Advertisement
ಚಿಕ್ಕಮಗಳೂರಿಗೆ ಕಾಲಿಡುತ್ತಿದ್ದಂತೆ ಜಿಟಿ ಜಿಟಿ ಮಳೆ. ಈ ಚಳಿಗಾಲದಲ್ಲಿ ಇದೆಂಥ ಮಳೆ? ನಮ್ಮ ಹಣೆ ಬರಹವೇ ಹೀಗೇನೋ ಎಂದು ಶಪಿಸಿ ಕೊಳ್ಳುವಂತಾಯಿತು. ಹಿಂದಿನ ದಿನವಷ್ಟೇ ಜಗಳವಾಡಿಕೊಂಡು ದೂರ ನಿಂತಿದ್ದ ಮೋಡಗಳು ಒಟ್ಟೊಟ್ಟಿಗೆ ಲಗ್ಗೆ ಇಟ್ಟು ಪಟ್ಟಣವನ್ನು ತೋಯಿಸಿಬಿಟ್ಟಿದ್ದವು. ಆದರೆ, ಉತ್ಸಾಹಿ ಸ್ನೇಹಿತ ವೀರೂ ಆಕಾಶ ನೋಡಿ, ಕುರುಡು ಲೆಕ್ಕಾಚಾರ ಹಾಕಿ, “ದೇವರ ಮನೆಗೆ ಹೋಗೋಣ. ಅಲ್ಲಿ ಮಳೆ ಇರಲ್ಲ. ಮಂಜು ಇರುತ್ತದೆ’ ಅಂದ. ಇರಲಿ ಅಂತ ನಾವು ಅಳುಕಿ ನಿಂದಲೇ ಹೆಜ್ಜೆ ಹಾಕಿದೆವು.
Related Articles
Advertisement
ಕಣ್ಣಗಲಿಸಿದಷ್ಟೂ ದೂರಕ್ಕೂ ಅದು ಹರಡಿ ನಿಂತಿದೆ. ಅದರ ಕೊನೆಯೇ ತಿಳಿಯುತ್ತಿಲ್ಲ. ಈ ಮೂರು ಬೆಟ್ಟದ ಬುಡದಲ್ಲಿ ಇರುವುದೇ ಶೋಲಾ ಕಾಡು. ಇದನ್ನು ಪಶ್ಚಿಮಘಟ್ಟದ ನೀರಿನ ಟ್ಯಾಂಕ್ ಅಂತಲೇ ಕರೆಯುತ್ತಾರೆ. ನಾವು ಸುಮಾರು 8ಕಿ.ಮೀಯಷ್ಟು ಎರಡು ಬೆಟ್ಟವನ್ನು ಹತ್ತಿ ಇಳಿದೆವು. ದೂರದಿಂದ ನೋಡಿದರೆ ಬೆಟ್ಟದ ಮೈಮೇಲೆ ದಾರಿಗಳು ಬೈತಲೆಯಂತೆ ಸೀಳಿರುವುದು ಮಾತ್ರ ಕಾಣುತ್ತದೆ. ಅಲ್ಲಿಗೆ ನಡೆಯಲು ಪುಟ್ಟ ಕವಲು ದಾರಿ. ಪುಟ್ಟ ಬೆಟ್ಟದ ಮೇಲೆ ನಿಂತಾಗ ಮಲೆಯಮಾರುತ ಬೆಟ್ಟಗಳ ದರ್ಶನವಾಯಿತು. ಅಷ್ಟರಲ್ಲಿ ನಾಲಿಗೆಯಲ್ಲಿ ನೀರಿನ ಅಂಶ ಇಳಿದೋಗಿತ್ತು.
ವಿಶ್ರಮಿಸಲು ಬಟಾಬಯಲಿನ ಗುಡ್ಡ ಪ್ರದೇಶದಲ್ಲಿ ನಮಗೋಸ್ಕರವೇ ಬೆಳೆದು ನಿಂತಿದೆಯೇನೋ ಅನ್ನುವಂತೆ ಸಣ್ಣ ಮರದ ಆಸರೆ ದೊರೆತದ್ದು ನಮ್ಮ ಪುಣ್ಯ ಅಂತಲೇ ಹೇಳಬೇಕು. ಅದಕ್ಕೆ ಯಾರೋ ಕೆಂಪು ಬಾವುಟ ಬೇರೆ ಕಟ್ಟಿದ್ದರು. ಜೊತೆಗಿದ್ದ ಗೆಳೆಯ ವೀರೂಗೆ ಅನುಮಾನ. ಇದು ನಕ್ಸಲರ ಕೆಲಸ ಎಂದು ಸಾರಾಸಗಟಾಗಿ ಮುದ್ರೆ ಒತ್ತಿದ. ಮನಸಲ್ಲಿ ಭಯ ದಿಗ್ಗೆಂದಿತು. ಕಾಡು, ನಿಶ್ಯಬ್ದ, ಭಯದ ಬೆಂಕಿಗೆ ತುಪ್ಪ ಹಾಕುವಂತಾಯಿತು. ಆ ತನಕ ಕಾಡಿನ ಕಡೆಯಿಂದ ಬೀಸುತ್ತಿದ್ದ ಗಾಳಿ, ಪಕ್ಷಿಯ ಕಲರವವೆಲ್ಲವೂ ಎಚ್ಚರಿಕೆ ಗಂಟೆಯಾಗಿ ಕೇಳತೊಡಗಿತು.
