Advertisement

ಮಸಾಲೆಭರಿತ ಟ್ವೀಟ್‌ಗಳು ಆರಂಭಕ್ಕಷ್ಟೇ ಓಕೆ!

12:18 PM Nov 15, 2017 | |

ರಾಹುಲ್‌ ಗಾಂಧಿಯವರು ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ತೀಕ್ಷ್ಣ ಪ್ರಹಾರ ನಡೆಸಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರು ಸುದ್ದಿಯಲ್ಲಿದ್ದಾರೆ. ಆದರೆ ಇದು ಹೆಚ್ಚು ದಿನ ಅವರ ಸಹಾಯಕ್ಕೆ ಬರುವುದಿಲ್ಲ. ಮೊದಲು ಅವರು ಮಾಡಬೇಕಿರುವ ಕೆಲಸವೆಂದರೆ, ತಾವು ಹೇಗೆ ಮೋದಿಗಿಂತಲೂ ಭಿನ್ನವಾಗಿ ಯೋಚಿಸುವ ವ್ಯಕ್ತಿ, ಅದರಿಂದ ಭಾರತಕ್ಕೆ ಹೇಗೆ ಒಳಿತಾಗುತ್ತದೆ ಎನ್ನುವುದನ್ನು ಭಾರತೀಯರಿಗೆ ಅರ್ಥಮಾಡಿಸುವುದು. ಮಸಾಲೆಭರಿತ ಟ್ವೀಟ್‌ಗಳು ಆರಂಭದಲ್ಲಿ ಮಜಾ ಕೊಡುತ್ತವೆ. ಆದರೆ ಅದನ್ನು ಸವಿದ ಅನಂತರ ಜನರು ಭೋಜನವನ್ನೇ ಬಯಸುತ್ತಾರೆ.

Advertisement

ಇಂದು ಸಾಮಾಜಿಕ ಮಾಧ್ಯಮಗಳಿಗಿಂತೂ ಪರ್ಯಾಯ “ವಾಸ್ತವ’ವಾಗುವ ಶಕ್ತಿಯಿದೆ. ಭಾರತೀಯ ರಾಜಕಾರಣವನ್ನು ಫಾಲೋ ಮಾಡುವವರ ನಡುವೆ ಇತ್ತೀಚೆಗೆ ಬಹುಚರ್ಚಿತ ವಾಗಿರುವ ವಿಷಯವೆಂದರೆ ರಾಹುಲ್‌ ಗಾಂಧಿ ಕಮ್‌ಬ್ಯಾಕ್‌ ಮಾಡಿದ್ದಾರಾ? ಎನ್ನುವುದು.

ಕೇಂದ್ರ ಸರ್ಕಾರ, ಅದರಲ್ಲೂ ಮುಖ್ಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ರಾಹುಲ್‌ ಗಾಂಧಿಯವರು ಮಾಡುತ್ತಿರುವ ಟ್ವೀಟ್‌ಗಳಲ್ಲಿ, ನೀಡುತ್ತಿರುವ ಹೇಳಿಕೆಗಳಲ್ಲಿ ಅದೇನೋ ಒಂದು ರೀತಿಯ ಹೊಸ ಉತ್ಸಾಹ ಕಾಣಿಸುತ್ತಿದೆ. ರಾಹುಲ್‌ ಗಾಂಧಿಯವರ ಸಾಲುಗಳೀಗ ಹೆಚ್ಚು ಮಸಾಲೆ ಭರಿತವಾಗಿವೆ ಮತ್ತು ಮನರಂಜಿಸುವಂತಿವೆ.(ಬೆಂದ ಬೇಳೆಗೆ ಒಗ್ಗರಣೆ ಸೇರಿಸಿದಂತೆ). ಈ ಕಾರಣಕ್ಕಾಗಿಯೇ ಅವು ಹೆಚ್ಚು ವೈರಲ್‌ ಆಗುತ್ತಿವೆ. ಗೂಗಲ್‌ನಲ್ಲಿ ಹುಡುಕಿದರೆ ನಿಮಗೆ ಇದನ್ನು ಪುಷ್ಟೀಕರಿಸುವ ಅನೇಕ ಉದಾಹರಣೆಗಳು ಸಿಗಬಹುದು. ಕೆಲವೊಂದು ಇಲ್ಲಿವೆ ನೋಡಿ…

