ಬೆಂಗಳೂರು: ನಗರದ ಓಕಳೀಪುರ ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಎಂಟು ಪಥದ ಮೇಲ್ಸೇತುವೆ ಕಾಮಗಾರಿಯು ಬರುವ ಮಾರ್ಚ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ಸಂಪತ್‌ರಾಜ್ ತಿಳಿಸಿದರು. ಯೋಜನಾ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.
ಒಟ್ಟು 352 ಕೋಟಿ ರೂ. ವೆಚ್ಚದಲ್ಲಿ ಎಂಟು ಪಥದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ರೈಲ್ವೆ ಇಲಾಖೆಯಿಂದ ಸ್ವಾಧೀನಪಡಿಸಿಕೊಂಡಿರುವ ಮೂರೂವರೆ ಎಕರೆ ಜಮೀನಿಗೆ 154 ಕೋಟಿ ರೂ. ಹಾಗೂ ಎಂಟು ಅಂಡರ್‌ಪಾಸ್, ಎರಡು ಪಾದಚಾರಿ ಮಾರ್ಗ ನಿರ್ಮಾಣಕ್ಕೆ 95 ಕೋಟಿ ರೂ. ಒದಗಿಸಲಾಗಿದೆ.
ಮೇಲ್ಸೇತುವೆಯನ್ನು ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಮುಖ್ಯ ಎಂಜಿನಿಯರ್ (ಯೋಜನೆ) ಹಾಗೂ ಯೋಜನೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಹೇಳಿದರು. ಉದ್ದೇಶಿತ ಈ ಯೋಜನೆಯಲ್ಲಿ ಒಳಪಡುವ ಮಲ್ಲೇಶ್ವರ ಮಾರ್ಗದಿಂದ ಸಿಟಿ ರೈಲ್ವೆ ನಿಲ್ದಾಣ ಹಾಗೂ ರಾಜಾಜಿನಗರದಿಂದ ಸಿಟಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡು ಪಥಗಳು ಡಿಸೆಂಬರ್ ಅಂತ್ಯದೊಳಗೆ ಸಾರ್ವಜನಿಕರಿಗೆ ಸೇವೆ ಮುಕ್ತಗೊಳಿಸಲಾಗುವುದು.
ಎಲ್ಲ ಎಂಟು ಪಥದ ಕಾಮಗಾರಿಗಳು ಪೂರ್ಣಗೊಂಡರೆ ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ ಕಡೆಗೆ ತೆರಳುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಗಳಾದ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಗೆ ತೆರಳುವ ವಾಹನಗಳಿಗೂ ಅನುಕೂಲವಾಗಲಿದೆ. ಆದ್ದರಿಂದ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ನಂತರ ಮೈಸೂರು ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೃತಪಟ್ಟ ದಂಪತಿಯ ಕುಟುಂಬದ ಸದಸ್ಯರಿಗೆ ಮೇಯರ್ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಜರಿದ್ದರು. ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಮುಖ್ಯ ಎಂಜಿನಿಯರ್ ಕೆ.ಟಿ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.