ವೀರೂ, ಎಲ್ಲ ಭಯಗಳನ್ನು ಸರಿಗಟ್ಟಿ ತಗ್ಗಿನಲ್ಲಿದ್ದ ಶೋಲಾ ಕಾಡಿನ ಕಡೆಗೆ ಹೊರಟಾಗ ಭಯ ಮತ್ತಷ್ಟು ಉಲ್ಬಣಿಸಿತು. ಒಂದಷ್ಟು ನಿಮಿಷಗಳ ಕಾಲ ಕಣ್ಮರೆಯಾದಾಗ ನಾವು ಏನು ಮಾಡಬೇಕು ಅಂತಲೂ ತಿಳಿಯಲಿಲ್ಲ. ಕೈಯಲ್ಲಿದ್ದ ಮೊಬೈಲ್ ನೆಟ್‌ವರ್ಕ್ ಇಲ್ಲದೆ ತಣ್ಣಗೆ ಮಲಗಿದೆ. ಹಾಗೇ ನೋಡುತ್ತಿದ್ದೆವು. ಒಂದಷ್ಟು ಗಿಡಗಳು ಅಲುಗಾಡಿದಂತಾಯಿತು. ವೀರು ಕಾಡಿನ ಅಂಚಲೆಲ್ಲಾ ತಡಕಾಡಿ, ಮರಕ್ಕೆ ಕಟ್ಟಿದ್ದ ಬಾವುಟಗಳನ್ನು ಕಿತ್ತೂಗೆದ. ದೂರದರ್ಶಕರಾಗಿದ್ದ ನಮಗೆ ಎಲ್ಲವೂ ಸ್ಪಷ್ಟವಾಗಿ ಕಂಡಿತು. ಈ ಎಲ್ಲ ಭಯಗಳ ನಡುವೆ ದಕ್ಕಿದ ಪ್ರಕೃತಿ ಸೌಂದರ್ಯ ಸವಿದೆವು. ದೂರದಲ್ಲಿ ಆನೆಯೊಂದು ಬಂದಂತಾಯಿತು.
ವಿಧಿ ಇಲ್ಲ ಅದೇ ದಾರಿಯಲ್ಲೇ ನಡೆಯಬೇಕು. ಹಾಗೇ ಹೋದೆವು. ಅದು ಭ್ರಮೆ ಅಂತ ನಮಗೆ ಹತ್ತಿರ ಹೋದಮೇಲೆ ತಿಳಿಯಿತು. ಪುಟ್ಟ ಕಪ್ಪುಕಲ್ಲು ಬಂಡೆ ದೂರದಿಂದ ಆನೆಯಂತೆ ಕಂಡಿದ್ದು. ನಡೆದಷ್ಟೂ ಸವೆಯದ ಬೆಟ್ಟಗಳು. ಕೊನೆಗೆ ಬಂದ ದಾರಿಯಲ್ಲೇ ವಾಪಸಾದೆವು. ದೇವಾಲಯದ ಹತ್ತಿರ ಬರುವ ಹೊತ್ತಿಗೆ ಅರ್ಚಕರ ಮನೆ ಕಾಫಿ ದೇಹವನ್ನು ಬಿಸಿ ಮಾಡಿತು. ಆಗಲೇ ಅರ್ಚಕರು ಕೆಂಪು ಬಾವುಟದ ಬಗ್ಗೆ ಟಿಪ್ಪಣಿ ಕೊಟ್ಟರು. ಅದು ನಕ್ಸಲರ ಬಾವುಟವಲ್ಲ. ಅರಣ್ಯ ಇಲಾಖೆಯ ಸರ್ವೆ ಗುರುತು ಎಂದು. ವೀರಾವೇಶದಿಂದ ಹೊರಟ ವೀರೂ ಸಾಹಸದ ಹಿರಿಮೆ ಟುಸ್ಸೆಂದಿತು. ಸೂರ್ಯ ಡ್ನೂಟಿ ಮುಗಿಸುವ ಹೊತ್ತಿಗೆ ಕಾರು ಬಂದದಾರಿ ಯಲ್ಲೇ ಹೆಜ್ಜೆಹಾಕಿತು. ಅದೇ ತೋಟ, ಅದೇ ಊರುಗಳ ತಲೆಸವರುತ್ತಾ ದೇವರ ಮನೆಯ ಪ್ರಕೃತಿ ಸೌಂದರ್ಯ ಚಪ್ಪರಿಸುತ್ತಾ ವಾಪಸಾದೆವು.
* ಕೆ.ಜಿ