ಪಡುಬಿದ್ರಿ : ಕಣ್ಣಂಗಾರ್ ಬೈಪಾಸ್ ಬಳಿಯ ನಡ್ಸಾಲು ಗ್ರಾಮದ ಸುಶೀಲಾ ಗಾಣಿಗ ಮಾಲಕತ್ವದ ಗಾಣಿಗರ ಮಿಲ್ ನಲ್ಲಿ ಇಂದು ಮುಂಜಾವ ಅಗ್ನಿ ಅವಘಡವು ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಎನ್ನಲಾದ ಈ ಅಗ್ನಿ ಅವಘಡದಲ್ಲಿ ಸುಮಾರು 5 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನ ಕಾಯಿ ಬೆಂಕಿಗಾಹುತಿಯಾಗಿದೆ.
ಉಡುಪಿಯ ಅಗ್ನಿ ಶಾಮಕ ದಳದ ತುಕುಡಿಯು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಲಾಗಿದೆ.
ಕೊಬ್ಬರಿ ಒಣಗಿಸಲು ಮಾಮೂಲಿಯಂತೆ ನಿನ್ನೆ ರಾತ್ರಿ ಕೂಡಾ ಅಣಿಗೊಳಿಸಿ ತೆರಳಿದ್ದರು. ಮಾಲಕರಿಗೆ ಮುಂಜಾವ ಸ್ಥಳೀಯರು ಈ ಅವಘಡದ ಸುದ್ದಿ ಮುಟ್ಟಿಸಿದ್ದಾರೆ. ಗೊಡೌನ್ ನಲ್ಲಿ ತೆಂಗಿನ ಕಾಯಿ ದಾಸ್ತಾನು ತುಂಬಿತ್ತು. ಇದೂ ಸಹ ಒಣ ತೆಂಗಿನಕಾಯಿಗಳಾದ್ದರಿಂದ ಬೆಂಕಿ ಹೊತ್ತಿ ಉರಿಯಲು ಸಹಕಾರಿಯಾಗಿದೆ. ಗೊಡೌನ್ ಗೋಡೆಯೂ ಬಿರುಕು ಬಿಟ್ಟಿದ್ದು ಅಲ್ಲಿಂದ ತೆಂಗಿನ ಕಾಯಿಗಳ ತೆರವು ಕಾರ್ಯವನ್ನೂ ನಡೆಸಲಾಗಿದೆ.
ಇದೇ ವೇಳೆ ಪಡುಬಿದ್ರಿಯ ಪೊಲೀಸ್ ಠಾಣೆ ಸಮೀಪದ ಅಂಗಡಿಯೊಂದರಲ್ಲೂ ಬೆಂಕಿ ಹತ್ತಿಕೊಂಡಿದೆ. ಅದನ್ನೂ ಉಡುಪಿಯ ಅಗ್ನಿಶಾಮಕ ದಳದ ಸಿಬಂದಿ ಬಂದು ನಂದಿಸಿದ್ದಾರೆ.
ಇದನ್ನೂ ಓದಿ : ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು