Advertisement

Tennis: ಅಂತಾರಾಷ್ಟ್ರೀಯ ಪುರುಷರ ಟೆನ್ನಿಸ್‌ಗೆ ಅಧಿಕೃತ ಚಾಲನೆ

07:02 PM Oct 17, 2023 | Pranav MS |

ಧಾರವಾಡ :ಧಾರವಾಡ ಜಿಲ್ಲಾ ಟೆನ್ನಿಸ್ ಅಸೋಷಿಯೇಷನ್ ಆತಿಥ್ಯದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಪುರುಷರ ಟೆನ್ನಿಸ್ ಪಂದ್ಯಾವಳಿಗೆ ಮಂಗಳವಾರ ಅಧಿಕೃತವಾಗಿ ಚಾಲನೆ ದೊರೆಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಭಾರತೀಯ ಕ್ರಿಕೇಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಾತನಾಡಿ, ನನಗೆ ಹೆಚ್ಚಾಗಿ ಕ್ರಿಕೆಟ್ ಉದ್ಘಾಟನೆಗೆ ಆಹ್ವಾನವಿರುತ್ತದೆ. ಕ್ರಿಕೆಟ್‌ಗೆ ವಿಶ್ವದಲ್ಲೆಡೆ ಹೆಚ್ಚು ಪ್ರೋತ್ಸಾಹ ದೊರೆತಂತೆ ಉಳಿದ ಆಟಗಳಿಗೂ ಹೆಚ್ಚೆಚ್ಚು ಉತ್ತೇಜನ, ಪ್ರೋತ್ಸಾಹ ದೊರೆಯಬೇಕೆಂಬ ಉದ್ದೇಶದಿಂದ ನಾನು ಟೆನ್ನಿಸ್ ಪಂದ್ಯಾವಳಿಗೆ ಬಂದಿರುವುದಾಗಿ ತಿಳಿಸಿದರು.
ಈ ಪುರುಷರ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿದೇಶಿ ಆಟಗಾರರು ಸಹ ಪಾಲ್ಗೊಳ್ಳುತ್ತಿರುವುದರಿಂದ ಅವರಿಗೆ ಸ್ಥಳೀಯ ಪ್ರದೇಶದ ಬಗ್ಗೆ ಪರಿಚಯವಾಗುತ್ತದೆ. ಈ ಬಾರಿ ಕೇವಲ ಪುರುಷರಿಗೆ ಪಂದ್ಯಾವಳಿ ಸೀಮಿತವಾಗಿದ್ದು, ಮುಂದಿನ ಬಾರಿ ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಟೆನ್ನಿಸ್ ಆಯೋಜಿಸಿದ್ದಲ್ಲಿ ಹೆಚ್ಚು ಆಕರ್ಷಣೀಯವಾಗಲಿದೆ. ಹೀಗಾಗಿ ಧಾರವಾಡದಲ್ಲಿ ಮಹಿಳಾ ಟೆನ್ನಿಸ್ ಪಂದ್ಯಾವಳಿಗಳು ಸಹ ಮುಂದಿನ ದಿನಮಾನಗಳಲ್ಲಿ ಆಯೋಜನೆಗೊಳ್ಳಲಿ ಎಂದರು.

ಈ ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಧಾರವಾಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಿರುವ ಮೊಹಮ್ಮದ್ ಅಜರುದ್ದೀನ್ ಪಾಲ್ಗೊಂಡಿರುವುದು ಗೌರವ ತಂದಿದೆ. ಪಂದ್ಯಾವಳಿಗಳನ್ನು ಅತ್ಯುತ್ತಮವಾಗಿ ಅಚ್ಚುಕಟ್ಟಾಗಿ ಆಯೋಜಿಸಿರುವ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ವಿಶೇಷ ಕಾಳಜಿ ಹಾಗೂ ಶ್ರಮ ವಹಿಸಿರುವುದು ಸರಕಾರಕ್ಕೆ ಗೌರವ ತಂದಿದೆ ಎಂದರು.

1937 ರಲ್ಲಿ ಆರಂಭಗೊಂಡಿರುವ ಈ ಟೆನ್ನಿಸ್ ಕೋರ್ಟ್‌ನಲ್ಲಿ 5 ಸೌರಚಾಲಿತ ಹಸಿರು ಕೋರ್ಟಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಪಂದ್ಯಾವಳಿಯು ಇಡೀ ಉತ್ತರ ಕರ್ನಾಟಕಕ್ಕೆ ಮನ್ನಣೆ ತಂದಿದೆ. ಸದ್ಯ ಕ್ರಿಕೆಟ್ ಹೆಚ್ಚಾಗಿ ಬೆಳೆದಿದೆ. ಉಳಿದ ಕ್ರೀಡೆಗಳಿಗೂ ಮನ್ನಣೆ ದೊರೆಯಬೇಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದ ಪಂದ್ಯಗಳು ಧಾರವಾಡದಲ್ಲಿ ನಡೆಯಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, 17 ವರ್ಷದ ನಂತರ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಜರುಗುತ್ತಿದ್ದು, 12 ದೇಶಗಳ 45 ಆಟಗಾರರು ಭಾಗವಹಿಸಲಿದ್ದಾರೆ. ಅಂತಿಮ ಡಬಲ್ಸ ಅ.21 ರಂದು ಹಾಗೂ ಸಿಂಗಲ್ಸ ಅ. 22 ರಂದು ಜರುಗಲಿವೆ ಎಂದರು.

Advertisement

ಈ ಸಂದರ್ಭದಲ್ಲಿ ಎಸ್‌ಪಿ ಡಾ.ಗೋಪಾಲ ಬ್ಯಾಕೋಡ, ಹುಡಾ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ ಸೇರಿದಂತೆ ಹಲವರು ಇದ್ದರು. ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಸಂದೀಪ ಬಣವಿ ವಂದಿಸಿದರು.

ಆಕಾಶದತ್ತ ಬಲೂನ್ ಹಾರಿ ಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಅತಿಥಿಯಾಗಿದ್ದ ಮೊಹಮ್ಮದ ಅಜರುದ್ದೀನ್ ಅವರು, ಟೆನಿಸ್ ಪಟುಗಳಿಗೆ ಹಾರೈಸಿದರು. ಇದಾದ ಬಳಿಕ ಸಚಿವ ಸಂತೋಷ ಲಾಡ್ ಸಾಂಕೇತಿಕವಾಗಿ ಟೆನಿಸ್ ಆಟವಾಡಿದರು. ಕೆಲ ಹೊತ್ತು ನಡೆದ ಸಚಿವ ಸಂತೋಷ ಲಾಡ್ ಹಾಗೂ ಮೊಹಮ್ಮದ ಅಜರುದ್ದೀನ್ ಮಧ್ಯದ ಪಂದ್ಯಾಟ ಗಮನ ಸೆಳೆಯಿತು. ಇನ್ನು ಮೊಹಮ್ಮದ್ ಅಜರುದ್ದೀನ್ ಅವರಿಗೆ ಧಾರವಾಡ ಪೇಡಾ ಕಾಣಿಕೆಯಾಗಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next