1) ಜಿಎಸ್‌ಟಿ ಬಗ್ಗೆ: “”ಕಾಂಗ್ರೆಸ್‌ನ ಜಿಎಸ್‌ಟಿ=ಜೆನುಯಿನ್‌ ಸಿಂಪಲ್‌ ಟ್ಯಾಕ್ಸ್‌. ಮೋದೀಜಿ ಜಿಎಸ್‌ಟಿ= ಗಬ್ಬರ್‌ ಸಿಂಗ್‌ ಟ್ಯಾಕ್ಸ್‌.” 

2) ತಮಿಳು ಸಿನೆಮಾ ಮೆರ್ಸಾಲ್‌ನಿಂದ ಜಿಎಸ್‌ಟಿ ವಿರೋಧಿ ಡೈಲಾಗ್‌ಗಳನ್ನು ಕತ್ತರಿಸಿದ್ದರ ಬಗ್ಗೆ: “”ಮಿಸ್ಟರ್‌ ಮೋದಿ, ತಮಿಳು ಸಂಸ್ಕೃತಿ ಮತ್ತು ಭಾಷೆಯ ಆಳವಾದ ಅಭಿವ್ಯಕ್ತಿ ಯೆಂದರೆ ಸಿನೆಮಾ. ಮೆರ್ಸಾಲ್‌ನಲ್ಲಿ ಮೂಗುತೂರಿಸಿ ತಮಿಳು ಗೌರವವನ್ನು ಡೆಮಾನ್‌-ಟೈಝ್ ಮಾಡಲು ಪ್ರಯತ್ನಿಸಬೇಡಿ.” 

Advertisement

3) ಸುದ್ದಿ ತಾಣವೊಂದು ತನ್ನ ಬಗ್ಗೆ ವರದಿ ಪ್ರಕಟಿಸುವುದರ ಮೇಲೆ ಜಯ್‌ ಶಾ ತಡೆ ತಂದಿರುವುದರ ಬಗ್ಗೆ: 

“”ಶಾ-ಝಾದಾನಿಗೆ “ರಾಜಕೀಯ’ ಕಾನೂನಿನ ಸಹಾಯ. 
ವೈ ದಿಸ್‌ ಕೊಲವರಿ ಡಿ?”
ಚುನಾವಣೆಗೆ ಸಜ್ಜಾಗಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ನೂರಾರು ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವ ರಾಹುಲ್‌ ಗಾಂಧಿಪ್ರಧಾನಮಂತ್ರಿಯವರ ವಿರುದ್ಧ ಭಾರೀ ಉತ್ಸಾಹದಿಂದ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಅಮೆರಿಕದ ಶಿಕ್ಷಣ ಕ್ಯಾಂಪಸ್‌ಗಳಲ್ಲಿ ಮತ್ತು  ಎನ್‌ಆರ್‌ಐ ಕಾರ್ಯಕ್ರಮಗಳಲ್ಲಿ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿತು. ಇದನ್ನು ನಮ್ಮ ಮಾಧ್ಯಮಗಳೂ ಬಹುವಾಗಿ ಪ್ರಸಾರ ಮಾಡಿದವು. 

ಆದರೂ ಈಗ ಮತ್ತೆ ಅವೇ ಪ್ರಶ್ನೆಗಳು ಎದುರಾಗುತ್ತಿವೆ. ಹಾಗಿದ್ದರೆ ಕಾಂಗ್ರೆಸ್‌ ಪಕ್ಷ ಮೈಕೊಡವಿಕೊಂಡು ಎದ್ದು ನಿಂತಿದೆಯೇ? ರಾಹುಲ್‌ ಮುಂದಿನ ಪ್ರಧಾನಿಯಾಗುತ್ತಾರಾ? ಬಿಜೆಪಿ ಮತ್ತು ಮೋದಿ ತಲೆಕೆಡಿಸಿಕೊಳ್ಳಬೇಕೇ? ರಾಹುಲ್‌ ಗಾಂಧಿಯವರ ಧರಿಸಬಹುದಾದಂಥ ಕಿರೀಟಕ್ಕೆ ಪಾಲಿಶ್‌ ಮಾಡುವ ಮುನ್ನ, ನಿಜಕ್ಕೂ ಏನು ನಡೆಯುತ್ತಿದೆ ಮತ್ತು ರಾಹುಲ್‌ ಗಾಂಧಿಯವರಿಗೆ 2019ರಲ್ಲಿ ಮೇಲೇರುವ ಚಾನ್ಸ್‌ ಇದೆಯೇ ಎನ್ನುವುದನ್ನು ವಿಶ್ಲೇಷಿಸೋಣ. 

ಮೂರು ಅಂಶಗಳು ಇಲ್ಲಿ ಕೆಲಸ ಮಾಡುತ್ತಿವೆ. ಮೋದಿ ಸರ್ಕಾರ ಬಂದು ಆಗಲೇ ಬಹಳಷ್ಟು ಸಮಯ ಆಗುತ್ತಾ ಬಂದಿದೆಯಾದ್ದರಿಂದ ಅದರ ನಡೆಗಳನ್ನು ಟೀಕಿಸುವುದಕ್ಕೆ ಮತ್ತು ತೀರ್ಪು ನೀಡುವುದಕ್ಕೆ ಅವಕಾಶವಿದೆ. ಎರಡು ವರ್ಷದ ಹಿಂದೆ ಮೋದಿ ವಿರುದ್ಧದ ಯಾವುದೇ ಟೀಕೆಯನ್ನೂ “ಕೈಲಾಗದವರು ಮೈ ಪರಚಿಕೊಂಡರು’ ಎಂಬಂತೆಯೇ ನೋಡಲಾಗುತ್ತಿತ್ತು. ಆದರೆ ಈಗ ಸಮಯ ಬದಲಾಗಿದೆ. ಮೋದಿ ಸರ್ಕಾರದ ಹನಿಮೂನ್‌ ಅವಧಿ ಮುಗಿದಿದೆ. ಹೀಗಾಗಿ ಕೆಲವು ಟೀಕೆಗಳನ್ನು ಸಮರ್ಥನೀಯವೆಂದು ನೋಡಲಾಗುತ್ತಿದೆ. ತತ್ಪರಿಣಾಮವಾಗಿ ರಾಹುಲ್‌ ಗಾಂಧಿ ಮಾತುಗಳಿಗೆ ಈಗ ತುಸು ಬಲ ಸಿಗತೊಡಗಿದೆ. ನೋಟ್‌ಬಂದಿಯ “ಪ್ರಶ್ನಾರ್ಹ’ ಲಾಭಗಳು ಅಥವಾ ಜಿಎಸ್‌ಟಿ ಸೃಷ್ಟಿಸಿದ ಬಿಕ್ಕಟ್ಟುಗಳು ಇದಕ್ಕೊಂದು ಉದಾಹರಣೆ. ಇವುಗಳತ್ತ ಅನೇಕ ರಾಜಕೀಯೇತರ ವಿಶ್ಲೇಷಕರು ಬೆರಳು ಮಾಡಿ ತೋರಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರಾಹುಲ್‌ ಗಾಂಧಿ ಹೆಚ್ಚಾಗಿ ಜಿಎಸ್‌ಟಿ ಮತ್ತು ನೋಟ್‌ಬಂದಿಯ ಬಗ್ಗೆಯೇ ಮಾತನಾಡುತ್ತಿರುವುದು. ಈ ವಿಷಯಗಳ ಬಗ್ಗೆ ಮಾತನಾಡಿದರೆ ಹೆಚ್ಚು ಜನ ಕೇಳಿಸಿಕೊಳ್ಳುತ್ತಾರೆ ಎನ್ನುವುದು ಅವರ ಭಾವನೆ. 

