Advertisement

ಬಲ್ಮಠ ರಸ್ತೆಯಲ್ಲಿ ಎಣ್ಣೆ,  ದ್ವಿಚಕ್ರ ವಾಹನಗಳು ಸ್ಕಿಡ್‌, ಪ್ರತಿಭಟನೆ

11:52 AM Sep 19, 2017 | |

ಬಲ್ಮಠ :  ಬಲ್ಮಠ ಬಸ್‌ ತಂಗುದಾಣ ಮತ್ತು ಜ್ಯೋತಿ ಜಂಕ್ಷನ್‌ ನಡುವಿನ  ಕಾಂಕ್ರೀಟ್‌ ರಸ್ತೆಯಲ್ಲಿ  ಹರಿದ ಎಣ್ಣೆಯಿಂದಾಗಿ ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್‌ ಚಲಾಯಿಸಿಕೊಂಡು ಬಂದ ಕೆಲವರು ಏಕಾ ಏಕಿ ಸ್ಕಿಡ್‌ ಆಗಿ ಬಿದ್ದಿದ್ದು,  ಆಕ್ರೋಶಿತರಾದ ಕೆಲವರು ಸ್ಥಳದಲ್ಲೇ ಕುಳಿತು ಪ್ರತಿಭಟಿಸಿದ ಪರಿಣಾಮ ಕೆಲ ಹೊತ್ತು ರಸ್ತೆ ತಡೆ  ಉಂಟಾಗಿ ಸಂಚಾರ ವ್ಯತ್ಯಯವಾಯಿತು.

Advertisement

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ  ಮೇಯರ್‌ ಕವಿತಾ ಸನಿಲ್‌ ಅವರೂ ಪ್ರತಿಭಟನಕಾರರೊಂದಿಗೆ  ಮಾತುಕತೆ ನಡೆಸಿದರು.

ರಸ್ತೆಯಲ್ಲಿ ಹರಿದು ಬಂದದ್ದು ಬಲ್ಮಠ ರಸ್ತೆ ಪರಿಸರದ ಹೊಟೇಲ್‌ಗ‌ಳಲ್ಲಿ ತಿಂಡಿ ಮತ್ತು ಇತರ ಪದಾರ್ಥಗಳನ್ನು ಕಾಯಿಸಿ ಉಳಿಕೆಯಾದ ಎಣ್ಣೆಯಾಗಿತ್ತು.  ಹೊಟೇಲ್ ಅದನ್ನು ನೇರವಾಗಿ ಒಳ ಚರಂಡಿಗೆ ಚೆಲ್ಲಿದ್ದು, ಅದು ನೀರಿನ ಮೇಲೆ ತೇಲಿ ಕೊಂಡು ರಸ್ತೆಯ ಮೇಲೆ ಬಿದ್ದಿರುವುದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತು. 

ಮಳೆ ಬಂದಿರುವ ಕಾರಣ  ಒಳ ಚರಂಡಿಯಲ್ಲಿ ನೀರು ತುಂಬಿದ್ದು, ಹೊಟೇಲ್‌ನವರು ಚರಂಡಿಗೆ ಬಿಟ್ಟ  ಎಣ್ಣೆ ಈ ನೀರಿನ ಮೇಲ್ಭಾಗದಲ್ಲಿ ತೇಲಿಕೊಂಡು  ರಸ್ತೆಗೆ ತಲುಪಿದೆ. ಎಣ್ಣೆ  ಪಸರಿಸಿದ ಕಾಂಕ್ರೀಟ್‌ ರಸ್ತೆಯ ಮೇಲೆ ವಾಹನಗಳು ಅದರಲ್ಲೂ  ಮುಖ್ಯವಾಗಿ ದ್ವಿಚಕ್ರ ವಾಹನಗಳು ಚಲಿಸಿದಾಗ ಟೈರ್‌ಗಳು ಸ್ಕಿಡ್‌ ಆಗಿ ಸವಾರರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. 

