Advertisement

ಕಡಲ್ಕೊರೆತ ಕಾಮಗಾರಿ: ಶೀಘ್ರ CRZ ಅನುಮೋದನೆ: ಸಚಿವ ಮಂಕಾಳ ವೈದ್ಯ

12:23 AM Jun 17, 2023 | Team Udayavani |

ಮಂಗಳೂರು: ಸಮುದ್ರ ಕೊರೆತ ತಡೆ ಕಾಮಗಾರಿ ವಿಚಾರದಲ್ಲಿ ಸಿಆರ್‌ಝಡ್‌ ಅನುಮೋದನೆ ನೀಡುವುದಕ್ಕೆ ವಿಳಂಬ ಸರಿಯಲ್ಲ. ಈ ತಿಂಗಳ ಅಂತ್ಯದೊಳಗೆ ಅಂತಹ ಕಾಮಗಾರಿಗಳಿಗೆ ಬಾಕಿ ಇರುವ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಮಂಕಾಳ ವೈದ್ಯ ತಾಕೀತು ಮಾಡಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅವರು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

Advertisement

ಸುರತ್ಕಲ್‌ ಲೈಟ್‌ಹೌಸ್‌, ಉಚ್ಚಿಲ ಬಟ್ಟಪ್ಪಾಡಿ ಹಾಗೂ ಮೀನಕಳಿಯದಲ್ಲಿ 2022-23ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಅನು ಮೋದನೆಯಾದ 5 ಕೋಟಿ ರೂ. ವೆಚ್ಚದ ಕಡಲ್ಕೊರೆತ ತಡೆ ಸಂಬಂಧ ಸಿಆರ್‌ ಝಡ್‌ನಿಂದ ನಿರಾಕ್ಷೇಪಣೆ ಪಡೆಯುವುದಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದರು.

ಸಮುದ್ರ ತೀರಗಳಲ್ಲಿ ಬಡವರು ವಾಸಿಸು ತ್ತಿದ್ದಾರೆ, ಅವರ ಮನೆ, ಸಂಚರಿಸುವ ರಸ್ತೆ ಹಾಳಾ ಗುತ್ತದೆ. ಹಾಗಾಗಿ ಇಂತಹ ಕಾಮಗಾರಿಗಳನ್ನು ವಿಳಂಬ ಮಾಡುವುದು ಸರಿಯಲ್ಲ.

ಕರಾವಳಿ ನಿಯಂತ್ರಣ ವಲಯ 2019ರಲ್ಲಿ ತಿದ್ದುಪಡಿಯಾಗಿದ್ದು, ಹೊಸ ನಕ್ಷೆ 2019ರಲ್ಲಿ ರಚನೆಯಾಗಿದೆ. ಆದರೆ ಈ ವರ್ಷವಷ್ಟೇ ಜಾರಿಗೆ ಬಂದಿದೆ. ಅದರಂತೆ ಮೀನುಗಾರರ ಮನೆ ನಿರ್ಮಾಣಕ್ಕೆ ಇರುವ ಅಡ್ಡಿಗಳು ನಿವಾರಣೆಯಾಗಿದ್ದು, ಈ ಬಗ್ಗೆ ಇಲಾಖೆ ವ್ಯಾಪಕ ಪ್ರಚಾರ ಕಾರ್ಯ ನಡೆಸಬೇಕು ಎಂದರು.

ಮೀನುಗಾರರು ಬಲೆ ನೇಯುವುದಕ್ಕೆ ಸರಿಯಾದ ಆಶ್ರಯ ಇಲ್ಲ, ಮೀನುಗಾರ ಮಹಿಳೆಯರಿಗೆ ಕೈ ತೊಳೆಯುವುದಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿ ತತ್‌ಕ್ಷಣ ಗಮನ ಹರಿಸಿ ಅವರಿಗೆ ಆಶ್ರಯ ಕಲ್ಪಿಸುವ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