ಆದಾಗ್ಯೂ, ಒಂದು ವಿಷಯವನ್ನು ನಾವು ಗಮನಿಸಬೇಕು. ಜಿಎಸ್‌ಟಿ ಮತ್ತು ನೋಟ್‌ಬಂದಿ ಅನುಷ್ಠಾನಕ್ಕೆ ಬಂದ ರೀತಿಯ ಬಗ್ಗೆ ಅನೇಕ ಭಾರತೀಯರಿಗೆ ಅಸಮಾಧಾನವಿದೆಯಾದರೂ, ಈ ಯೋಜನೆಗಳ ಹಿಂದೆ ಒಳ್ಳೆಯ ಉದ್ದೇಶವಿದೆ ಎನ್ನುವುದನ್ನೂ ಬಹುತೇಕರು ಗುರುತಿಸುತ್ತಾರೆ. ಇನ್ನು ಸರ್ಕಾರ ಕಳೆದ ಶುಕ್ರವಾರ ಜಿಎಸ್‌ಟಿಯಲ್ಲಿ ಅನೇಕ ಬದಲಾವಣೆಗಳನ್ನು ಘೋಷಿಸಿದೆ. ಹೀಗಾಗಿ ಅದರ ವಿರುದ್ಧದ ಕೆಲವು ಅಸಮಾಧಾನಗಳು ಕಡಿಮೆಯಾಗಿರಬಹುದು. ಹಾಗಿದ್ದರೆ ಈಗ ರಾಹುಲ್‌ ಗಾಂಧಿ ಯಾವ ಹೊಸ ಸಂಗತಿಯತ್ತ ಬೆರಳು ಮಾಡಿ ತೋರಿಸಲಿದ್ದಾರೆ? 

ಇನ್ನು ರಾಹುಲ್‌ ರಂಗಿನಲ್ಲಿ ಮತ್ತೂಂದು ಅಂಶ ಕೆಲಸ ಮಾಡುತ್ತಿದೆ. ಅದೇ, ಭಾರತೀಯ ಜನರ “ಕ್ಷಮಿಸುವ’ ಗುಣ. 2014ರಲ್ಲಿ ಮತದಾರರು ಹಗರಣಮಯವಾಗಿದ್ದ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕಿತ್ತೆಸೆದರು. ಆದರೆ ಭಾರತೀಯರು ಹಳೆಯ ಪಾಪಗಳ ಕುರಿತ ತಮ್ಮ ನೆನಪಿನ ಶಕ್ತಿಯನ್ನು ಖುಷಿಖುಷಿಯಾಗಿ ಅಳಿಸಿ ಹಾಕುತ್ತಾರೆ. ಈ ಕಾರಣಕ್ಕಾಗಿಯೇ ಈಗ ಕಾಂಗ್ರೆಸ್‌ ವಿರುದ್ಧ ಜನರಿಗೆ ಆಗ ಇದ್ದಷ್ಟು ಸಿಟ್ಟು ಇಲ್ಲ. ಆ ಪಕ್ಷದ ಮೇಲಿನ ಸಿಟ್ಟು ತಣ್ಣಗಾಗಿದೆ. ಇದರ ಲಾಭ ರಾಹುಲ್‌ಗೆ ಸಿಗುತ್ತಿದೆ. ಆಗೆಲ್ಲ ರಾಹುಲ್‌ ಮಾತನಾಡಿದರೆ ಜನರಿಗೆ ಕೂಡಲೇ ಕಾಮನ್‌ವೆಲ್ತ್‌ ಮತ್ತು 2 ಜಿ ಹಗರಣ ತಲೆಗೆ ಬರುತ್ತಿತ್ತು. ಈಗ ಜನರಲ್ಲಿ ಆ ಹಗರಣಗಳ ಕುರಿತ ನೆನಪು ಮಾಸುತ್ತಿದೆ. ಅವರು ರಾಹುಲ್‌ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ. 

