Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಡೆತ್ ನೋಟ್‌ನಲ್ಲಿ ನಿಗಮದ ಎಂ.ಡಿ. ಪದ್ಮನಾಭ ಹಾಗೂ ಇನ್ನೊಬ್ಬ ಅಧಿಕಾರಿ ಹೆಸರನ್ನು ಬರೆದಿದ್ದು, ಈ ಇಲಾಖೆಯ ಸಚಿವರ ಮೌಖೀಕ ಆದೇಶದ ಪ್ರಕಾರ ಇಷ್ಟೆಲ್ಲ ಮಾಡಬೇಕಾಗಿದೆ ಎಂದು ಆರೋಪಿಸಿದ್ದಾರೆ. ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಿದ್ದ 187 ಕೋಟಿ ರೂ.ಗಳನ್ನು ಸಚಿವರು, ನಿಗಮದ ಎಂ.ಡಿ. ಮತ್ತು ಅಧಿಕಾರಿಗಳು ನಕಲಿ ಖಾತೆ ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಕನ್ನಡಿ ಬೇರೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ ಆತ್ಮಹತ್ಯೆ: ಆರ್.ಅಶೋಕ್
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಮೌಲ್ಯದ ಬೃಹತ್ ಭ್ರಷ್ಟಾಚಾರವನ್ನು ಅಧಿಕಾರಿಯ ತಲೆಗೆ ಕಟ್ಟಲು ಹೋಗಿ, ಕಿರುಕುಳ ನೀಡಿ ಆತ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ ಈ ಕೊಲೆಗಡುಕ ಸರ್ಕಾರ. ಸಿಎಂ ಸಿದ್ದರಾಮಯ್ಯನವರೇ ಇದು ಆತ್ಮಹತ್ಯೆ ಅಲ್ಲ. ಕೊಲೆ. ಈ ಕೊಲೆಗೆ ಹೊಣೆ ಯಾರು? ನಿಮ್ಮ ಸರ್ಕಾರದ ಕಮಿಷನ್ ದಾಹಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಿ ಈ ಪ್ರಕರಣದ ತನಿಖೆಗೆ ಆದೇಶ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಆತ್ಮಹತ್ಯೆಗೆ ಶರಣಾದ ಅಧಿಕಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದ್ದಾರೆ.
Related Articles
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಸಾವಿನ ಸುತ್ತ ಭ್ರಷ್ಟಾಚಾರದ ಹುತ್ತ ಕಟ್ಟಿದ ಅನುಮಾನ ಬರುತ್ತಿದೆ. ಇಲಾಖೆಯಲ್ಲಿನ ಕಾಣದ ಕೈಗಳ ಕರಾಮತ್ತು ಯಾವುದೆಂಬುದು ಮಹದೇವನೇ ಬಲ್ಲ ! ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಸಾಕ್ಷನಾಶ ಪಡಿಸಿ ಎಸ್‌ಐಟಿ ತನಿಖೆ ಎಂಬ ರಾಗವನ್ನು ಸರ್ಕಾರ ಹಾಡದಿರಲಿ. ಈ ಬಗ್ಗೆ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆ ಸೂಕ್ತ ತನಿಖೆ ನಡೆಸಲಿ.
ವಿ.ಸುನೀಲ್ ಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
Advertisement
ಇಲಾಖೆಯ ಸಚಿವರಿಂದಲೇ ಭ್ರಷ್ಟಾಚಾರದ ನೇತೃತ್ವ: ಬಿ.ವೈ.ವಿಜಯೇಂದ್ರ ಆರೋಪ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಮೌಲ್ಯದ ಬೃಹತ್ ಭ್ರಷ್ಟಾಚಾರದ ಜಾಲದಲ್ಲಿ ನಲುಗಿರುವ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಪ.ಜಾತಿ/ಪಂಗಡಗಳ ಕಲ್ಯಾಣದ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್ ಮುಂದಾಳುಗಳು ಪ.ಜಾತಿ/ಪಂಗಡಗಳ ಹೆಸರಿನಲ್ಲಿ ನಡೆಯುತ್ತಿರುವ ದುರಾಚಾರ ಹಾಗೂ ಭ್ರಷ್ಟಾಚಾರದ ನೇತೃತ್ವವನ್ನು ಇಲಾಖೆಯ ಸಚಿವರೇ ವಹಿಸಿರುವುದು ದುರಂತ ದೌರ್ಭಾಗ್ಯವೆನ್ನಬೇಕಿದೆ. ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಅಧಿಕಾರಿಯ ಸಾವಿನ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕೆಂದು “ಎಕ್ಸ್ ‘ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿ ಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 187 ಕೋಟಿ ಸಹ ಭ್ರಷ್ಟಾಚಾರ ಆಗಿರುವ ಬಗ್ಗೆ ಅನುಮಾನ ಬರುತ್ತಿದೆ. ಈ ಹಗರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು. ಮಹಾದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಸರ್ಕಾರ ಅಧಿ ಕಾರಿಗಳ ಮೇಲೆ ಒತ್ತಡ ತರುವ ಮೂಲಕ ಅವರ ಸಾವಿಗೆ ಕಾರಣವಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇವೆ.
-ಎಸ್.ಎನ್.ಚನ್ನಬಸಪ್ಪ, ಶಾಸಕ