 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಚಂಡಮಾರುತ ಪರಿಣಾಮ ಬೀರಿದೆ.
ಇಂಥ ರೌದ್ರನರ್ತನ ಸಿನಿಮಾದಲ್ಲೂ ನೋಡಿಲ್ಲ!
ಕಡಲ ಮಕ್ಕಳೆಂದೇ ಕರೆಯಲ್ಪಡುವ ಮೀನುಗಾರರಿಗೆ ಸಮುದ್ರದ ಪ್ರಕ್ಷುಬ್ಧತೆಯೇನೂ ಹೊಸದಲ್ಲ. ಆದರೆ, ಈ ಬಾರಿ ಅಪ್ಪಳಿಸಿದ ಒಖೀ ಚಂಡಮಾರುತವಂತೂ ಮೀನುಗಾರರಲ್ಲಿ ವಿಚಿತ್ರವಾದ ನಡುಕ ಹುಟ್ಟಿಸಿದೆ. ಹೀಗಂತ ಸಮುದ್ರದ ಮಧ್ಯೆ ಸಿಲುಕಿದ್ದ ಬೆಸ್ತರೇ ಹೇಳಿಕೊಂಡಿದ್ದಾರೆ. ಭಯಂಕರವಾಗಿ ಅಬ್ಬರಿಸುತ್ತಿದ್ದ ಕಡಲ ಮಧ್ಯೆ ಕುಡಿಯಲು ನೀರು, ತಿನ್ನಲು ಆಹಾರವೂ ಇಲ್ಲದೆ, ಹತಾಶ ಕಣ್ಣುಗಳಿಂದ ಅಸಹಾಯಕರಾಗಿ ಸಹಾಯಕ್ಕೆ ಯಾಚಿಸುತ್ತಿದ್ದ ಮೀನುಗಾರರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ಕೆಲವರು ಚೇತರಿಸಿಕೊಂಡಿದ್ದರೆ, ಇನ್ನೂ ಕೆಲವರು ಆ ಶಾಕ್‌ನಿಂದ ಹೊರಬಂದೇ ಇಲ್ಲ. ಏಕೆಂದರೆ, ಇವರು ಸಾವಿಗೇ ಮುಖಾಮುಖೀಯಾದವರು. “ನಾವು ರಕ್ಷಣೆಗಾಗಿ ಇದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕಿರುಚುತ್ತಿದ್ದೆವು. ಆದರೆ, ರಕ್ಷಣೆಗೆಂದು ಬಂದ ದೋಣಿಯು ನಮ್ಮನ್ನು ನೋಡದೇ ಆಚೆ ಹಾದುಹೋದಾಗ, ಎಲ್ಲ ಮುಗಿಯಿತು ಎಂದು ಭಾವಿಸಿದೆವು. ನಾವು ಕಡಲಮಾತೆಯ ಅಂಥ ಘೋರ ಮುಖವನ್ನು ನೋಡಿದ್ದು ಇದೇ ಮೊದಲು. ಇನ್ನೇನು ನಮಗೆ ಸಾವೇ ಗತಿ ಎಂದು ಹತಾಶರಾಗುತ್ತಿರುವಾಗಲೇ ಹಾದುಹೋದ ರಕ್ಷಣಾ ದೋಣಿ ಮತ್ತೆ ನಮ್ಮತ್ತ ಧಾವಿಸಿ, ನಮ್ಮನ್ನು ರಕ್ಷಿಸಿತು’ ಎನ್ನುತ್ತಾರೆ ಪೂಂಥುರಾದ ಮೀನುಗಾರ ಸ್ಟೀಫನ್. ಇನ್ನು ಸಮುದ್ರದ ಇಂಥ ಭಯಾನಕತೆಯನ್ನು ಸಿನಿಮಾದಲ್ಲೂ ನೋಡಿರಲಿಲ್ಲ ಎಂದಿದ್ದಾರೆ ಮತ್ತೂಬ್ಬ ಬೆಸ್ತ.