Advertisement
ಕರಾವಳಿಯಲ್ಲಿ ಹೊಳೆ, ಸಮುದ್ರದ ಬದಿಯ ಹೊಯ್ಗೆಯಲ್ಲಿ ಆರೈಕೆ ಇಲ್ಲದೆ ಬೆಳೆಯುವುದು ಹೊನ್ನೆಮರದ ಕಾಯಿ. ಇದರಿಂದ ತಯಾರಾಗುವ ಎಣ್ಣೆ ಬೆಲ್ಜಿಯಂ ದೇಶದ ಜನರ ಚರ್ಮ ಸೌಂದರ್ಯಕ್ಕೆ ಬಳಕೆಯಾಗುತ್ತಿದೆ.
ಚರ್ಮದ ಅಂಗಾಂಶದ (ಟಿಶ್ಯು) ಚಿಗುರುವಿಕೆ, ಚರ್ಮದ ನೆರಿಗೆ, ಬಿಸಿಲಿನಿಂದ ಚರ್ಮ ಸುಟ್ಟಾಗ, ಸೊಳ್ಳೆ ಮತ್ತು ಕ್ರಿಮಿಗಳು ಕಚ್ಚಿದಾಗ, ವಯಸ್ಸಾಗುತ್ತಿದ್ದಂತೆ ಜೊತೆಯಾಗುವ ನೆರಿಗೆಗಳು, ಮೊಡವೆ ಮೊದಲಾದವುಗಳಿಗೆ ಈ ಎಣ್ಣೆ ಹಚ್ಚಿದರೆ ಗುಣವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯಿಂದ ಖಚಿತಪಡಿಸಿದ ಮೇಲೆ ಹೊನ್ನೆ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ.
Related Articles
Advertisement
ಒಂದಾನೊಂದು ಕಾಲದಲ್ಲಿ ಗಾಣದಿಂದ ಹೊನ್ನೆ ಎಣ್ಣೆ ತೆಗೆಯುತ್ತಿದ್ದರು. ಇದು ರಥ ಮೊದಲಾದ ಕಟ್ಟಿಗೆಯ ನಿರ್ಮಾಣಕ್ಕೆ ಗೆದ್ದಲು ಹಿಡಿಯದಂತೆ ಹಚ್ಚಲು, ದೀಪ ಉರಿಸಲು, ದನಗಳ ಮೈಗೆ ಹಚ್ಚಲು, ಬಡವರ ನೆತ್ತಿ ತಂಪಾಗಿಸಲು ಬಳಕೆಯಾಗುತ್ತಿತ್ತು. ಹೊನ್ನೆಕಾಯಿ ಸುಟ್ಟಾಗ ಸಿಗುತ್ತಿದ್ದ ಭಸ್ಮದಿಂದ ಹುಣ್ಣುಗಳನ್ನು ಗುಣಪಡಿಸಲಾಗುತ್ತಿತ್ತು. ಇದರ ಹೊರತು ಯಾರಿಗೂ ಬೇಡವಾಗಿದ್ದ, ಬಳಸದೆ ತಿರಸ್ಕೃತವಾಗುತ್ತಿದ್ದ ಹೊನ್ನೆಣ್ಣೆಯನ್ನು ಬಡ ಗಾಣಿಗರು ಕೊಡದಲ್ಲಿ ತಂದು ಸಂತೆಯಲ್ಲಿ ಮಾರುತ್ತಿದ್ದರು.
ಈಗ, ಕಾಲ ಬದಲಾಗಿದೆ. ಶೋಧಿಸಿ ಶುದ್ಧಗೊಳಿಸಿದ ಹೊನ್ನೆಣ್ಣೆ (ತಮನು ಆಯಿಲ್) ಈಗ ಹಡಗನ್ನೇರಿ ವಿದೇಶಕ್ಕೆ ಹೋಗಿ ಬಿಳಿಜನ ಹಲವು ವಿಧದಲ್ಲಿ ಬಳಸುತ್ತಿದ್ದಾರೆ.
ಈ ಎಣ್ಣೆ ಕಿಲೋಗೆ 100-150 ರೂ. ವರೆಗೆ ಮಾರಾಟವಾಗುತ್ತದೆ. ಈಗ ಕಲಬೆರಕೆ ಎಣ್ಣೆ ಪೇಟೆಯಲ್ಲಿ ಚಲಾವಣೆಯಲ್ಲಿದೆ. ನಾವು ಹೊನ್ನೆಕಾಯಿ ಖರೀದಿಸಿ, ಎಣ್ಣೆಮಾಡಿ, ಶುದ್ಧಗೊಳಿಸಿದರೆ ಕಿಲೋಗೆ 500 ರೂ.ಗೆ ಇಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಶುದ್ಧತೆಯ ಗ್ಯಾರಂಟಿಯೊಂದಿಗೆ ವಿದೇಶದಲ್ಲಿ ಈ ಎಣ್ಣೆಗೆ ಅಪಾರ ಬೇಡಿಕೆ ಇದೆ ಎನ್ನುತ್ತಾರೆ ತಿಮ್ಮಣ್ಣ ಹೆಗಡೆ.
ಕರಾವಳಿಯಲ್ಲಿ ಖಾಲಿ ಇರುವ ಜಾಗದಲ್ಲಿ ಹೊನ್ನೆಗಿಡವನ್ನು ನೆಟ್ಟು ಬೆಳೆಸಬಹುದು. ನೀರು, ಗೊಬ್ಬರ ಹಾಕಬೇಕಿಲ್ಲ. ಮತ್ತೂಂದು ಅತಿ ಮುಖ್ಯ ವಿಚಾರವೆಂದರೆ ಈ ಗಿಡಕ್ಕೆ ರೋಗಬರುವುದಿಲ್ಲ. ಗೇರುಗಿಡಗಳಿಗಿಂತ ಹೆಚ್ಚಿನ ಆದಾಯವನ್ನೂ ಗಳಿಸಬಹುದು ಎನ್ನತ್ತಾರೆ ತಿಮ್ಮಣ್ಣ ಹೆಗಡೆ.
ಜಿ.ಯು. ಭಟ್