Advertisement

56 ಲಕ್ಷ ರೂ. ಬಳಕೆಗೆ ಅನುಮತಿ
ಉಳ್ಳಾಲದ ಬಟ್ಟಪ್ಪಾಡಿ, ಉಚ್ಚಿಲ ಹಾಗೂ ಸೀಗ್ರೌಂಡ್‌ಗಳಲ್ಲಿ ಉಂಟಾಗುವ ಕಡಲ್ಕೊರೆತದ ತಡೆಗೆ ತುರ್ತು ನೆಲೆಯಲ್ಲಿ ಕಾಮಗಾರಿ ನಡೆಸುವುದಕ್ಕೆ ವಿಪತ್ತು ನಿಧಿಯಲ್ಲಿ ಮೊತ್ತ ಲಭ್ಯವಿದೆ. ಆದರೆ ಅದನ್ನು ಬಳಸುವುದಕ್ಕೆ ಅನುಮತಿ ಕೊಡಬೇಕು ಎಂದು ಈ ವೇಳೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಕೇಳಿಕೊಂಡರು. ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.

ಮಂಗಳೂರು ಬಂದರಿನಲ್ಲಿ ಡ್ರೆಜ್ಜಿಂಗ್‌ ಮಾಡುವ 3.92 ಕೋಟಿ ರೂ.ನ ಕಾಮಗಾರಿ ಅಕ್ಟೋಬರ್‌ನಲ್ಲಿ ಕೈಗೊಳ್ಳಲಾಗುವುದು, ಇದಾದ ಕೂಡಲೇ ತೇಲುಜೆಟ್ಟಿಯ ಕೆಲಸವನ್ನೂ 5 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಈ ವೇಳೆ ವಿವರಿಸಿದರು.

ಜಿಲ್ಲಾ ಪಂಚಾಯತ್‌ ಸಿಇಒ ಡಾ| ಕುಮಾರ್‌, ಬಂದರು ಇಲಾಖೆ ಮುಖ್ಯ ಎಂಜಿನಿಯರ್‌ ತಾರಾನಾಥ್‌ ರಾಥೋಡ್‌, ಬಂದರು ಅಧಿಕಾರಿ ಕ್ಯಾ| ಸಿ. ಸ್ವಾಮಿ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಹರೀಶ್‌ ಉಪಸ್ಥಿತರಿದ್ದರು.

ಬಾಕಿ ಇರುವ ಪರಿಹಾರ ಶೀಘ್ರ ಬಿಡುಗಡೆ
ಬೋಟ್‌ಗಳಿಗೆ ಹಾನಿ, ಮೃತಪಟ್ಟ ಮೀನುಗಾರರಿಗೆ ಪರಿಹಾರ ವಿತರಣೆ ಸೇರಿದಂತೆ 20 ಪ್ರಕರಣಗಳು ವರ್ಷದಿಂದ ಬಾಕಿ ಇದ್ದು, ರಾಜ್ಯ ಸರಕಾರದಿಂದ ನೀಡಬೇಕಾದ ಪರಿಹಾರ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಹೇಳಿದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಒಟ್ಟು 3.60 ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ. ಹಿಂದಿನ ಬಿಜೆಪಿ ಸರಕಾರ ಮೀನುಗಾರರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಹಿಂದಿನ ಬಾಕಿಯಲ್ಲಿ ಮೊದಲ ಹಂತದಲ್ಲಿ 1.60 ಕೋಟಿ ರೂ. ಬಿಡುಗಡೆಗೊಳಿಸಿ, ಆದ್ಯತೆ ಮೇರೆಗೆ ಪರಿಹಾರ ಹಣ ವಿತರಿಸಲಾಗುವುದು ಎಂದರು.

