Advertisement
ಅಷ್ಟೇ ಅಲ್ಲ, “ಇದೇ ಕೊನೆಯ ರಾತ್ರಿ, ಯೋಚನೆ ಮಾಡಿ …’ ಎಂದು ಡೆಡ್‌ಲೈನ್ ಸಹ ಕೊಡುತ್ತಾಳೆ. ಅಲ್ಲಿಗೆ ಅವರಿಗಿರುವುದು ಎರಡೇ ಆಯ್ಕೆಗಳು. ಒಂದೊ ವೇಶ್ಯಾವಟಿಕೆಯ ಜಾಲದಲ್ಲೇ ಇದ್ದು ಕೊಳೆಯಬೇಕು, ಇಲ್ಲ ಅಲ್ಲಿಂದ ಸಿಡಿದೇಳಬೇಕು. ಇವೆರೆಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅವರೆಲ್ಲಾ ಎನ್ನುವುದೇ ಚಿತ್ರದ ಕಥೆ. “ಉರ್ವಿ’ ಒಂದು ವೇಶ್ಯಾವಟಿಕೆಯ ಜಾಲದ ಕುರಿತಾದ ಕಥೆ. ಈ ಜಾಲದಲ್ಲಿ ಅಮಾಯಕ ಮತ್ತು ಅಸಹಾಯಕ ಹೆಣ್ಮಕ್ಕಳು ಹೇಗೆ ಸಿಲುಕುತ್ತಾರೆ ಮತ್ತು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ ಎಂಬುದನ್ನು ಹೇಳುವ ಕಥೆ.
Related Articles
Advertisement
ಮೊದಲೇ ಹೇಳಿದಂತೆ, “ಉರ್ವಿ’ ಚಿತ್ರದ ಶಕ್ತಿ ಇರುವುದು ಆ ಕಲ್ಪನೆಯಲ್ಲಿ ಮತ್ತು ಅದು ಬರುವುದು ಚಿತ್ರದ ಕೊನೆಯಲ್ಲಿ. ಆದರೆ, ಅದಕ್ಕೂ ಮುನ್ನ ಮೂವರು ಅಸಹಾಯಕ ಹೆಣ್ಮಕ್ಕಳು ವೇಶ್ಯಾವಾಟಿಕೆಗೆ ಬರುವ ಕಥೆ ಹೇಳುತ್ತದೆ. ಬಹುಶಃ ಈ ಸಂದರ್ಭದಲ್ಲಿ ಪ್ರದೀಪ್ ವರ್ಮ, ಇನ್ನಷ್ಟು ಗಟ್ಟಿ ಚಿತ್ರಕಥೆ ಮಾಡಿಕೊಳ್ಳಬೇಕಿತ್ತು ಎಂದರೆ ತಪ್ಪಿಲ್ಲ. ಅದರಲ್ಲೂ ಮೊದಲಾರ್ಧ, ಅಲ್ಲೊಂಚೂರು, ಇಲ್ಲೊಂಚೂರು ಎಂದು ಕಥೆ ಹರಿದು ಹೋಗುತ್ತದೆ. ಇಂಟರ್‌ವೆಲ್ ನಂತರ ಚಿತ್ರದ ಕಥೆಗೆ ಒಂದು ರೂಪ ಬರುತ್ತದೆ. ಅಷ್ಟರಲ್ಲಿ ಮೂವರು ಹೆಣ್ಮಕ್ಕಳು ಒಂದು ಕಡೆ ಸೇರಾಗಿರುತ್ತದೆ.
