ಹಾವೇರಿ: ಅಂಗವಿಕಲರೊಬ್ಬರು ಸ್ಥಳೀಯ ಶಾಸಕರಿಂದಲ್ಲ, ಇಬ್ಬಿಬ್ಬರು ಮುಖ್ಯಮಂತ್ರಿಗಳಿಂದ ಶಿಫಾರಸ್ಸು ಪತ್ರ ತಂದರೂ ಅಧಿಕಾರಿಗಳು ಆ ಪತ್ರಗಳಿಗೆ ಸೊಪ್ಪು ಹಾಕದೆ ಸೌಲಭ್ಯ ಕೊಡುವಲ್ಲಿ ಮೀನಾಮೀಷ ಎಣಿಸುತ್ತಿರುವ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಹಾಲಗಿ ಗ್ರಾಮದ ಕುಮಾರ ಹೇಮಣ್ಣ ಭಜಂತ್ರಿ ಕಾಲುಗಳ ಸ್ವಾಧೀನ ಕಳೆದುಕೊಂಡ ವಿಕಲಚೇತನ.
ಇವರು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಸಂಸಾರ ಸಾಗಿಸಲು ಇವರಿಗೆ ಬೇರೆ ದಾರಿ ಇಲ್ಲದ್ದರಿಂದ ಸಣ್ಣ ಕಿರಾಣಿ ಅಂಗಡಿ ಮಾಡಲು ನಿರ್ಧರಿಸಿದ್ದಾರೆ.
ಆದರೆ, ಇನ್ನೂ ಅವರಿಗೆ ಸಾಲ ಸೌಲಭ್ಯ ಸಿಕ್ಕಿಲ್ಲ. ಸ್ಥಳೀಯ ಅಧಿಕಾರಿಗಳು ಸಹಾಯಧನದೊಂದಿಗಿನ ಸಾಲ ನೀಡಲು ನಿರಾಕರಿಸಿದಾಗ ಇವರು ರಾಜಧಾನಿ ಬೆಂಗಳೂರಿಗೆ ಹೋಗಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಲ್ಲಿ ಅರಿಕೆ ಮಾಡಿಕೊಂಡು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳಿಂದ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಿಗೆ ಸಾಲ ಕೊಡುವಂತೆ ಶಿಫಾರಸು ಮಾಡಿದ ಪತ್ರ ತಂದರು. ಆ ಪತ್ರ ತೋರಿಸಿದರೂ ನಿಗಮದ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತ ಕುಮಾರ ಭಜಂತ್ರಿಯವರು ಇತ್ತೀಚೆಗೆ ಮತ್ತೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೂ ಅದೇ ರೀತಿಯ ಪತ್ರ ತಂದಿದ್ದಾರೆ.
ಆ ಪತ್ರಕ್ಕೂ ಅ ಧಿಕಾರಿಗಳು ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ. ಈ ವರ್ಷ ಪ್ರವಾಹದಲ್ಲಿ ಮನೆಯೂ ಬಿದ್ದು ಹೋಗಿದೆ. ಮನೆ ಪರಿಹಾರ ಕೇಳಿದರೆ ಪರಿಹಾರಧನ ಖಾಲಿ ಆಗಿದೆ ಬಂದ ಮೇಲೆ ಕೊಡುತ್ತೇವೆ ಎಂದು ಅ ಧಿಕಾರಿಗಳು ಹೇಳುತ್ತಾರೆ. ಇತ್ತ ಸಾಲವೂ ಕೊಡುತ್ತಿಲ್ಲ. ಮನೆಯಲ್ಲಿ ಯಾರೂ ಇಲ್ಲದೇ ಇರುವುದರಿಂದ ಇಬ್ಬರು ಮಕ್ಕಳನ್ನು ನನ್ನ ಜತೆ ಕರೆದುಕೊಂಡು ಓಡಾಡುತ್ತಿದ್ದೇನೆ. ಅಧಿಕಾರಿಗಳು ಶಾಸಕರ ಕಡೆಯಿಂದ ಪತ್ರ ತೆಗೆದುಕೊಂಡು ಬಾ ಎಂದು ಅಲೆದಾಡಿಸುತ್ತಿದ್ದಾರೆ ಎನ್ನುತ್ತಾನೆ ಅಂಗವಿಕಲ ಭಜಂತಿ.
ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಯಾರುಬಂದರೂ ಸ್ಪಂದಿಸುತ್ತೇವೆ. ವಿಕಲಚೇತನ ಕುಮಾರ ಭಜಂತ್ರಿ ಕಚೇರಿಗೆ ಬಂದು ನನ್ನನ್ನು ಸಂಪರ್ಕಿಸಿದರೆ ಅಗತ್ಯ ಸಹಕಾರ ನೀಡುತ್ತೇನೆ
. –ಆರ್. ಮೈಲಾರಪ್ಪ, ಜಿಲ್ಲಾ ವ್ಯವಸ್ಥಾಪಕ, ಅಂಬೇಡ್ಕರ್ ಅಭಿವೃದ್ಧಿ ನಿಗಮ