ಕೇಂದ್ರ ಸರಕಾರದ ಗುಂಪು ವಿಮೆ ಯೋಜನೆಯಡಿ ಕೂಡ ಈ ಫಲಾನುಭವಿಗಳಿಗೆ ಪರಿಹಾರ ದೊರೆತಿಲ್ಲ. ವ್ಯಕ್ತಿ ಮೃತಪಟ್ಟ ಮೂರು ತಿಂಗಳ ಒಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂಬ ನಿಯಮಕ್ಕೆ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಈಗಾಗಲೇ ಮೃತಪಟ್ಟಿರುವ ಮೀನುಗಾರರ ಕುಟುಂಬಕ್ಕೆ ಅನ್ಯಾಯವಾಗುತ್ತದೆ. ಮಾಹಿತಿ ಕೊರತೆಯಿಂದ ಅವರು ದಾಖಲೆ ಸಲ್ಲಿಸಲು ವಿಳಂಬ ಆಗಿರಬಹುದು. ಈ ವಿಷಯವನ್ನು ಕೇಂದ್ರ ಸರಕಾರಕ್ಕೆ ತಿಳಿಸಿ ವಿಮೆ ಹಣ ಫಲಾನುಭವಿಗಳಿಗೆ ದೊರೆಯುವಂತಾಗಲು ಪ್ರಯತ್ನಿಸಲಾಗುವುದು ಎಂದರು.

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ
ಉಡುಪಿ: ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸೀವೇವ್‌ ಬ್ರೇಕರ್‌ ಹಾಗೂ ಡಕ್‌ಫ‌ುಟ್‌ ತಂತ್ರಜ್ಞಾನದ ಕಾಮಗಾರಿ ಮುಂದುವರಿಸಲಿದ್ದೇವೆ ಎಂದು ಮೀನುಗಾರಿಕೆ, ಬಂದರು ಖಾತೆ ಸಚಿವ ಮಂಕಾಳ ವೈದ್ಯ ಹೇಳಿದರು.

ಉಡುಪಿ ಜಿಲ್ಲಾಡಳಿತ ಹಾಗೂ ಮೀನುಗಾರಿಕೆ, ಬಂದರು ಇಲಾಖೆಯ ಅಧಿಕಾರಿಗಳ ಜತೆಗೆ ಪ್ರಗತಿ ಪರಿಶೀಲನೆಯ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪು ಕ್ಷೇತ್ರದ ನಡಿಪಟ್ನ ಹಾಗೂ ಬೈಂದೂರು ಕ್ಷೇತ್ರದ ಮರ ವಂತೆಯಲ್ಲಿ ಈ ತಂತ್ರಜ್ಞಾನ ಅಳವಡಿಸಿ ಕಡಲ್ಕೊರೆತ ತಡೆಗೆ ಕ್ರಮ ಕೈಗೊಳ್ಳಲಿದ್ದೇವೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೇ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಲಿದ್ದೇವೆ ಎಂದು ವಿವರಿಸಿದರು.

ಜಿಲ್ಲಾದ್ಯಂತ ಮೀನುಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಮಳೆಗಾಲ ಆರಂಭವಾಗುತ್ತಿರುವುದರಿಂದ ಕಡಲ್ಕೊರೆತ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಜತೆಗೆ ತುರ್ತು ಕಾಮಗಾರಿಗಳಿಗೆ ಹಣಕಾಸಿನ ಸಮಸ್ಯೆಯಾಗದಂತೆಯೂ ನೋಡಿ ಕೊಳ್ಳಲಿದ್ದೇವೆ. ಮೀನುಗಾರಿಕೆ, ಬಂದರು ಇಲಾಖೆಯಲ್ಲಿ ಆಗಿರುವ ಕಾಮಗಾರಿ, ಆಗಬೇಕಿರುವ ಕಾಮಗಾರಿಯ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದರು.

ಸೀ ಆ್ಯಂಬುಲೆನ್ಸ್‌ನಿಂದ ಮೀನುಗಾರರಿಗೆ ಅನುಕೂಲ ಆಗುವುದಾದಲ್ಲಿ ಅದರ ಬಗ್ಗೆ ಯೋಚನೆ ಮಾಡಲಿದ್ದೇವೆ. ಸಮುದ್ರದಲ್ಲಿ ಏನೇ ಅವಘಡವಾದರೂ ಸಮೀಪದ ಬೋಟಿನವರು ಸಹಾಯಕ್ಕೆ ಬರುತ್ತಾರೆ. ಅಲ್ಲದೆ ಕೋಸ್ಟ್‌ಗಾರ್ಡ್‌, ಕರಾವಳಿ ಕಾವಲು ಪಡೆಯವರು ಮೀನುಗಾರರ ಸಹಾಯಕ್ಕೆ ಧಾಮಿಸಲಿದ್ದಾರೆ. ಸುವರ್ಣ ತ್ರಿಭುಜ ಬೋಟ್‌ ಅವಘಡಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆಯಲಾಗುವುದು ಎಂದರು.

