ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ನಡೆಸಿದ ಕೆಡಿಪಿ ಸಭೆ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಅಧಿಕಾರಿಗಳಿಂದ ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ಗಳ ತೆರವು ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದರು.
ಕಡೂರು ತಾಲೂಕು ಬೀರೂರು ಹೋಬಳಿ ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ.70ರಲ್ಲಿ ಎಮ್ಮೆದೊಡ್ಡಿ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಎಚ್.ಎನ್.ಮಂಜುನಾಥ ಎಂಬುವರು (ನಿವೃತ್ತ ಸರ್ಕಾರಿ ಅಧಿಕಾರಿ) 10 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕುರಿ, ಕೋಳಿ ಸಾಕಾಣಿಕೆ ಶೆಡ್ ಗಳನ್ನು ನಿರ್ಮಾಣ ಮಾಡಿದ್ದರು. ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮಂಜುನಾಥ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಇದ್ಯಾವೂದಕ್ಕೂ ಮಂಜುನಾಥ್ ಬಗ್ಗಿರಲಿಲ್ಲ.
ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಒಳಪಟ್ಟಿತ್ತು. ಬಡವರಿಗೊಂದು ನ್ಯಾಯ ಬಲಿಷ್ಟರಿಗೊಂದು ನ್ಯಾಯವೇ, ಬಡವರು ಒತ್ತುವರಿ ಮಾಡಿದರೆ ಕಳ್ಳರಂತೆ ನೋಡುತ್ತಿರಿ ಎಂದು ಡಿಎಫ್ಓ ವಿರುದ್ದ ಹರಿಹಾಯ್ದಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಪ್ರಕರಣದ ಮಾಹಿತಿ ಪಡೆದು 48 ಗಂಟೆಗಳಲ್ಲಿ ಒತ್ತುವರಿ ತೆರವು ಮಾಡಬೇಕು, ಇಲ್ಲದಿದ್ದರೆ ಅಧಿಕಾರಿಯನ್ನು ಸಸ್ಪೆಂಡ್ ಮಾಡುವುದಾಗಿ ಖಡಕ್ಕಾಗಿ ಸೂಚಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಜೆಸಿಬಿಯೊಂದಿಗೆ ತೆರಳಿ, ಪೊಲೀಸ್ ಭದ್ರತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಗಳನ್ನು ತೆರವುಗೊಳಿಸಿದ್ದಾರೆ.
10 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಕುರಿ ಶೆಡ್, ಕೋಳಿ ಶೆಡ್, ಕೃಷಿ ಹೊಂಡವನ್ನು ನೆಲಸಮಗೊಳಿಸಲಾಗಿದೆ. ಎಸಿಎಫ್ ಮೋಹನ್, ಆರ್ಎಫ್ಓ ರಜಾಕ್ ರದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಅರಣ್ಯ ಇಲಾಖೆ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿದ್ದಾರೆ.