Advertisement

ಮಕ್ಕಳ ಕೇಕೆ, ನಗು, ಕುಣಿತಕ್ಕೆ ಸಾಕ್ಷಿಯಾಯಿತು ಕದ್ರಿಪಾರ್ಕ್‌

09:57 AM Aug 11, 2018 | |

ಕದ್ರಿಪಾರ್ಕ್‌: ಶುಕ್ರವಾರ ಸಂಜೆ ನಗರದ ಕದ್ರಿ ಪಾರ್ಕ್‌ ತುಂಬೆಲ್ಲಾ ಮಕ್ಕಳ ನಗು, ಕೇಕೆ, ಕುಣಿತದ್ದೇ ಸಂಭ್ರಮ.. ಪಕ್ಕದಲ್ಲಿ ನಿಂತ ಜನರತ್ತ ಕೈ ಬೀಸುತ್ತಾ, ಸಂಭ್ರಮಿಸುತ್ತಾ ರೈಲಿನಲ್ಲಿ ಸಂಚರಿಸಿ ಖುಷಿಪಟ್ಟರು. ಮಕ್ಕಳ ಮನೋರಂಜನೆಯ ಭಾಗವಾಗಿದ್ದ ಬಾಲ ಮಂಗಳ ಎಕ್ಸ್‌ಪ್ರೆಸ್‌ ನೂತನ ಪುಟಾಣಿ ರೈಲು ಪುನರಾರಂಭಿಸಿರುವುದೇ ಮಕ್ಕಳ ಈ ಸಂಭ್ರಮಕ್ಕೆ ಕಾರಣ.

Advertisement

ಶುಕ್ರವಾರ ನೂತನ ಬಾಲಮಂಗಳ ಎಕ್ಸ್‌ಪ್ರೆಸ್‌ ಪುಟಾಣಿ ರೈಲು ಮಕ್ಕಳನ್ನು ತುಂಬಿಕೊಂಡು ಕದ್ರಿಪಾರ್ಕ್‌ನಲ್ಲಿ ಸಂಚರಿಸುವ ಮೂಲಕ ಅಧಿಕೃತ ಸಂಚಾರ ಆರಂಭಿಸಿತು. ಸಂಜೆ ಸಂಚಾರ ಆರಂಭಿಸಿದ ಪುಟಾಣಿ ರೈಲಿನಲ್ಲಿ ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ ಮತ್ತು ಇತರ ಅಧಿಕಾರಿ, ಸಿಬಂದಿ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸಿ ಖುಷಿ ಪಟ್ಟರು.

ಎಂಟು ವರ್ಷಗಳಿಂದ ಓಡಾಟ ನಿಲ್ಲಿಸಿದ್ದ ಬಾಲ ಮಂಗಳ ಎಕ್ಸ್‌ಪ್ರೆಸ್‌ ಪುಟಾಣಿ ರೈಲು, ಕೊನೆಗೂ ಡಿ. 22ರಂದು ಕದ್ರಿ ಪಾರ್ಕ್ಗೆ ಹೊಸದಾಗಿ ನಿರ್ಮಾಣಗೊಂಡು ಆಗಮಿಸಿತ್ತು. ಜ. 7ರಂದು ಓಡಾಟಕ್ಕೆ ಚಾಲನೆ ದೊರಕಿತ್ತಾದರೂ ಸ್ವಲ್ಪ ಸಮಯ ಪ್ರಾಯೋಗಿಕ ಓಡಾಟ ನಡೆಸಿ ಬಳಿಕ ನಿಲುಗಡೆಗೊಂಡಿತ್ತು. ಪಾರ್ಕ್‌ನ ಉತ್ತರ ಭಾಗದಲ್ಲಿ ಹಾದು ಹೋಗುವ ರೈಲು ಹಳಿಯ ಬಳಿಯಲ್ಲಿರುವ 4 ಬಾಟಲ್‌ ಪಾಮ್‌ ಮರ (ಅಲಂಕಾರಿಕ ಮರ)ಗಳು ಮಕ್ಕಳ ಕೈಗೆ ತಾಗುತ್ತಿದ್ದ ಪರಿಣಾಮ ರೈಲು ಓಡಾಟ ನಿಲುಗಡೆಗೊಳಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿಯವರ ಅನುಮತಿಯೊಂದಿಗೆ ಆ ಮರಗಳನ್ನು ಕಡಿಯಲಾಗಿದ್ದು, ಈ ಹಿನ್ನೆಲೆಯಲ್ಲಿ ಪುಟಾಣಿ ರೈಲು ಓಡಾಟವನ್ನು ಶುಕ್ರವಾರದಿಂದ ಪುನರಾರಂಭಿಸಲಾಯಿತು.

ಖುಷಿಯಿಂದ ರೈಲು ಸಂಚಾರ
‘ಪುಟಾಣಿ ರೈಲು ಓಡಾಟಕ್ಕೆ ಅಡ್ಡಿಯಾಗಿದ್ದ ಬಾಟಲ್‌ ಪಾಮ್‌ ಮರಗಳನ್ನು ಕಡಿಯಲಾಗಿದೆ. ಶುಕ್ರವಾರದಿಂದ ಪುಟಾಣಿ ರೈಲು ತನ್ನ ಓಡಾಟವನ್ನು ಪುನರಾರಂಭಗೊಳಿಸಿದೆ. ಮಕ್ಕಳೂ ಖುಷಿಯಿಂದಲೇ ರೈಲು ಸಂಚಾರ ನಡೆಸಿದರು. ಸದ್ಯಕ್ಕೆ ರೈಲಿನ ಪ್ರಯಾಣಕ್ಕೆ ದರ ನಿಗದಿ ಮಾಡಿಲ್ಲ’ ಎಂದು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ ತಿಳಿಸಿದ್ದಾರೆ.

ಸುದಿನ ವರದಿ ಮಾಡಿತ್ತು
ಪುಟಾಣಿ ರೈಲು ಓಡಾಟ ನಡೆಸದಿರುವ ಬಗ್ಗೆ ‘ಉದಯವಾಣಿ-ಸುದಿನ’ ಈ ಹಿಂದೆ ಹಲವು ಬಾರಿ ವರದಿ ಮಾಡಿತ್ತು. ರೈಲು ಓಡಾಟಕ್ಕೆ ಸಿದ್ಧವಾಗಿದ್ದರೂ ಅಡ್ಡಿಯಾಗುತ್ತಿರುವ ಬಾಟಲ್‌ ಪಾಮ್‌ ಮರಗಳನ್ನು ಕಡಿಯಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿರುವ ಬಗ್ಗೆಯೂ ‘ಪುಟಾಣಿ ರೈಲು ಓಡಾಟಕ್ಕೆ ಬಾಟಲ್‌ ಪಾಮ್‌ ಮರ ಅಡ್ಡಿ: ಕಡಿಯಲುಡಿಸಿ ಅನುಮತಿ; ಕಡಿದ ಮರಕ್ಕೆ ಬದಲಾಗಿ ಗಿಡ ನೆಡಲಿದೆ ತೋಟಗಾರಿಕಾ ಇಲಾಖೆ’ ಎಂಬ ತಲೆಬರಹದಡಿ ಜು. 23ರಂದು ವರದಿ ಮಾಡಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು. ಇದೀಗ ಶುಕ್ರವಾರ ಈ ರೈಲು ತನ್ನ ಅಧಿಕೃತ ಓಡಾಟ ಆರಂಭಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next