Advertisement
ಶನಿವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಗ್ರಾಪಂ ನೌಕರನೊಬ್ಬನ ನೇಮಕಾತಿಗೆ ಸಂಬಂಧಿಸಿದಂತೆ ಧಾರವಾಡ ಜಿ.ಪಂ. ಉಪ ಕಾರ್ಯದರ್ಶಿ ವೈ.ಡಿ. ಕುನ್ನಿಭಾವಿ ಮತ್ತು ಹುಬ್ಬಳ್ಳಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಧ್ಯೆ ಮಾರಾಮಾರಿ ನಡೆದು, ಇಬ್ಬರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡರು. ಅಷ್ಟೇಯಲ್ಲ, ಈ ವಿಚಾರದಲ್ಲಿ ವೈ.ಡಿ. ಕುನ್ನಿಭಾವಿ ಬಳಸಿದ ಅಶ್ಲೀಲ ಶಬ್ದಗಳ ಬಗ್ಗೆ ಜಿ.ಪಂ. ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಂದ ತೀವ್ರ ಖಂಡನೆ ವ್ಯಕ್ತವಾಯಿತು.
Related Articles
Advertisement
ಸದಸ್ಯರಿಗೆ ಮುಜುಗರ: ಇಬ್ಬರು ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ಜಿ.ಪಂ. ಸಭಾಂಗಣದಲ್ಲಿ ಹೊಡೆದಾಡಿಕೊಳ್ಳುತ್ತಿದ್ದರೆ, ಹಾಜರಿದ್ದ 22 ಜಿ.ಪಂ. ಸದಸ್ಯರೂ ಒಮ್ಮೇಲೆ ದಂಗಾಗಿ ಅವರನ್ನು ನೋಡಿಕೊಂಡು ನಿಂತು ಬಿಟ್ಟರು. ಏಕಾಏಕಿ ಕೆಟ್ಟ ಶಬ್ದಗಳು ಕಿವಿಗೆ ಬೀಳುತ್ತಿದ್ದಂತೆ, ಸದಸ್ಯರು ಪರಸ್ಪರ ಮುಖ ನೋಡಿಕೊಂಡು ಮುಜುಗರ ಪಟ್ಟುಕೊಳ್ಳಬೇಕಾಯಿತು.
ಕೊನೆಗೆ ಅದರಗುಂಚಿ ಜಿ.ಪಂ. ಸದಸ್ಯ ಸುರೇಶಗೌಡ ಪಾಟೀಲ ಮಧ್ಯ ಪ್ರವೇಶಿಸಿ ಇಬ್ಬರೂ ಅಧಿಕಾರಿಗಳಿಗೆ ಜಗಳ ನಿಲ್ಲಿಸುವಂತೆ ತಾಕೀತು ಮಾಡಿದರು. ಜೊತೆಗೆ ಸಿಇಒ ಸ್ನೇಹಲ್ ಕೂಡ ಇಬ್ಬರು ಅಧಿಕಾರಿಗಳನ್ನು ಸುಮ್ಮನಿರುವಂತೆ ಸೂಚಿಸಿದಾಗ ಗಲಾಟೆ ತಣ್ಣಗಾಯಿತು.
ರಾಜೀ ಸಭೆ ವಿಫಲ: ಜಿ.ಪಂ. ಸಭಾಂಗಣದಲ್ಲಿನ ಇಬ್ಬರು ಅಧಿಕಾರಿಗಳ ಗಲಾಟೆ ಕೊನೆಗೆ ಜಿ.ಪಂ. ಸಿಇಒ ಅವರ ಕಚೇರಿಗೆ ಸ್ಥಳಾಂತರಗೊಂಡಿತು. ಇಲ್ಲಿ ಇಬ್ಬರು ಅಧಿಕಾರಿಗಳ ಮಧ್ಯ ಸಂಧಾನಕ್ಕೆ ಜಿ.ಪಂ. ಸಿಇಒ ಯತ್ನಿಸಿದರು. ಇಬ್ಬರು ಅಧಿಕಾರಿಗಳಿಗೆ ಬುದ್ದಿ ಕೂಡ ಹೇಳಿದರು. ಆದರೂ ಪ್ರಯೋಜನವಾಗದೇ ಅವರ ಎದುರಿನಲ್ಲಿಯೇ ಮತ್ತೂಮ್ಮೆ ವಾಕ್ ಸಮರ ನಡೆಯಿತು. ಕೊನೆಗೂ ಅವರು ಕೂಡ ತಮ್ಮ ಕಚೇರಿಯಿಂದ ಎದ್ದು ಹೊರ ನಡೆದರು.