ಯಾರ್ಯಾರು ಏನೇನು ಎಂಬುದು ಪ್ರೇಕ್ಷಕರಿಗೆ ಸ್ಪಷ್ಟವಾಗಿರುತ್ತದೆ. ಅಲ್ಲಿಂದ ಚಿತ್ರಕ್ಕೊಂದು ವೇಗ ಮತ್ತು ರೂಪ ಬರುತ್ತದೆ. ಅದನ್ನು ಕೊನೆಯವರೆಗೂ ಕ್ಯಾರಿ ಮಾಡಿದ್ದಾರೆ ಪ್ರದೀಪ್ ವರ್ಮ. ಇಂಥ ಚಿತ್ರಗಳಲ್ಲಿ ಸಾಕಷ್ಟು ಹಿಂಸಾಚಾರ ಇರುತ್ತದೆ. ಆದರೆ, ಇಲ್ಲಿ ಹಿಂಸಾಚಾರ ಎನ್ನುವುದಕ್ಕಿಂತ ಬೌದ್ಧಿಕವಾದ ಹಿಂಸಾಚಾರವಿದೆ. ಅದರಲ್ಲೂ ಕೊನೆಯ ಕೆಲವು ನಿಮಿಷಗಳು ಮಾತ್ರ, ಪ್ರತಿಯೊಬ್ಬ ಪುರುಷನನ್ನೂ ಯೋಚನೆಗೆ ಹಚ್ಚುವಂತಾಗುತ್ತದೆ. ತಪ್ಪು ಮಾಡಿರಲಿ, ಮಾಡದಿರಲಿ ಒಟ್ಟಿನಲ್ಲಿ ಎಲ್ಲರನ್ನೂ ಬಡಿದಬ್ಬಿಸಿದಂತಾಗುತ್ತದೆ. ಆ ಮಟ್ಟಿಗೆ ಪ್ರದೀಪ್ ವರ್ಮ ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ.
“ಉರ್ವಿ’ಯ ಇನ್ನೊಂದು ಪ್ಲಸ್ ಪಾಯಿಂಟು ಎಂದರೆ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಆನಂದ್ ಸುಂದರೇಶ್ ಅವರ ಛಾಯಾಗ್ರಹಣ ಮತ್ತು ಮನೋಜ್ ಜಾರ್ಜ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮೂಡ್‌ಗೆ ತಕ್ಕ ಹಾಗಿದೆ. ಕೆಲವು ಲೆಂಥಿ ಶಾಟ್‌ಗಳನ್ನು ರೂಪಿಸಿದ್ದಾರೆ ಪ್ರದೀಪ್. ಅದರಲ್ಲೂ ಮೂರು ದೃಶ್ಯಗಳು ಹಲವು ನಿಮಿಷಗಳ ಕಾಲ ಇದೆ. ಆ ಸಂದರ್ಭದಲ್ಲಿ ಎಲ್ಲಾ ಕಲಾವಿದರಿಗೂ ಅಭಿನಯಿಸುವುದಕ್ಕೆ ಒಳ್ಳೆಯ ವೇದಿಕೆ ಸಿಕ್ಕಿದೆ. ಅಭಿನಯದ ವಿಷಯಕ್ಕೆ ಬರುವುದಾದರೆ, ಚಿತ್ರದ ಅಚ್ಚರಿ ಶ್ವೇತಾ ಪಂಡಿತ್.
ಶ್ವೇತಾ ಇಷ್ಟು ಚೆನ್ನಾಗಿ ಅಭಿನಯಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಇನ್ನು ಶ್ರುತಿ ಹರಿಹರನ್, ಭವಾನಿ ಪ್ರಕಾಶ್ ಮತ್ತು ಅಚ್ಯುತ್ ಕುಮಾರ್ ಮೂವರ ಅಭಿನಯವೂ ಮೆಚ್ಚುಗೆ ಪಡೆಯುತ್ತದೆ. ಭವಾನಿ ಮತ್ತು ಅಚ್ಯುತ್ ಕೆಲವು ಕಡೆ ಅತಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದನಿಸಬಹುದು. ಆದರೂ ಅವರ ಪಾತ್ರ ನೆನಪಿನಲ್ಲುಳಿಯುತ್ತವೆ. “ಉರ್ವಿ’ ಒಂದು ಬೇರೆ ರೀತಿಯ ಪ್ರಯತ್ನ. ಸ್ವಲ್ಪ ಓರೆಕೋರೆಗಳನ್ನು ಮನ್ನಿಸಿ ಬಿಟ್ಟರೆ, ಒಳ್ಳೆಯ ಪ್ರಯತ್ನವೂ ಹೌದು.
ಚಿತ್ರ: ಉರ್ವಿನಿರ್ಮಾಣ: ಬಿ.ಆರ್.ಪಿ. ಭಟ್
ನಿರ್ದೇಶನ: ಪ್ರದೀಪ್ ವರ್ಮ
ತಾರಾಗಣ: ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್, ಅಚ್ಯುತ್ ಕುಮಾರ್ ಮುಂತಾದವರು * ಚೇತನ್ ನಾಡಿಗೇರ್