ಇನ್ನು ರಾಹುಲ್‌ರಿಗೆ ಹೆಚ್ಚು ಒತ್ತು ಸಿಗುವುದಕ್ಕೆ ಮತ್ತೂಂದು ಕಾರಣವೆಂದರೆ, ಮೋದಿ ವಿರೋಧಿ-ಬಿಜೆಪಿ ವಿರೋಧಿ ವಲಯಗಳಿಗೆ ಬೇರೆ ಯಾವ ಪರ್ಯಾಯ ನಾಯಕರೂ ಕಾಣಿಸದೇ ಇರುವುದು. ಅದಾಗಲೇ ನಿತೀಶ್‌ ಕುಮಾರ್‌ ಬಿಜೆಪಿಯ ಕೈಹಿಡಿದುಕೊಂಡಿದ್ದಾರೆ. ಅತ್ತ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯಾದವರು ತಮ್ಮದೇ ಸಮಸ್ಯೆಗಳಲ್ಲಿ ಮುಳುಗಿಹೋಗಿದ್ದಾರೆ. ಮಮತಾ ಬ್ಯಾನರ್ಜಿಯವರಂತೂ ಬಂಗಾಳವನ್ನು ದಾಟಿ ಮುಂದೆ ಬರುವಷ್ಟು ಬೆಳೆದಿಲ್ಲ. ಇನ್ನು ಮಿಸ್ಟರ್‌ ಕೇಜ್ರಿವಾಲ್‌ ಕೊನೆಗೂ ತಮ್ಮ ಗಮನವನ್ನೆಲ್ಲ ದೆಹಲಿಯತ್ತ ಕೇಂದ್ರೀಕರಿಸಲು ನಿರ್ಧರಿಸಿ, ಮೋದಿ ವಿರುದ್ಧದ ಟ್ವೀಟ್‌ ಸಮರವನ್ನು ನಿಲ್ಲಿಸಿಬಿಟ್ಟಿದ್ದಾರೆ. 

ಹಾಗಿದ್ದರೆ ಮೋದಿ ಎದುರು ನಿಲ್ಲುವವರು ಯಾರು? ಬಿಜೆಪಿ ವಿರೋಧಿ ಮತ್ತು ಮೋದಿ ವಿರೋಧಿಗಳಿಗೆ ಈಗ ಆಶಾಕಿರಣ ವಾಗಿ ಕಾಣಿಸುತ್ತಿರುವುದು ರಾಹುಲ್‌ ಗಾಂಧಿ. ಬಿಜೆಪಿ ವಿರೋಧಿಗಳಲ್ಲದವರೂ ಕೂಡ ಭಾರತದಲ್ಲಿ ಒಂದು ಬಲಿಷ್ಠ ವಿಪಕ್ಷದ ಅಗತ್ಯವನ್ನು ಮನಗಾಣುತ್ತಿದ್ದಾರೆ. ರಾಹುಲ್‌ ಗಾಂಧಿ ಬೆಳೆದರೆ ಕೇಂದ್ರ ಸರ್ಕಾರ ಹೆಚ್ಚು ಉತ್ತರದಾಯಿಯಾಗುತ್ತದೆ ಎಂದಾದರೆ, ಆ ಬೆಳವಣಿಗೆ ಒಳ್ಳೆಯದು ಎನ್ನುತ್ತಿದ್ದಾರವರು. ಶಕ್ತಿಯೆಲ್ಲ ಒಂದೇ ಕಡೆ ಕೇಂದ್ರೀಕೃತವಾಗಿರುವುದರಿಂದ ಈಗಾಗಲೇ ನಿರಂಕುಶ ಆಡಳಿತದ ಭಯ ಕಾಡಲಾರಂಭಿಸಿದೆ. ರಾಹುಲ್‌ ಗಾಂಧಿಯ ಉದಯ ಇದನ್ನೆಲ್ಲ ತಡೆಯಲು ಸಹಕರಿಸಬಲ್ಲದು ಎನ್ನುವುದಾದರೆ ಅದೂ ಆಗಲಿ ಬಿಡಿ. 

