Advertisement

ಜಲಜೀವನ್‌ ಮಿಷನ್‌ ಅಧಿಕೃತ ಆದೇಶ

11:34 AM Jun 09, 2021 | Team Udayavani |

ಮಂಡ್ಯ: ಕಳೆದ ವಾರ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದಿದ್ದ ಜಲ ಜೀವನ್‌ ಮಿಷನ್‌ ಯೋಜನೆಯಡಿ ಜಿಲ್ಲೆಯ ಮೂರು ತಾಲೂಕಿನ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ ಮಂಗಳವಾರ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಎರಡು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.

Advertisement

ಈ ಸಂಬಂಧ ಪ್ರಕಟಣೆ ನೀಡಿರುವ ಅವರು, 690 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಮೂರು ತಿಂಗಳೊಳಗಾಗಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸ ಲಾಗುವುದು. ಜಲಜೀವನ್‌ ಮಿಷನ್‌ ಯೋಜ ನೆಯಡಿ ಹಾಗೂ ನಬಾರ್ಡ್‌ ನೆರವಿನಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲಿದೆ. ಕೆ.ಆರ್‌.ಪೇಟೆಯ ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಆರ್‌ಎಸ್‌ ಜಲಾಶಯದಿಂದ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ್ದರು. ಅಂತೆಯೇ ಈಗ ಯೋಜನೆಗೆ ಆದೇಶ ಹೊರಡಿಸಲಾಗಿದ್ದು, 2023ರೊಳಗೆ ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಸಾಕಾರಗೊಳ್ಳಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಕೆ.ಆರ್‌.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ, ನಾಗಮಂಗಲ ಪಟ್ಟಣ, ಬಿ.ಜಿ.ನಗರ ಮತ್ತು ಕೆ.ಆರ್‌. ಪೇಟೆ ತಾಲೂಕಿನ 5 ವಸತಿ ಶಾಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು 690.36 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಅದನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದುಕೊಂಡ ಬಳಿಕ ಸರ್ಕಾರದಿಂದ ಅದೇಶ ಹೊರಡಿಸಲಾಗಿದೆ. ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ 55 ಎಲ್‌ಪಿಸಿಡಿ ಹಾಗೂ ಪಟ್ಟಣ ಪ್ರದೇಶಕ್ಕೆ 135 ಎಲ್‌ಪಿಸಿಡಿ ಕುಡಿಯುವ ನೀರನ್ನು ಪೂರೈಕೆಯಾಗಲಿದೆ.

2 ವರ್ಷದೊಳಗೆ ಯೋಜನೆ ಪೂರ್ಣ: ವಾರದೊಳಗೆ ಟೆಂಡರ್‌ ಆಹ್ವಾನಿಸಿ, ಮೂರು ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಮುಗಿಸಲಾಗುವುದು. 24 ತಿಂಗಳೊಳಗಾಗಿ ಯೋಜನೆ ಪೂರ್ಣಗೊಳಿಸಿ, ಯೋಜನೆಯ ರೂಪು ರೇಷೆಯಂತೆ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಒಟ್ಟು 791 ಹಳ್ಳಿಗಳಿಗೆ ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಕೆ.ಆರ್‌.ಪೇಟೆ ತಾಲೂಕಿನ 310ಕ್ಕೂ ಹೆಚ್ಚು ಹಳ್ಳಿಗಳು, ನಾಗಮಂಗಲ ತಾಲೂಕಿನ 391 ಹಳ್ಳಿಗಳು, ಬಿ.ಜಿ.ನಗರ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ ವ್ಯಾಪ್ತಿ ಹಾಗೂ ಪಾಂಡವಪುರ ತಾಲೂಕಿನ 96 ಹಳ್ಳಿಗಳ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು.

ಈ ಯೋಜನೆಯಿಂದ 4 ಲಕ್ಷಕ್ಕೂ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಕೆ.ಆರ್‌.ಪೇಟೆ ತಾಲೂಕಿನ 1,95,112 ಜನರಿಗೆ, ನಾಗಮಂಗಲ ತಾಲೂಕಿನ 1,31,221 ಜನರಿಗೆ ಹಾಗೂ ಪಾಂಡವಪುರದ 90,235 ಜನ ಸೇರಿದಂತೆ ಒಟ್ಟು ಪಟ್ಟಣ ಹಾಗೂ ಹಳ್ಳಿ ಸೇರಿ ಒಟ್ಟು 4,16,568 ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಅನುಕೂಲವಾಗಲಿದೆ. ಸುಮಾರು ಒಂದು ದಶಕದ ಬಳಿಕ ಜಿಲ್ಲೆಗೆ ಇಷ್ಟು ದೊಡ್ಡ ಮೊತ್ತದ ಯೋಜನೆ ಮಂಜೂರಾಗಿ ಆದೇಶವಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ, ಸಂಪುಟದ ಸಹುದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಅನುದಾನದ ವಿವರ : ಈ ಯೋಜನೆ ಅನುಷ್ಠಾನಕ್ಕೆ ನಬಾರ್ಡ್‌ನಿಂದ 297.79 ಕೋಟಿ ರೂ., ಕೇಂದ್ರ ಸರ್ಕಾರದಿಂದ 220.23 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 172.33 ಕೋಟಿ ರೂ. ಅನುದಾನ ಒದಗಿಸಲಾಗುವುದು. ಎರಡು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಿ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಒಟ್ಟು 690.36 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next