ಚರಂಡಿಯಿಂದ ಆಯಿಲ್‌ ಹರಿದು ಬರುತ್ತಿದ್ದು, ಇದಕ್ಕೆ ಕಾರಣವೇನೆಂಬುದು ಗೊತ್ತಾಗಬೇಕು ಹಾಗೂ ಅದನ್ನು ತಡೆಯಲು ಕ್ರಮ ಆಗಬೇಕು ಎಂದು ಪಟ್ಟು ಹಿಡಿದು ಈ ಬೈಕ್‌ ಸವಾರರು ಅಲ್ಲಿಯೇ ಪ್ರತಿಭಟಿಸಿದರು. ಅವರಿಗೆ ಸ್ಥಳೀಯರು ಸಾಥ್‌ ನೀಡಿದರು. ಈ ಪ್ರತಿಭಟನೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಬಲ್ಮಠ ಪ್ರದೇಶದಲ್ಲಿ  ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಆಗಮಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಟ್ರಾಫಿಕ್‌ ಪೂರ್ವ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಗವಾರ್‌ ಮತ್ತು ಸಿಬಂದಿ ಹೊಗೆಯನ್ನು ತರಿಸಿ ತಾವೇ ಸ್ವತಃ ಎಣ್ಣೆ ಬಿದ್ದ ರಸ್ತೆಯ ಭಾಗಕ್ಕೆ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಳಿಕ ಅಗ್ನಿ ಶಾಮಕ ದಳದವರು ಆಗಮಿಸಿ ಮರಳು ಮಿಶ್ರಿತ ನೀರನ್ನು ಸಿಂಪಡಿಸಿ ರಸ್ತೆಯನ್ನು ಸ್ವತ್ಛಗೊಳಿಸಿದರು.

Advertisement

ವಿಷಯ ತಿಳಿದು ಮೇಯರ್‌ ಕವಿತಾ ಸನಿಲ್‌ ಅವರು ಸಚೇತಕ ಶಶಿಧರ ಹೆಗ್ಡೆ, ಅಧಿಕಾರಿಗಳಾದ ಮರಳಹಳ್ಳಿ, ವಿಶಾಲ್‌ನಾಥ್‌, ರಘುಪಾಲ್‌ ಅವರ ಜತೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. 

ಹೊಟೇಲ್‌ಗ‌ಳಿಗೆ ನೋಟಿಸ್‌
ಕಾಯಿಸಿದ ಎಣ್ಣೆಯನ್ನು ಚರಂಡಿಗೆ ಬಿಟ್ಟು ಅವಾಂತರಕ್ಕೆ ಕಾರಣವಾದ ಬಲ್ಮಠ ರಸ್ತೆ ಪರಿಸರದ ಹೊಟೇಲ್‌ಗ‌ಳಿಗೆ ನೋಟಿಸ್‌ ನೀಡಲಾಗುವುದು ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದರು.

ಚರಂಡಿಗೆ ಎಣ್ಣೆ ಬಿಟ್ಟರೆ ಕ್ರಮ 
ನಗರದ ಯಾವುದೇ ಹೊಟೇಲ್‌ನವರು ಇನ್ನು ಮುಂದೆ ಕಾಯಿಸಿದ ಎಣ್ಣೆ ಅಥವಾ ಜಿಡ್ಡು ಪದಾರ್ಥವನ್ನು ಚರಂಡಿ/ ಒಳ ಚರಂಡಿಗೆ ಬಿಡ ಬಾರದು. ಎಣ್ಣೆಯನ್ನು ಚರಂಡಿಗೆ ಬಿಡುವುದರಿಂದ ಅದು ನೀರಿನ ಮೇಲೆ ತೇಲಿ ರಸ್ತೆ ಮೇಲೆ ಹರಿದು ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಒಂದೊಮ್ಮೆ  ಯಾರಾದರೂ ಚರಂಡಿಗೆ ಎಣ್ಣೆ ಬಿಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಕವಿತಾ ಸನಿಲ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next