ಈ ವರ್ಷ ರಾಹುಲ್‌ ಗಾಂಧಿಯವರ ಪ್ರೊಫೈಲ್‌ಗೆ ಹೆಚ್ಚು ಬಲ ಬಂದಿರುವುದಕ್ಕೆ ಈ ಮೂರು ಅಂಶಗಳು ಕಾರಣವೇ ಹೊರತು, ಇದಕ್ಕೆ ಖುದ್ದು ರಾಹುಲ್‌ ಗಾಂಧಿಯೇನೂ ಕಾರಣವಲ್ಲ. ರಾಹುಲ್‌ರ ದಾಳಿಗಳೀಗ ತೀಕ್ಷ್ಣವಾಗುತ್ತಿವೆ. ಬಹುಶಃ ಪರಿಸ್ಥಿತಿ ಅವರನ್ನು ಪ್ರೇರೇಪಿಸುತ್ತಿರಬಹುದು. ಆದರೆ ಇದೆಲ್ಲದರ ಹೊರತಾಗಿಯೂ ಮತ್ತದೇ ಪ್ರಶ್ನೆ ಎದುರಾಗುತ್ತಿದೆ: 2019ರಲ್ಲಿ ಮೇಲುಗೈ ಸಾಧಿಸಲು ಇಷ್ಟು ಸಾಕೇ? ಸದ್ಯಕ್ಕಂತೂ “ಇಲ್ಲ’ ಎಂದೇ ಹೇಳಬೇಕು,. ಮೊದಲಿನಂತೆಯೇ ಈಗಲೂ ರಾಹುಲ್‌ಗೆ ಅನೇಕ ಅಡ್ಡಿಗಳು ಇವೆ. ನರೇಂದ್ರ ಮೋದಿಯವರನ್ನು ಈಗಲೂ ಒಳ್ಳೆಯ ಕೆಲಸ ಮಾಡುವ ವ್ಯಕ್ತಿ ಮತ್ತು ಜನರಿಗೆ ಸಮೀಪವಿರುವ ಆಡಳಿತಗಾರ ಎಂದೇ ನೋಡಲಾಗುತ್ತದೆ. ಆದರೆ ಇನ್ನೊಂದೆಡೆ ರಾಹುಲ್‌ ಗಾಂಧಿಯನ್ನು  “ಕುಟುಂಬ ರಾಜಕಾರಣದ’ ಚಿಹ್ನೆಯೆಂದೇ ಗುರುತಿಸಲಾಗುತ್ತದೆ. ರಾಹುಲ್‌ಗೆ ಬಂದಿರುವ ಈ ಹೊಸ ಬಲ ಇನ್ನೆಷ್ಟು ದಿನ ಇರಲಿದೆಯೋ ಯಾರಿಗೂ ತಿಳಿಯದು. ತಮ್ಮ ಪಕ್ಷಕ್ಕೆ ಬೃಹತ್‌ ಗೆಲುವು ತಂದುಕೊಡುವ ವಿಷಯದಲ್ಲಾಗಲಿ ಅಥವಾ ಬಲಿಷ್ಠ ಆಡಳಿತದ ವಿಷಯದಲ್ಲಾಗಲಿ, ಈಗಲೂ ಅವರು ತಮ್ಮ ಸಾಮರ್ಥಯವನ್ನು ರುಜುವಾತು ಮಾಡಿಕೊಳ್ಳಲೇಬೇಕಿದೆ.  

ರಾಹುಲ್‌ ಈಗ ಮೋದಿಯವರ ಮೇಲೆ ತೀಕ್ಷ್ಣ ಪ್ರಹಾರ ನಡೆಸಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರು ಸುದ್ದಿಯಾಗುತ್ತಿದ್ದಾರೆ. ಆದರೆ ಇದು ಹೆಚ್ಚು ದಿನ ಅವರ ಸಹಾಯಕ್ಕೆ ಬರುವುದಿಲ್ಲ. ತಾವು ಹೇಗೆ ಮೋದಿಗಿಂತಲೂ ಭಿನ್ನವಾಗಿ ಯೋಚಿಸುವವರು, ಅದರಿಂದ ಭಾರತಕ್ಕೆ ಹೇಗೆ ಒಳಿತಾಗುತ್ತದೆ ಎನ್ನುವುದನ್ನು ಅವರು ಭಾರತೀಯರಿಗೆ ಅರ್ಥಮಾಡಿಸಬೇಕಿದೆ. ಮಸಾಲೆಭರಿತ ಟ್ವೀಟ್‌ಗಳು ಆರಂಭದಲ್ಲಿ ಮಜಾ ಕೊಡುತ್ತವೆ. ಆದರೆ ಅದನ್ನು ಸವಿದ ನಂತರ ಜನರು ಫ‌ುಲ್‌ ಭೋಜನವನ್ನೇ ಬಯಸುತ್ತಾರೆ.

ಚೇತನ್‌ ಭಗತ್‌

Advertisement

Udayavani is now on Telegram. Click here to join our channel and stay updated with the latest news.

Next