ಸಿಆರ್‌ಝಡ್‌ ಸಮಸ್ಯೆಯಿಂದ ಮರವಂತೆ ಬ್ರೇಕ್‌ವಾಟರ್‌ ಎರಡನೇ ಹಂತದ ಕಾಮಗಾರಿ ಸ್ಥಗಿತವಾಗಿದ್ದು, ಸಿಆರ್‌ಝಡ್‌ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿ, ಕಾಮಗಾರಿಯನ್ನು ಆದಷ್ಟು ಬೇಗ ಪುನರ್‌ ಆರಂಭಿಸಲಾಗುವುದು. ಮೀನುಗಾರರಿಗೆ ಯಾವುದೇ ಸಮಸ್ಯೆ ಆಗದಂತೆಯೂ ನೋಡಿಕೊಳ್ಳಲಿದ್ದೇವೆ. ಬಂದರುಗಳಲ್ಲಿ ಮೀನುಗಾರ ಮಹಿಳೆಯರಿಗೆ ಅಗತ್ಯ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲಿದ್ದೇವೆ. ಮೀನುಗಾರರಿಗೆ ಸರಕಾರದಿಂದ ಮನೆ ನೀಡುವ ವ್ಯವಸ್ಥೆಯನ್ನು ಪುನರ್‌ ಆರಂಭಿಸಲಿದ್ದೇವೆ ಎಂದರು.

ಪ್ರಗತಿ ಪರಿಶೀಲನೆ
ಇಲಾಖೆಯಿಂದ ಆಗಿರುವ ವಿವಿಧ ಕಾಮಗಾರಿ, ಮೀನುಗಾರಿಗೆ ನೀಡಿರುವ ಸವಲತ್ತು ಹಾಗೂ ಕಡಲ್ಕೊರೆತ ತಡೆಗೆ ತೆಗೆದುಕೊಂಡಿರುವ ಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಸಚಿವರು, ಮೀನುಗಾರರಿಗೆ ಇಲಾಖೆಯ ಸೌಲಭ್ಯವನ್ನು ಕ್ಲಪ್ತ ಸಮಯದಲ್ಲಿ ತಲುಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸ್‌ಪಿ ಅಕ್ಷಯ್‌ ಹಾಕೇ ಮಚ್ಚೀಂದ್ರ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್‌, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌., ಇಲಾಖೆಯ ಉಪನಿರ್ದೇಶಕಿ ಅಂಜನಾ ದೇವಿ ಉಪಸ್ಥಿತರಿದ್ದರು.

ಸತ್ತವರ ಕುಟುಂಬಕ್ಕೂ ಪರಿಹಾರ ನೀಡದವರು
ಬಿಜೆಪಿಯರು ತಮ್ಮ ಆಡಳಿತದಲ್ಲಿ ಮೀನುಗಾರರಿಗೆ ಮನೆ ನೀಡಲಿಲ್ಲ. ಅಷ್ಟು ಮಾತ್ರವಲ್ಲ ಮೃತಪಟ್ಟಿರುವ ಮೀನುಗಾರರ ಕುಟುಂಬಕ್ಕೆ ಪರಿಹಾರವನ್ನು ಕೊಟ್ಟಿಲ್ಲ. ಮೃತ ಮೀನುಗಾರರ ಕುಟುಂಬಕ್ಕೆ ಹಣ ನೀಡಲು ಸಾಧ್ಯವಾಗದವರು ಈಗ ಏನೇನೋ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಮೀನುಗಾರರ ಸೀಮೆಎಣ್ಣೆ, ಡೀಸೆಲ್‌ ಸಬ್ಸಿಡಿ ಸಮಸ್ಯೆಗೂ ಪರಿಹಾರ ನೀಡಲಿದ್ದೇವೆ.
– ಮಂಕಾಳ ವೈದ್ಯ, ಮೀನುಗಾರಿಕೆ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next